Site icon Vistara News

Electoral Bonds: ಇದಿಷ್ಟೇ ಅಲ್ಲ, 3 ದಿನದಲ್ಲಿ ಎಲ್ಲ ಮಾಹಿತಿ ಬೇಕು; ಎಸ್‌ಬಿಐಗೆ ಮತ್ತೆ ಸುಪ್ರೀಂ ಚಾಟಿ

Supreme Court

Electoral Bonds: Supreme Court pulls up SBI, asks it to disclose all information

ನವದೆಹಲಿ: ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡುವ ಚುನಾವಣಾ ಬಾಂಡ್‌ಗಳ (Electoral Bonds) ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಸ್ಟೇಟ್‌ ಬ್ಯಾಂಕ್‌ಗೆ (SBI) ಮತ್ತೆ ಹಿನ್ನಡೆಯಾಗಿದೆ. ಚುನಾವಣಾ ಬಾಂಡ್‌ಗಳ ಯುನಿಕ್‌ ನಂಬರ್‌ (Unique Number) ಸೇರಿ ಎಲ್ಲ ಮಾಹಿತಿಯನ್ನೂ ಎಸ್‌ಬಿಐ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್‌ (Supreme Court) ಸೋಮವಾರ (ಮಾರ್ಚ್‌ 18) ಆದೇಶಿಸಿದೆ. “ಮಾರ್ಚ್‌ 21ರ ಸಂಜೆ 5 ಗಂಟೆಯೊಳಗೆ ಎಲ್ಲ ಮಾಹಿತಿ ಇರುವ ಅಫಿಡವಿಟ್‌ಅನ್ನು ಎಸ್‌ಬಿಐ ಸಲ್ಲಿಸಬೇಕು” ಎಂದು ಸೂಚಿಸಿದೆ.

“ಎಲೆಕ್ಟೋರಲ್‌ ಬಾಂಡ್‌ಗಳ ಕುರಿತು ಎಲ್ಲ ಮಾಹಿತಿಯನ್ನು ಎಸ್‌ಬಿಐ ಒದಗಿಸಬೇಕು. ನಿಯಮಿತ ಮಾಹಿತಿಯನ್ನಷ್ಟೇ ಎಸ್‌ಬಿಐ ಒದಗಿಸಿದೆ. ಆದರೆ, ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿ ಇರುವ ಅಫಿಡವಿಟ್‌ಅನ್ನು ಎಸ್‌ಬಿಐ ನೀಡಬೇಕು. ಆಯ್ಕೆ ಮಾಡಲಾದ ಮಾಹಿತಿಯನ್ನಷ್ಟೇ ನೀಡಿದರೆ ಆಗುವುದಿಲ್ಲ. ಯುನಿಕ್‌ ನಂಬರ್‌ ಸೇರಿ ಸಮಗ್ರ ಮಾಹಿತಿಯನ್ನು ಒದಗಿಸಬೇಕು” ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಇದುವರೆಗೆ ಚುನಾವಣೆ ಆಯೋಗಕ್ಕೆ ಎಸ್‌ಬಿಐ ಎರಡು ಪಟ್ಟಿ ನೀಡಿದೆ. ಈಗ ಎಲ್ಲ ಮಾಹಿತಿ ಒದಗಿಸಬೇಕು ಎಂದು ಎಸ್‌ಬಿಐಗೆ ಕೋರ್ಟ್‌ ಆದೇಶಿಸಿದೆ.

ಏನಿದು ಯುನಿಕ್‌ ನಂಬರ್?‌

ಚುನಾವಣಾ ಬಾಂಡ್‌ಗಳಿಗೆ ವಿಶೇಷ ಗುರುತಿನ ಸಂಖ್ಯೆ ಇರುತ್ತದೆ. ಇದನ್ನೇ ಯುನಿಕ್‌ ನಂಬರ್‌ (Unique Number) ಎಂದು ಕರೆಯುತ್ತಾರೆ. ಯುನಿಕ್‌ ನಂಬರ್‌ನಿಂದ ಬಾಂಡ್‌ ಖರೀದಿಸಿದ ದೇಣಿಗೆದಾರರು, ಅವರು ನೀಡಿದ ಮೊತ್ತ ಹಾಗೂ ರಾಜಕೀಯ ಪಕ್ಷಗಳು ಸ್ವೀಕರಿಸಿದ ಹಣದ ಬಗ್ಗೆ ನಿಖರ ಮಾಹಿತಿ ದೊರೆಯುತ್ತದೆ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕಾಗಿಯೇ ಎಸ್‌ಬಿಐಗೆ ಯುನಿಕ್‌ ನಂಬರ್‌ ಸೇರಿ ಎಲ್ಲ ಮಾಹಿತಿ ಒದಗಿಸಬೇಕು ಸುಪ್ರೀಂ ಕೋರ್ಟ್‌ ಅದೇಶಿಸಿದೆ.

ಹೊಸ ಮಾಹಿತಿಯಲ್ಲಿ ಏನಿತ್ತು?

ಎಲ್ಲ ಮಾಹಿತಿ ನೀಡಬೇಕು ಎಂದು ಇದಕ್ಕೂ ಮೊದಲು ಕೂಡ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಅದರಂತೆ, ಎಸ್‌ಬಿಐ ಮಾಹಿತಿ ನೀಡಿತ್ತು. 2019ಕ್ಕಿಂತ ಮೊದಲು ಖರೀದಿಯಾದ ಬಾಂಡ್‌ಗಳ ಕುರಿತು ಮಾಹಿತಿ ನೀಡಿತ್ತು. ಚುನಾವಣಾ ಬಾಂಡ್‌ಗಳು ಮಾರಾಟವಾದ ದಿನಾಂಕ, ಬಾಂಡ್‌ಗಳ ಸಂಖ್ಯೆ, ಯಾವ ಬ್ರ್ಯಾಂಚ್‌ ಮೂಲಕ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದೆ, ಹಣ ಕ್ರೆಡಿಟ್‌ ಆದ ದಿನಾಂಕದ ಮಾಹಿತಿಯಷ್ಟೇ ಒಳಗೊಂಡಿತ್ತೇ ಹೊರತು, ಚುನಾವಣಾ ಬಾಂಡ್‌ಗಳ ಯುನಿಕ್‌ ನಂಬರ್‌ ಒದಗಿಸಿರಲಿಲ್ಲ. ಹಾಗಾಗಿ, ಈಗ ಎಸ್‌ಬಿಐಗೆ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದೆ.

ಇದನ್ನೂ ಓದಿ: Electoral Bonds: ಚುನಾವಣಾ ಬಾಂಡ್‌ಗಳ ಕುರಿತು ಹೆಚ್ಚಿನ ಮಾಹಿತಿ ಬಹಿರಂಗ; ಇದರಲ್ಲಿ ಏನಿದೆ?‌

ಫೆಬ್ರವರಿ 15ರಂದು ನೀಡಿದ ಐತಿಹಾಸಿಕ ತೀರ್ಪಿನಲ್ಲಿ, ಐವರ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಅನಾಮಧೇಯ ರಾಜಕೀಯ ಧನಸಹಾಯವನ್ನು ಅನುಮತಿಸುವ ಕೇಂದ್ರದ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿತ್ತು. ಇದನ್ನು “ಅಸಂವಿಧಾನಿಕ” ಎಂದು ಕರೆದಿತ್ತು ಮತ್ತು ದಾನಿಗಳು ಮತ್ತು ಸ್ವೀಕರಿಸುವವರ ಮೊತ್ತವನ್ನು ಮಾರ್ಚ್ 13ರೊಳಗೆ ಬಹಿರಂಗಪಡಿಸುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು. ಎರಡು ವಿಭಾಗಗಳಲ್ಲಿ ಎಸ್‌ಬಿಐ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಒಂದು ವಿಭಾಗದಲ್ಲಿ, ಚುನಾವಣೆ ಬಾಂಡ್‌ಗಳನ್ನು ಖರೀದಿಸಿ ದೇಣಿಗೆ ನೀಡಿದವರ ಮಾಹಿತಿ, ಹೆಸರು, ಅವರು ನೀಡಿದ ಮೊತ್ತದ ದಾಖಲೆ ಇರಬೇಕು. ಇನ್ನು, ಎರಡನೇ ಭಾಗದಲ್ಲಿ ರಾಜಕೀಯ ಪಕ್ಷಗಳು ಬಾಂಡ್‌ಗಳ ಮೂಲಕ ದೇಣಿಗೆಯನ್ನು ನಗದೀಕರಣ ಮಾಡಿಕೊಂಡಿರುವ ಕುರಿತು ಮಾಹಿತಿ ಇರಬೇಕು ಎಂದು ಸೂಚಿಸಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version