Site icon Vistara News

Ladli Behna: ಚೌಹಾಣ್‌ ‘ಗ್ಯಾರಂಟಿ’ಗೆ ಜೈ ಎಂದ ಮಧ್ಯಪ್ರದೇಶ ಜನ;‌ ಏನಿದು ಲಾಡ್ಲಿ ಬೆಹ್ನಾ?

Shivraj Singh Chouhan

Election Results 2023: Ladli Behna Scheme powers BJP to sweep Madhya Pradesh

ಭೋಪಾಲ್‌: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ (Madhya Pradesh Assembly Election 2023) ಆಡಳಿತಾರೂಢ ಬಿಜೆಪಿಯು ಚುನಾವಣೆ ಸಮೀಕ್ಷೆ, ಪಕ್ಷದ ಮುಖಂಡರ ನಿರೀಕ್ಷೆಯನ್ನೂ ಮೀರಿ ಮುನ್ನಡೆ ಸಾಧಿಸಿದೆ. ಒಟ್ಟು 230 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು 150ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿದೆ. ಬಿಜೆಪಿಗೆ ಗೆಲುವಿಗೆ ಹಲವು ಕಾರಣಗಳನ್ನು ನೀಡಲಾಗುತ್ತಿದ್ದರೂ ಚುನಾವಣೆಗೆ ಮೊದಲು ಶಿವರಾಜ್‌ ಸಿಂಗ್‌ ಚೌಹಾಣ್‌ (Shivraj Singh Chouhan) ಅವರು ಜಾರಿಗೆ ತಂದ ಕೆಲ ಯೋಜನೆಗಳು ಗೆಲುವಿಗೆ (Madhya Pradesh Election Result 2023) ಮುಖ್ಯ ಕಾರಣ ಎಂದೇ ವಿಶ್ಲೇಷಿಸಲಾಗುತ್ತಿದೆ. ಅದರಲ್ಲೂ, ಲಾಡ್ಲಿ ಬೆಹನಾ (Ladli Behna) ಯೋಜನೆಯು ಮಧ್ಯಪ್ರದೇಶ ಹೆಣ್ಣುಮಕ್ಕಳ ಮನ ಗೆದ್ದಿತು ಎಂದು ಹೇಳಲಾಗುತ್ತಿದೆ.

ಏನಿದು ಲಾಡ್ಲಿ ಬೆಹನಾ ಸ್ಕೀಮ್?

ಮಧ್ಯಪ್ರದೇಶದಲ್ಲಿ ಬಡ ಹೆಣ್ಣುಮಕ್ಕಳಿಗೆ ಮಾಸಿಕ 1 ಸಾವಿರ ರೂ. ಸಹಾಯ ಧನ ನೀಡುವುದೇ ಲಾಡ್ಲಿ ಬೆಹನಾ ಯೋಜನೆಯಾಗಿದೆ. ಕಾಂಗ್ರೆಸ್‌ ಉಚಿತ ಕೊಡುಗೆಗಳ ಘೋಷಣೆಯನ್ನು ಮೊದಲೇ ಅರಿತಿದ್ದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು 2023ರ ಮಾರ್ಚ್‌ನಲ್ಲಿಯೇ ಲಾಡ್ಲಿ ಬೆಹನಾ ಯೋಜನೆಯನ್ನು ಜಾರಿಗೆ ತಂದರು. ಯೋಜನೆ ಜಾರಿಗೆ ತಂದು, ಬಡ ಹೆಣ್ಣುಮಕ್ಕಳ ಖಾತೆಗಳಿಗೆ ಮಾಸಿಕ 1 ಸಾವಿರ ರೂ. ಜಮೆ ಮಾಡಿಸಿದರು. ಆ ಮೂಲಕ ಸರ್ಕಾರವು ಮಹಿಳೆಯರ ಪರ ಇದೆ ಎಂಬ ಸಂದೇಶ ರವಾನಿಸಿದರು.

ಅಷ್ಟೇ ಅಲ್ಲ, ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ ಎನ್ನುವಾಗ ಲಾಡ್ಲಿ ಬೆಹನಾ ಯೋಜನೆ ಅಡಿಯಲ್ಲಿ ಹೆಣ್ಣುಮಕ್ಕಳಿಗೆ ನೀಡುವ ಮಾಸಿಕ 1 ಸಾವಿರ ರೂ. ಸಹಾಯಧನದ ಮೊತ್ತವನ್ನು 1,250 ರೂ.ಗೆ ಏರಿಸಿದರು. ಅಲ್ಲದೆ, ಹೆಣ್ಣುಮಕ್ಕಳಿಗೆ ಸರ್ಕಾರಿ ನೌಕರಿಯಲ್ಲಿ ಶೇ.35ರಷ್ಟು ಮೀಸಲಾತಿ ಘೋಷಿಸಿದರು. ಸಾವನ್‌ ತಿಂಗಳಲ್ಲಿ ಬಡವರಿಗೆ ಕೇವಲ 450 ರೂ.ಗೆ ಅಡುಗೆ ಅನಿಲ ಸಿಲಿಂಡರ್‌ ನೀಡಿದರು. ಇದರಿಂದಾಗಿ ಮಧ್ಯಪ್ರದೇಶದ ಮಹಿಳೆಯರು ಬಿಜೆಪಿ ಪರ ವಾಲಿದರು. ಕಾಂಗ್ರೆಸ್‌ ಗ್ಯಾರಂಟಿಗಳನ್ನೂ ಮೀರಿ ಅವರು ಬಿಜೆಪಿಗೆ ಮತ ಹಾಕಿದರು ಎಂದು ತಿಳಿದುಬಂದಿದೆ. ಇದರೊಂದಿಗೆ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಐದನೇ ಬಾರಿ ಸಿಎಂ ಆಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Telangana Election Results: ತೆಲಂಗಾಣದಲ್ಲೂ ಕಾಂಗ್ರೆಸ್‌ಗೆ ‘ಗ್ಯಾರಂಟಿ’ ವರದಾನ; ಗೆಲುವಿನ ಸೋಪಾನ

ಛತ್ತೀಸ್‌ಗಢ 11, ಮಧ್ಯಪ್ರದೇಶ 29, ಮಿಜೋರಾಂ 1, ರಾಜಸ್ಥಾನ 25 ಹಾಗೂ ತೆಲಂಗಾಣದ 17 ಲೋಕಸಭೆ ಕ್ಷೇತ್ರ ಸೇರಿ ಐದೂ ರಾಜ್ಯಗಳಲ್ಲಿ ಒಟ್ಟು 83 ಲೋಕಸಭೆ ಕ್ಷೇತ್ರಗಳಿವೆ. ಈ ರಾಜ್ಯಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ, ಆ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರ ಗೆಲ್ಲಲು ಸಾಧ್ಯವಾಗಲಿದೆ. ಹಾಗೆಯೇ, ಜನರ ಒಲವು ಯಾವ ಪಕ್ಷದ ಕಡೆ ಇದೆ ಎಂಬುದರ ಮುನ್ಸೂಚನೆಯು ವಿಧಾನಸಭೆ ಚುನಾವಣೆಯಲ್ಲಿಯೇ ತಿಳಿಯಲಿದೆ. ಲೋಕಸಭೆ ಚುನಾವಣೆಯ ಪ್ರಚಾರಕ್ಕೂ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಮುನ್ನುಡಿ ಬರೆಯಲಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: https://vistaranews.com/tag/assembly-election-2023

Exit mobile version