ನವದೆಹಲಿ: ಚುನಾವಣಾ ಫಲಿತಾಂಶವು (election result 2023) ಪ್ರಕಟವಾಗಿ ಒಂದು ವಾರವಾಗುತ್ತ ಬಂದರೂ ಭಾರತೀಯ ಜನತಾ ಪಾರ್ಟಿಗೆ (BJP Party) ರಾಜಸ್ಥಾನ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಮುಖ್ಯಮಂತ್ರಿಯನ್ನು (Chief Minister) ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಮುಖ್ಯಮಂತ್ರಿಗಳ ಆಯ್ಕೆಯನ್ನು ಸುಗಮಗೊಳಿಸಲು ಪಾರ್ಟಿಯು ವೀಕ್ಷಕರನ್ನು ನೇಮಕ ಮಾಡಿದೆ. ಅವರು ನೀಡುವ ವರದಿಯನ್ನಾಧರಿಸಿ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿಗಳನ್ನು ಘೋಷಣೆ ಮಾಡಲಿದೆ. ಈ ಮಧ್ಯೆ, ತೆಲಂಗಾಣ ಗೆದ್ದ ಕಾಂಗ್ರೆಸ್‌ನಿಂದ (Congress Party) ರೇವಂತ್ ರೆಡ್ಡಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಶುಕ್ರವಾರ, ಕೇಸರಿ ಪಕ್ಷವು ಮೂರು ರಾಜ್ಯಗಳಿಗೆ ಒಟ್ಟು ಒಂಬತ್ತು ವೀಕ್ಷಕರನ್ನು ಘೋಷಣೆ ಮಾಡಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯಸಭಾ ಸಂಸದೆ ಸರೋಜ್ ಪಾಂಡೆ ಮತ್ತು ಬಿಜೆಪಿಯ ಹಿರಿಯ ನಾಯಕ ವಿನೋದ್ ತಾವ್ಡೆ ಅವರನ್ನು ರಾಜಸ್ಥಾನದ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಮತ್ತೊಂದೆಡೆ, ಮನೋಹರ್ ಲಾಲ್ ಖಟ್ಟರ್, ಡಾ ಕೆ ಲಕ್ಷ್ಮಣ್ ಮತ್ತು ಆಶಾ ಲಾಕ್ರಾ ಮಧ್ಯಪ್ರದೇಶದ ವೀಕ್ಷಕರಾಗಿದ್ದಾರೆ. ಛತ್ತೀಸ್‌ಗಢದ ವೀಕ್ಷಕರಾಗಿ ಭಾರತದ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ, ಅಸ್ಸಾಂನ ಮಾಜಿ ಸಿಎಂ ಸರ್ಬಾನಂದ ಸೋನೋವಾಲ್ ಮತ್ತು ಮಾಜಿ ರಾಜ್ಯಸಭಾ ಸಂಸದ ದುಶ್ಯಂತ್ ಕುಮಾರ್ ಗೌತಮ್ ತೆರಳಿದ್ದಾರೆ.
ಮಾಧ್ಯಮಗಳ ವರದಿ ಪ್ರಕಾರ, ಭಾರತೀಯ ಜನತಾ ಪಾರ್ಟಿಯು ಈ ಮೂರು ರಾಜ್ಯಗಳಲ್ಲಿ ಹೊಸಬರನ್ನು ಮುಖ್ಯಮಂತ್ರಿಗಳನ್ನಾಗಿ ನೇಮಕ ಮಾಡಲಿದೆ. ನಿನ್ನೆಯಷ್ಟೇ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರು, ಪಕ್ಷವು ಹೊಸದಾಗಿ ಚುನಾಯಿತರಾದ ಶಾಸಕರಲ್ಲಿ ನಾಯಕರನ್ನು ಆಯ್ಕೆ ಮಾಡುತ್ತದೆಯೇ ಅಥವಾ ಹೊರಗಿನವರನ್ನು ಕರೆತರುತ್ತದೆಯೇ ಎಂದು ಹೇಳಿದರು. ಮೂರು ರಾಜ್ಯಗಳ ಮುಖ್ಯಂತ್ರಿಗಳ ಆಯ್ಕೆಯು ಡಿಸೆಂಬರ್ 10ಕ್ಕೆ ಪೂರ್ಣಗೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢ ಮುಖ್ಯಮಂತ್ರಿಗಳ ಆಯ್ಕೆಯನ್ನು ಬಹಳ ಮುಕ್ತವಾಗಿಟ್ಟಿರುವ ಬಿಜೆಪಿ, ಸರ್ವಾನುಮತದ ಆಯ್ಕೆಗೆ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಸಂಸತ್ತಿನ ಭವನದ ಸಂಕೀರ್ಣದಲ್ಲಿರುವ ಬಾಲಯೋಗಿ ಸಭಾಂಗಣದಲ್ಲಿ ನಿರ್ಣಾಯಕ ಸಂಸದೀಯ ಪಕ್ಷದ ಸಭೆಗೆ ಸೇರಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರಾದ ಎಸ್ ಜೈಶಂಕರ್, ಅಮಿತ್ ಶಾ ಮತ್ತು ಅಶ್ವನಿ ವೈಶಾನವ್ ಸೇರಿದಂತೆ ಬಿಜೆಪಿಯ ಇತರ ಸಂಸದರು ಸಭೆಯಲ್ಲಿ ಭಾಗವಹಿಸಿದ್ದರು.
ಇತ್ತೀಚೆಗಷ್ಟೇ ಮುಕ್ತಾಯವಾದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯು ಮಧ್ಯ ಪ್ರದೇಶದಲ್ಲಿ 163 ಸೀಟುಗಳನ್ನು ಗೆಲ್ಲುವ ಮೂಲಕ ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಂಡಿತ್ತು. ಕಾಂಗ್ರೆಸ್ 66 ಸ್ಥಾನಗಳಿಗೆ ತೃಪತ್ತಿಪಡಬೇಕಾಯಿತು. 199 ಸ್ಥಾನಗಳಿರುವ ರಾಜಸ್ಥಾನದಲ್ಲಿ ಬಿಜೆಪಿ 115 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಕಾಂಗ್ರೆಸ್ ಕೇವಲ 69 ಸ್ಥಾನಗಳನ್ನು ಗೆದ್ದು ಅಧಿಕಾರವನ್ನು ಕಳೆದುಕೊಂಡಿದೆ. ಇನ್ನು ಛತ್ತೀಸ್‌ಗಢದಲ್ಲಿ ಆಡಿಳಿತಾರೂಢ ಕಾಂಗ್ರೆಸ್ 35 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 54 ಸ್ಥಾನ ಗೆದ್ದು ಅಧಿಕಾರವನ್ನು ಗಳಿಸಿದೆ.
ಈ ಸುದ್ದಿಯನ್ನೂ ಓದಿ: Revanth Reddy: ರೇವಂತ್ ರೆಡ್ಡಿ ತೆಲಂಗಾಣ ನೂತನ ಮುಖ್ಯಮಂತ್ರಿ; ಕಾಂಗ್ರೆಸ್ ಘೋಷಣೆ