Site icon Vistara News

New Year 2024: ಇದು ಚುನಾವಣಾ ವರ್ಷ; ಮೋದಿ, ಬೈಡೆನ್‌ಗೆ ಸಿಗುತ್ತಾ ಮತ್ತೆ ಪವರ್?

Elections battles in new year 2024

2023ರ ವಿದಾಯಕ್ಕೆ (Year Ender) ದಿನಗಣನೆ ಶುರುವಾಗಿ. 2024 ಹೊಸ ವರ್ಷವನ್ನು (New Year 2024) ಸ್ವಾಗತಿಸಲು ಎಲ್ಲರೂ ಸಜ್ಜಾಗಿದ್ದಾರೆ. ಕಳೆದು ಹೋಗುತ್ತಿರುವ ವರ್ಷದಲ್ಲಿ ಏನೆಲ್ಲಾ ಆಯ್ತು ಎಂಬುದು ನಮ್ಮ ಮುಂದಿದೆ. ಹಾಗೆಯೇ ಹೊಸ ವರ್ಷದ ಒಡಲಲ್ಲಿ ಏನೆಲ್ಲ ಇದೆ ಎಂದು ಊಹೆ ಮಾಡಬಹುದು. ಚುನಾವಣೆಗಳ (elections) ವಿಷಯಕ್ಕೆ ಸಂಬಂಧಿಸಿದಂತೆ 2024ರ ಪ್ರಮುಖ ವರ್ಷವಾಗಲಿದೆ. ಯಾಕೆಂದರೆ, ಭಾರತದಲ್ಲಿ ಸಾರ್ವತ್ರಿಕ ಚುನಾವಣೆ (Lok Sabha Election) ನಡೆದರೆ, ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ (US President election) ನಡೆಯಲಿದೆ. ಹಾಗಾಗಿ, 2024 ವರ್ಷವನ್ನು ಚುನಾವಣೆಯ ವರ್ಷವೆಂದೂ ಕರೆದರೂ ತಪ್ಪಾಗಲ್ಲ. ಯಾವೆಲ್ಲ ಚುನಾವಣೆಗಳಿವೆ ಎದುರು ನೋಡೋಣ ಬನ್ನಿ.

ಚುನಾವಣೆಗಳ ಪರ್ವ ಈ ವರ್ಷ

ಭಾರತ ಮಾತ್ರವಲ್ಲದೇ ಜಾಗತಿಕವಾಗಿ 2024 ಚುನಾವಣೆಯ ದೃಷ್ಟಿಯಿಂದ ಮಹತ್ವದ ವರ್ಷವಾಗಿದೆ. ಭಾರತದಲ್ಲಿ ಲೋಕಸಭೆ ಅರ್ಥಾತ್ ಸಾರ್ವತ್ರಿಕ ಚುನಾವಣೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆದರೆ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ, ಸಿಕ್ಕಿಮ್, ಜಮ್ಮು ಮತ್ತು ಕಾಶ್ಮೀರ, ಹರ್ಯಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ. ಅಮೆರಿಕ, ಪಾಕಿಸ್ತಾನ ಮತ್ತು ರಷ್ಯಾದಲ್ಲೂ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೂರನೇ ಬಾರಿಗೆ ಅಧಿಕಾಕ್ಕೇರುವ ಪ್ರಯತ್ನ ಮಾಡುತ್ತಿದೆ. 2014ರಿಂದ ಸತತ ಅಧಿಕಾರದಲ್ಲಿರುವ ಮೋದಿ ಸರ್ಕಾರವು 2024ರ ಚುನಾವಣೆಯನ್ನು ಗೆಲ್ಲುವ ಅಪರಮಿತ ವಿಶ್ವಾಸವನ್ನು ಹೊಂದಿದೆ. ಬಿಜೆಪಿಯನ್ನು ಈ ಬಾರಿ ಸೋಲಿಸಬೇಕು ಎಂದು ಪಣತೊಟ್ಟಿರುವ ಪ್ರತಿ ಪಕ್ಷಗಳು ಇಂಡಿಯಾ ಕೂಟ ವೇದಿಕೆಯಡಿ ಒಂದಾಗಿವೆ. ಈ ಕೂಟದಲ್ಲಿ ಕಾಂಗ್ರೆಸ್, ಸಂಯುಕ್ತ ಜನತಾ ದಳ, ಶಿವಸೇನೆ (ಯುಬಿಟಿ), ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ಸಮಾಜವಾದಿ ಪಕ್ಷ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಆಮ್ ಆದ್ಮಿ ಪಕ್ಷ ಮತ್ತು ರಾಷ್ಟ್ರೀಯ ಜನತಾ ದಳ ಸೇರಿ 26 ಪಕ್ಷಗಳಿವೆ. ಎನ್‌ಡಿಎ ಕೂಟದಲ್ಲೂ ಕೂಡ 25ಕ್ಕೂ ಅಧಿಕ ಪಕ್ಷಗಳಿವೆ.

ಪಾಕಿಸ್ತಾನದಲ್ಲೂ ಸಾರ್ವತ್ರಿಕ ಚುನಾವಣೆ

ನಮ್ಮ ನೆರೆಯ ಪಾಕಿಸ್ತಾನದಲ್ಲೂ ಸಾರ್ವತ್ರಿಕ ಚುನಾವಣೆ ನಡೆಯಲಿದೆ. 2024ರ ಫೆಬ್ರವರಿ 8 ಚುನಾವಣೆಗೆ ದಿನಾಂಕವನ್ನು ಫಿಕ್ಸ್ ಮಾಡಲಾಗಿದೆ. ಗೋಹಲ್ ಅಲಿ ಖಾನ್ ನೇತೃತ್ವದ ಪಿಟಿಐ, ನವಾಜ್ ಷರೀಫ್ ಅವರ ಪಿಎಂಎಲ್(ಎನ್), ಬಿಲಾವಲ್ ಭುಟ್ಟೋ ಜರ್ದಾರಿ ಅವರ ಪಿಪಿಪಿ ಈ ಚುನಾವಣೆಯಲ್ಲಿ ಸೆಣೆಸಾಡಲಿರುವ ಪ್ರಮುಖ ರಾಜಕೀಯ ಪಕ್ಷಗಳಾಗಿವೆ. ಈ ಹಿಂದೆ ಪ್ರಧಾನಿಯಾಗಿದ್ದ ಕ್ರಿಕೆಟಿಗ, ಪಿಟಿಐ ನಾಯಕ ಇಮ್ರಾನ್ ಖಾನ್ ಸದ್ಯ ಜೈಲಿನಲ್ಲಿದ್ದಾರೆ. ಅವರು ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸುವಾದಿಗ ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆ

2024ರಲ್ಲಿ ಜಗತ್ತು ಎದುರು ನೋಡುತ್ತಿರುವ ಮತ್ತೊಂದು ಚುನಾವಣೆ- ಅಮೆರಿಕ ಅಧ್ಯಕ್ಷೀಯ ಚುನಾವಣೆ. ಆಡಳಿತಾರೂಢ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷದ ನಡುವೆ ತೀವ್ರ ಹಣಾಹಣಿ ನಡೆಯುವ ಸಾಧ್ಯತೆ. ಮತ್ತೊಮ್ಮೆ ಅಧ್ಯಕ್ಷ ಗಾದೆಗೇರುವ ಕನಸು ಕಾಣುತ್ತಿರುವ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗುವುದೇ ಡೌಟು. ಯಾಕೆಂದರೆ, ಅವರು ನಾನಾ ಕಾನೂನು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಒಂದೊಮ್ಮೆ, ತಮ್ಮ ಮುಂದಿರುವ ಎಲ್ಲ ಕಾನೂನು ಅಡ್ಡಿಗಳನ್ನು ಮೀರಿ, ಸ್ಪರ್ಧಿಸಿ ಗೆದ್ದರೆ ಇತಿಹಾಸ ಸೃಷ್ಟಿಯಾಗಲಿದೆ. ಸತತವಲ್ಲದ ಎರಡು ಅವಧಿಗೆ ಆಯ್ಕೆಯಾದ ಗ್ರೋವರ್ ಕ್ಲೀವ್‌ಲ್ಯಾಂಡ್‌ ಬಳಿಕ ಅಧ್ಯಕ್ಷರಾದ ಎಂಬ ಕೀರ್ತಿ ಡೋನಾಲ್ಡ್ ಟ್ರಂಪ್ ಅವರಿಗೆ ಸಲ್ಲಲಿದೆ.

ನಿರೀಕ್ಷೆಯಂತೆ, ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಎರಡನೇ ಅವಧಿಗೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯನ್ನು ಎದುರಿಸಲಿದ್ದಾರೆ. ಹಾಗಾಗಿ, 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ.

ರಷ್ಯಾದಲ್ಲೂ ಚುನಾವಣೆ

ಉಕ್ರೇನ್‌ ಜತೆ ಯುದ್ಧದಲ್ಲಿ ನಿರತರಾಗಿರುವ ರಷ್ಯಾದಲ್ಲೂ ಚುನಾವಣೆ ನಡೆಯಲಿದೆ. ಆದರೆ, ಚುನಾವಣೆ ಫಲಿತಾಂಶ ಏನಾಗಲಿದೆ ಎಂಬುದನ್ನು ಈಗಲೇ ಊಹಿಸಬಹುದು. 1999ರಿಂದಲೂ ರಷ್ಯಾದ ಚುಕ್ಕಾಣಿಯನ್ನು ಹಿಡಿದಿರುವ ವ್ಲಾದಿಮಿರ್ ಪುಟಿನ್ ಅವರ ನಾಯಕತ್ವ ಈ ಚುನಾವಣೆಯಲ್ಲೂ ಮುಂದುವರಿಯಬಹುದು. ಪ್ರಧಾನಿಯಾಗುವ ಮೂಲಕ ಅಧಿಕಾರಕ್ಕೇರಿದ ಪುಟಿನ್ ಈಗ ಅಧ್ಯಕ್ಷರಾಗಿ ಎಲ್ಲ ಅಧಿಕಾರಗಳನ್ನು ತಮ್ಮ ಬಳಿಗೆ ಇಟ್ಟುಕೊಂಡಿದ್ದಾರೆ. ಹಾಗಾಗಿ, 2024ರ ಚುನಾವಣೆಯ ಫಲಿತಾಂಶದಲ್ಲಿ ಅಂಥ ವ್ಯತ್ಯಾಸಗಳೇನೂ ನಿರೀಕ್ಷೆ ಮಾಡುವ ಹಾಗಿಲ್ಲ.

ಈ ಸುದ್ದಿಯನ್ನೂ ಓದಿ: Year Ender 2023 : ಒಂದು ವರ್ಷದಲ್ಲಿ ಜಗತ್ತನ್ನು ಆಳಿದ 5 ಎಲೆಕ್ಟ್ರಿಕ್ ಕಾರುಗಳ ವಿವರ ಇಲ್ಲಿದೆ

Exit mobile version