ನವ ದೆಹಲಿ: 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಂತ ಹೀನಾಯವಾಗಿ ಸೋತ ನಂತರ, ಅಂದರೆ ಲೋಕಸಭೆಯ ಒಟ್ಟಾರೆ 543 ಕ್ಷೇತ್ರಗಳಲ್ಲಿ, 52ನ್ನು ಮಾತ್ರ ಗೆದ್ದ ನಂತರ, ಪಕ್ಷದ ಅಧ್ಯಕ್ಷನ ಸ್ಥಾನ (Congress President)ಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದರು. ‘ಸೋಲಿನ ನೈತಿಕ ಹೊಣೆಯನ್ನು ನಾನೇ ಹೊರುತ್ತೇನೆ’ ಎಂದು ಹೇಳಿ ಜವಾಬ್ದಾರಿಯಿಂದ ನುಣುಚಿಕೊಂಡರು. ಆಗಿನಿಂದಲೂ ಅವರ ತಾಯಿ ಸೋನಿಯಾ ಗಾಂಧಿ ಮಧ್ಯಂತರ ಅಧ್ಯಕ್ಷೆಯಾಗಿದ್ದಾರೆ. ಆದರೆ ಶೀಘ್ರವೇ ಪಕ್ಷಕ್ಕೆ ಹೊಸ ನಾಯಕತ್ವ ಬೇಕು. 2024ರ ಚುನಾವಣೆಯೊಳಗೆ ನೂತನ ಅಧ್ಯಕ್ಷರ ಆಯ್ಕೆಯಾಗಬೇಕು ಎಂದು ಪಕ್ಷದೊಳಗೇ ಆಗ್ರಹ ಹೆಚ್ಚಾಗಿದೆ. ಸೋನಿಯಾ ಗಾಂಧಿ ಆರೋಗ್ಯವೂ ಇತ್ತೀಚೆಗೆ ಸರಿ ಇಲ್ಲದ ಕಾರಣ ಇದು ಅನಿವಾರ್ಯವೂ ಆಗಿದೆ.
ಇಷ್ಟೆಲ್ಲದರ ಮಧ್ಯೆ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಗಸ್ಟ್ 21ರಿಂದ ಚುನಾವಣೆ ನಡೆಯಲಿದೆ ಎಂದು ಹೇಳಲಾಗಿದ್ದರೂ ಸೋನಿಯಾ ಗಾಂಧಿಯಾಗಲೀ, ರಾಹುಲ್ ಗಾಂಧಿಯಾಗಲೀ ಈ ಬಗ್ಗೆ ಏನೂ ಹೇಳಿಕೆ ನೀಡುತ್ತಿಲ್ಲ. ಮತ್ತೊಮ್ಮೆ ನೀವೇ ಪಕ್ಷದ ಅಧ್ಯಕ್ಷರಾಗಿ ಎಂದು ಹಲವು ನಾಯಕರು ಒತ್ತಾಯ ಮಾಡುತ್ತಿದ್ದರೂ ರಾಹುಲ್ ಗಾಂಧಿ ಏನೂ ಉತ್ತರ ನೀಡುತ್ತಿಲ್ಲ ಎನ್ನಲಾಗಿದೆ. ಕಾಂಗ್ರೆಸ್ನಲ್ಲಿ ಇನ್ನೂ ಕೆಲವು ನಾಯಕರು, ಈ ಸಲ ಗಾಂಧಿ ಕುಟುಂಬದ ಹೊರತಾಗಿ ಅಧ್ಯಕ್ಷರ ಆಯ್ಕೆಯಾಗಬೇಕು ಎಂಬ ಆಗ್ರಹವನ್ನೂ ಮುಂದಿಡುತ್ತಿದ್ದಾರೆ.
ಸೋನಿಯಾ ಗಾಂಧಿ ಪಕ್ಷದ ಹೊಣೆಯನ್ನು ಹೊತ್ತ ಬಳಿಕವೂ ಕಾಂಗ್ರೆಸ್ಗೆ ಎದುರಾಗಿದ್ದು ಸಾಲುಸಾಲು ಸೋಲುಗಳು. ಇತ್ತೀಚೆಗೆ ನಡೆದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಸೇರಿ, 2019ರ ಬಳಿಕ ನಡೆದ ಎಲ್ಲ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಸೋಲನುಭವಿಸಿದೆ. ಅದರಲ್ಲೂ ಈ ಸಲ ಫೆಬ್ರವರಿಯಲ್ಲಿ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ, ಪಂಜಾಬ್ ಕೂಡ ಕೈತಪ್ಪಿ ಹೋದ ನಂತರ ಪಕ್ಷದಲ್ಲಿ ಮತ್ತೊಮ್ಮೆ ಪ್ರಬಲ ನಾಯಕತ್ವದ ಕೂಗು ಕೇಳಿಬಂದಿತ್ತು. ಮಾರ್ಚ್ನಲ್ಲಿ ಕಾಂಗ್ರೆಸ್ ಪ್ರಮುಖರೊಂದಿಗೆ ಸಭೆ ನಡೆಸಿದ್ದ ಸೋನಿಯಾ ಗಾಂಧಿ, ‘ನಾನು, ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ನಮ್ಮ ನಮ್ಮ ಸ್ಥಾನಕ್ಕೆ ರಾಜೀನಾಮೆ’ ನೀಡಲೂ ಸಿದ್ಧರಿದ್ದೇವೆ ಎಂದೂ ತಿಳಿಸಿದ್ದರು. ಹಾಗೇ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶೀಘ್ರವೇ ಚುನಾವಣೆಯಾಗಬೇಕು ಎಂಬ ತೀರ್ಮಾನ ಬಂದಿತ್ತಾದರೂ, ಯಾರು ಸ್ಪರ್ಧಿಸಬೇಕು ಎಂಬ ವಿಷಯದ ಕುರಿತು ಇದುವರೆಗೂ ಪಕ್ಷದಲ್ಲಿ ಒಮ್ಮತ ಮೂಡಿಲ್ಲ. ಚುನಾವಣೆ ಸಮೀಪಿಸುತ್ತಿದ್ದು, ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದ ಬಳಿಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮತ್ತು ಇತರ ಸಾಂಸ್ಥಿಕ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಇದನ್ನೂ ಓದಿ: ನನ್ನ ಬಳಿ ನೀವು ಮಾತಾಡಲೇಬೇಡಿ; ಸ್ಮೃತಿ ಇರಾನಿ ಮುಖಕ್ಕೆ ಹೊಡೆದಂತೆ ಉತ್ತರಿಸಿದ ಸೋನಿಯಾ ಗಾಂಧಿ