ಬಾರಿಪಾದ: ಆನೆ ಎಷ್ಟು ಸೌಮ್ಯ ಪ್ರಾಣಿಯೋ ಅಷ್ಟೇ ಅಪಾಯಕಾರಿಯೂ ಹೌದು. ಸಾಕಾನೆಗಳು ಮನುಷ್ಯರ ಮೇಲೆ ದಾಳಿ ( Elephant Attack)ಮಾಡುವುದು ವಿರಳ. ಆದರೆ ಕಾಡಾನೆಗಳು ಹಾಗಲ್ಲ. ಆಕ್ರಮಣಕಾರಿಯಾಗಿ ವರ್ತಿಸುತ್ತವೆ. ಆನೆಗಳ ದಾಳಿಗೆ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡ ಬಗ್ಗೆ ಓದಿದ್ದೇವೆ. ಸೊಂಡಿಲಿನಿಂದ ಎತ್ತಿ-ಎಸೆದು-ಕಾಲಿನಿಂದ ತುಳಿಯುವ ಅವುಗಳ ಕ್ರೌರ್ಯತೆಯನ್ನು ನೋಡಿದ್ದೇವೆ. ಆದರೆ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ಶನಿವಾರ (ಜೂ.11)ರಂದು ನಡೆದ ಘಟನೆ ಇನ್ನೂ ತುಸು ಭಯಾನಕವಾಗಿಯೇ ಇದೆ. ಇಲ್ಲೊಂದು ಕಾಡಾನೆ ಮಹಿಳೆ ಮೇಲೆ ಆಕ್ರಮಣ ಮಾಡಿ ಕೊಂದಿದ್ದಲ್ಲದೆ, ಮತ್ತೆ ಸಂಜೆ ಆಕೆಯ ಶವದ ಮೇಲೆ ಕೂಡ ಭೀಕರವಾಗಿ ದಾಳಿ ನಡೆಸಿದೆ.
ಮಯೂರ್‌ಭಂಜ್ ಜಿಲ್ಲೆಯ ರಾಯ್ಪಾಲ್ ಎಂಬ ಹಳ್ಳಿಯಲ್ಲಿ ಮಾಯಾ ಮುರ್ಮು ಎಂಬ 70ವರ್ಷದ ಮಹಿಳೆ ಗುರುವಾರ ಮುಂಜಾನೆ ನೀರು ತರಲೆಂದು ಅಲ್ಲೇ ಕಾಡಿನ ಸಮೀಪದಲ್ಲಿರುವ ಕೊಳವೆಬಾವಿ ಬಳಿ ಹೋಗಿದ್ದರು. ಆ ಪ್ರದೇಶ ದಾಲ್ಮಾ ಅಭಯಾರಣ್ಯದ ಹತ್ತಿರವೇ ಇರುವುದರಿಂದ ಅಲ್ಲಿ ಪ್ರಾಣಿಗಳ ಓಡಾಟ ಸಹಜ. ಈಕೆ ನೀರು ತರಲು ಹೋದಾಗ ಅಲ್ಲಿಗೆ ಬಂದ ಆನೆಯೊಂದು ಮಾಯಾ ಮೇಲೆ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡು ಬಿದ್ದಿದ್ದ ಮಹಿಳೆಯನ್ನು ನೋಡಿದವರು ಯಾರೋ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ಮಾಯಾ ಮುರ್ಮು ತೀವ್ರವಾಗಿ ಗಾಯಗೊಂಡಿದ್ದರಿಂದ ಬದುಕುಳಿಯಲಿಲ್ಲ.
ಇದನ್ನೂ ಓದಿ: ನಾಗರಹೊಳೆಯಲ್ಲಿ ಆನೆ ದಾಳಿ: ಸಲ್ಪದ್ರಲ್ಲೇ ವ್ಯಕ್ತಿ ಪಾರು
ಆಸ್ಪತ್ರೆಯಲ್ಲಿ ಎಲ್ಲ ಪ್ರಕ್ರಿಯೆ ಮುಗಿಸಿ ಮಹಿಳೆಯ ದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು. ಕುಟುಂಬದವರೂ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಂಡರು. ಸಂಜೆ ಮನೆಯ ಸಮೀಪವೇ ಶವ ತೆಗೆದುಕೊಂಡು ಹೋಗಿ, ಅಂತಿಮ ವಿಧಿ-ವಿಧಾನಗಳನ್ನೆಲ್ಲ ನಡೆಸಿ, ಕೊನೇದಾಗಿ ಚಿತೆಯ ಮೇಲೆ ಮೃತದೇಹ ಮಲಗಿಸಲಾಗಿತ್ತು. ಇನ್ನೇನು ಅಗ್ನಿಸ್ಪರ್ಶ ಮಾಡಬೇಕು, ಅಷ್ಟೊತ್ತಿಗೆ ಮತ್ತೆ ಅದೇ ಆನೆ ಬಂದಿದೆ. ಆಕ್ರೋಶದಿಂದಲೇ ಬಂದ ಆನೆ, ಮಾಯಾ ಶವವನ್ನು ಚಿತೆಯಿಂದ ತೆಗೆದು ನೆಲಕ್ಕೆ ಬಿಸಾಕಿದೆ. ಮತ್ತೆ ಅದನ್ನು ಕಾಲಿನಿಂದ ತುಳಿದಿದೆ. ಅಲ್ಲಿದ್ದವರೆಲ್ಲ ಕಂಗಾಲಾಗಿ ಓಡಿದ್ದಾರೆ ಎಂದು ಸ್ಥಳೀಯ ಠಾಣೆ ಪೊಲೀಸ್ ಅಧಿಕಾರಿ ಲೋಪಮುದ್ರಾ ನಾಯಕ್ ತಿಳಿಸಿದ್ದಾರೆ. ಸುಮಾರು ಹೊತ್ತಿನ ಬಳಿಕ ಆನೆ ಅಲ್ಲಿಂದ ತೆರಳಿದ ನಂತರ ಮಾಯಾ ಮುರ್ಮು ಶವಸಂಸ್ಕಾರ ನಡೆದಿದೆ. ಆದರೆ ಆನೆಗ್ಯಾಕೆ ಮಾಯಾ ಮೇಲೆ ಈ ಪರಿ ಸಿಟ್ಟು ಎಂಬುದಕ್ಕೆ ಉತ್ತರವೇ ಇಲ್ಲ.
ಇದನ್ನೂ ಓದಿ: Viral Video; ಫೋಟೋಕ್ಕಾಗಿ ಮೊಬೈಲ್ ತೆಗೆದ ಹುಡುಗಿ ಮುಖಕ್ಕೆ ಸೊಂಡಿಲಿನಿಂದ ಹೊಡೆದ ಆನೆ