ನವ ದೆಹಲಿ: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ(Election Commission)ವು ಶುಕ್ರವಾರ ಸಂಜೆ ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ಎರಡೂ ರಾಜ್ಯಗಳಲ್ಲಿ ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣಾ ಸಿದ್ಧತೆಯಲ್ಲಿ ತೊಡಗಿವೆ. ಬಿಜೆಪಿ, ಕಾಂಗ್ರೆಸ್, ಆಪ್ ಸೇರಿದಂತೆ ಎಲ್ಲ ಪಕ್ಷಗಳು ತಮ್ಮದೇ ರಣತಂತ್ರಗಾರಿಕೆಯಲ್ಲಿ ತೊಡಗಿವೆ. ಆಯೋಗವು ದಿನಾಂಕವನ್ನು ಪ್ರಕಟಿಸುತ್ತಿದ್ದಂತೆ ಚುನಾವಣಾ ನೀತಿ ಸಂಹಿತೆ ಅನ್ವಯವಾಗಲಿದೆ
ಕೇಂದ್ರ ಚುನಾವಣಾ ಆಯೋಗವು ಶುಕ್ರವಾರ ಸಾಯಂಕಾಲದ ಹೊತ್ತಿಗೆ ಸುದ್ದಿಗೋಷ್ಠಿ ನಡೆಸಿ, ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆ ಇದೆ. ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿಯು ಸಂಜೆ 3 ಗಂಟೆಗೆ ನಿಗದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾಗಿರುವ ಗುಜರಾತ್‌ನಲ್ಲಿ ಈಗಾಗಲೇ ಚುನಾವಣಾ ಕಾವು ಜೋರಾಗಿದೆ. ಪ್ರಧಾನಿ ಹಾಗೂ ಗೃಹ ಮಂತ್ರಿಗಳು ಮೇಲಿಂದ ಮೇಲೆ ಈ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಅತ್ತ ಆಪ್ ಕೂಡ ಭರ್ಜರಿ ತಯಾರಿ ನಡೆಸಿದೆ. ಹಾಗೆ ನೋಡಿದರೆ, ಗುಜರಾತ್ ಎಲೆಕ್ಷನ್ ಸಿದ್ಧತೆಯಲ್ಲಿ ಕಾಂಗ್ರೆಸ್ ಪಕ್ಷವೇ ಹಿಂದೆ ಬಿದ್ದಿದೆ ಎಂದು ಹೇಳಬಹುದು.
ಇನ್ನೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯೂ ನಿಧಾನವಾಗಿ ರಂಗೇರುತ್ತಿದೆ. ಇಲ್ಲಿಯೂ ಬಿಜೆಪಿಯದ್ದೇ ಸರ್ಕಾರವಿದೆ. ಜೈರಾಮ್ ಠಾಕೂರ್ ಮುಖ್ಯಮಂತ್ರಿಗಳಾಗಿದ್ದಾರೆ. ಕಾಂಗ್ರೆಸ್ ಪ್ರಮುಖ ಪ್ರತಿಪಕ್ಷವಾಗಿದೆ. ಈ ಬಾರಿ ಆಪ್ ಕೂಡ ಹಿಮಾಚಲ ಪ್ರದೇಶದಲ್ಲಿ ಎಂಟ್ರಿ ಕೊಟ್ಟಿರುವುದರಿಂದ ಚುನಾವಣಾ ರಣಕಣ ಬದಲಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ | Political Party | 86 ಪಕ್ಷಗಳನ್ನು ಪಟ್ಟಿಯಿಂದ ಡಿಲಿಟ್ ಮಾಡಿದ ಚುನಾವಣಾ ಆಯೋಗ