ರಾಯ್ಪುರ: ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯ ಮತ ಎಣಿಕೆ (Chhattisgarh Assembly Election Result 2023) ಆರಂಭವಾಗಿದ್ದು, ಆರಂಭಿಕ ಟ್ರೆಂಡ್‌ಗಳ ಪ್ರಕಾರ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲದ ಹೋರಾಟ ನಡೆಸುತ್ತಿವೆ. ಮುಂಜಾನೆ ಎಂಟುವರೆಯ ಹೊತ್ತಿಗೆ ಎರಡೂ ಪಕ್ಷಗಳೂ ತಲಾ 30 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದವು.
ಛತ್ತೀಸ್‌ಗಢ ವಿಧಾನಸಭೆಯಲ್ಲಿ 90 ಸ್ಥಾನಗಳಿವೆ. ಉತ್ತರ ಭಾರತದ ಹಿಂದಿ ಬೆಲ್ಟ್‌ನ ಪ್ರಮುಖ ರಾಜ್ಯವಾಗಿರುವ ಛತ್ತೀಸ್‌ಗಢ ರಾಜ್ಯದಲ್ಲಿ (Chhattisgarh Assembly Election) ಕಾಂಗ್ರೆಸ್ ಪಕ್ಷವು (Congress Party) ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಎಕ್ಸಿಟ್ ಪೋಲ್‌ಗಳಲ್ಲಿ ಕಂಡುಬಂದಿತ್ತು. ಬಹುತೇಕ ಎಕ್ಸಿಟ್ ಪೋಲ್‌ಗಳು ಭಾರತೀಯ ಜನತಾ ಪಾರ್ಟಿಗಿಂತ ಆಡಳಿತಾರೂಢ ಕಾಂಗ್ರೆಸ್ ಮುಂದಿದೆ ಎಂಬುದನ್ನು ಸೂಚಿಸಿವೆ(Exit Polls Result 2023). ಆರಂಭಿಕ ಟ್ರೆಂಡ್‌ನಲ್ಲಿ ಅತಂತ್ರ ಪರಿಸ್ಥಿತಿ ಬರುವ ಸಾಧ್ಯತೆಯನ್ನು ಸೂಚಿಸುತ್ತಿದೆ.
ಛತ್ತೀಸ್‌ಗಢ ವಿಧಾನಸಭೆಗೆ ನವೆಂಬರ್ 7 ಮತ್ತು ನವೆಂಬರ್ 17 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ 48 ಸ್ಥಾನಗಳನ್ನು ಹೊಂದಿದ್ದರೆ, ಬಿಜೆಪಿ 15 ಸ್ಥಾನಗಳನ್ನು ಹೊಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಉತ್ತಮ ಅಂತರದಿಂದ ಸೋಲಿಸಿ 3 ಚುನಾವಣೆಗಳ ನಂತರ ಅಧಿಕಾರಕ್ಕೆ ಬಂದಿತು.
ಎಕ್ಸಿಟ್ ಪೋಲ್‌ಗಳ ಪ್ರಕಾರ, ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲಿದೆ. ಕಾಂಗ್ರೆಸ್ ಪಕ್ಷದ ನಾಯಕ, ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಚುನಾವಣೆಯ ನೇತೃತ್ವವನ್ನು ವಹಿಸಿಕೊಂಡಿದ್ದರು. ಛತ್ತೀಸ್‌ಗಢದಲ್ಲೂ ಉಚಿತ ಕೊಡುಗೆಗಳು ಪರಿಣಾಮ ಬೀರಿರುವ ಸಾಧ್ಯತೆಗಳಿವೆ. ಆದರೆ ಮೋದಿ, ಅಮಿತ ಶಾ ಸೇರಿದಂತೆ ಬಿಜೆಪಿ ನಾಯಕರು ಇಲ್ಲಿ ಭಾರೀ ಪ್ರಚಾರ ನಡೆಸಿ ಮತದಾರರನ್ನು ತಮ್ಮ ಕಡೆ ಸೆಳೆಯುವ ಪ್ರಯತ್ನ ನಡೆಸಿದ್ದರು.
2023 ರ ವಿಧಾನಸಭಾ ಚುನಾವಣೆಯಲ್ಲಿ, 18,833 ಮತಗಟ್ಟೆಗಳಲ್ಲಿ 81,41,624 ಪುರುಷರು, 81,72,171 ಮಹಿಳೆಯರು ಮತ್ತು 684 ತೃತೀಯ ಲಿಂಗಿಗಳು ಸೇರಿದಂತೆ 1,63,14,479 ಮತದಾರರು ಮತ ಚಲಾಯಿಸಿದದರು. ಕಾಂಗ್ರೆಸ್ ನ ಪ್ರಮುಖ ಅಭ್ಯರ್ಥಿಗಳಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಉಪಮುಖ್ಯಮಂತ್ರಿ ಟಿ.ಎಸ್.ಸಿಂಗ್ ದೇವ್ ಮತ್ತು ವಿಧಾನಸಭಾ ಸ್ಪೀಕರ್ ಚರಣ್ ದಾಸ್ ಮಹಂತ್ ಸೇರಿದ್ದಾರೆ.