ನವದೆಹಲಿ: ಕಳೆದ ಸೋಮವಾರ (ಮೇ 13) ನಡೆದ ಲೋಕಸಭೆ ಚುನಾವಣೆಯ (Lok Sabha Election 2024) ನಾಲ್ಕನೇ ಹಂತದ ಮತದಾನದ ಕುರಿತು ಚುನಾವಣೆ ಆಯೋಗವು (Election Commission) ಶುಕ್ರವಾರ ತಡರಾತ್ರಿ (ಮೇ 17) ಮಾಹಿತಿ ನೀಡಿದೆ. ನಾಲ್ಕನೇ ಹಂತದಲ್ಲಿ ಶೇ.69.16ರಷ್ಟು ಮತದಾನ ದಾಖಲಾಗಿದ್ದು, ಕಳೆದ ಮೂರು ಹಂತಗಳಿಗಿಂತ ಗರಿಷ್ಠ ಮತದಾನ (Voter Turnout) ದಾಖಲಾಗಿರುವುದು ಸಕಾರಾತ್ಮಕ ಸಂಗತಿಯಾಗಿದೆ. ಅಷ್ಟೇ ಅಲ್ಲ, ಬಿಹಾರದಲ್ಲಿ 2, 3, ಹಾಗೂ 4ನೇ ಹಂತದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ ಎಂಬುದಾಗಿ ಆಯೋಗವು ಮಹತ್ವದ ಮಾಹಿತಿ ಹಂಚಿಕೊಂಡಿದೆ.
ಮೊದಲ ಹಂತದಲ್ಲಿ ನಡೆದ ಮತದಾನ ಪ್ರಮಾಣವು ಶೇ.66.14ರಷ್ಟಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನ ದಾಖಲಾಗಿತ್ತು. ಮೂರನೇ ಹಂತದಲ್ಲಿ ಒಟ್ಟು ಶೇ.65.68ರಷ್ಟು ಮತದಾನ ದಾಖಲಾಗಿತ್ತು. ಮೂರೂ ಹಂತಗಳಲ್ಲಿ 2019ಕ್ಕಿಂತ ಕಡಿಮೆ ಮತದಾನ ದಾಖಲಾಗಿದ್ದು ಚರ್ಚೆಗೆ ಗ್ರಾಸವಾಗಿತ್ತು. ಆದರೀಗ, 4ನೇ ಹಂತದಲ್ಲಿ ಶೇ.69.16ರಷ್ಟು ಮತದಾನ ದಾಖಲಾಗಿದ್ದು, ಕಳೆದ ಬಾರಿಗಿಂತ ಕೇವಲ 0.40ರಷ್ಟು ಕಡಿಮೆಯಾಗಿದೆ. ಹಾಗಾಗಿ, ನಾಲ್ಕನೇ ಹಂತದ ಮತದಾನವು ಸಕಾರಾತ್ಮಕ ಬೆಳವಣಿಗೆ ಎಂದು ಹೇಳಲಾಗುತ್ತಿದೆ.
Voter turnout of 69.16% recorded in phase-4 of General Elections 2024
— Spokesperson ECI (@SpokespersonECI) May 17, 2024
Details :https://t.co/Uib1hEkvfy
ಬಿಹಾರ, ಜಾರ್ಖಂಡ್‌ನಲ್ಲಿ ಹೆಣ್ಮಕ್ಳೇ ಸ್ಟ್ರಾಂಗು!
ಸಾಮಾನ್ಯವಾಗಿ ಬಹುತೇಕ ಕ್ಷೇತ್ರಗಳಲ್ಲಿ ಮತದಾನ ಮಾಡುವವರು ಮಹಿಳೆಯರಿಗಿಂತ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಆದರೆ, ಎರಡು, ಮೂರು ಹಾಗೂ ನಾಲ್ಕನೇ ಹಂತದಲ್ಲಿ ಬಹಾರದ 15 ಹಾಗೂ ಜಾರ್ಖಂಡ್‌ನ 13 ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ ಎಂಬುದಾಗಿ ಚುನಾವಣೆ ಆಯೋಗ ತಿಳಿಸಿದೆ. ಹಾಗೆಯೇ, ಪಶ್ಚಿಮ ಬಂಗಾಳದ 6, ಬಿಹಾರ, ಆಂಧ್ರದಲ್ಲಿ ತಲಾ 5, ಒಡಿಶಾ 2, ತೆಲಂಗಾಣ ಹಾಗೂ ಮಧ್ಯಪ್ರದೇಶದಲ್ಲಿ ತಲಾ 1 ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಹಾಕಿದ್ದಾರೆ.
ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ 25, ಬಿಹಾರ 5, ಜಮ್ಮು-ಕಾಶ್ಮೀರ 1, ಜಾರ್ಖಂಡ್ 4, ಮಧ್ಯಪ್ರದೇಶ 8, ಮಹಾರಾಷ್ಟ್ರ 11, ಒಡಿಶಾ 4, ತೆಲಂಗಾಣ 17, ಉತ್ತರ ಪ್ರದೇಶ 13 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು ಐದನೇ ಹಂತದ ಮತದಾನವು ಮೇ 20ರಂದು ನಡೆಯಲಿದೆ. ಜೂನ್ 1ರಂದು ಕೊನೆಯ ಅಥವಾ ಏಳನೇ ಹಂತದ ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಇದುವರೆಗೆ 379 ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯಗೊಂಡಂತಾಗಿದೆ.
ಇದನ್ನೂ ಓದಿ: Lok Sabha Election: 28 ವರ್ಷಗಳಲ್ಲೇ ಶ್ರೀನಗರದಲ್ಲಿ ಅಧಿಕ ಮತದಾನ; 370ನೇ ವಿಧಿ ರದ್ದು ಎಫೆಕ್ಟ್?