Site icon Vistara News

Musk Follows Modi: ಟ್ವಿಟರ್‌ನಲ್ಲಿ ಮೋದಿಯನ್ನು ಫಾಲೋ ಮಾಡಿದ ಎಲಾನ್‌ ಮಸ್ಕ್‌; ಭಾರತಕ್ಕೂ ಬರುತ್ತಾ ಟೆಸ್ಲಾ?

Elon Musk begins to follow PM Narendra Modi on Twitter

Elon Musk begins to follow PM Narendra Modi on Twitter

ನವದೆಹಲಿ: ಜಾಗತಿಕ ಅಗ್ರ ಉದ್ಯಮಿ, ಟೆಸ್ಲಾ ಕಂಪನಿ ಸಿಇಒ, ಇತ್ತೀಚೆಗೆ ಟ್ವಿಟರ್‌ ಜಾಲತಾಣವನ್ನು ಖರೀದಿಸಿ ಸುದ್ದಿಯಲ್ಲಿರುವ ಎಲಾನ್‌ ಮಸ್ಕ್‌ ಅವರು ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫಾಲೋ (Musk Follows Modi) ಮಾಡಿದ್ದಾರೆ. ಮಸ್ಕ್‌ ಅವರು ಟ್ವಿಟರ್‌ನಲ್ಲಿ 195 ಜನರನ್ನು ಫಾಲೋ ಮಾಡುತ್ತಿದ್ದು, ಆ ಪಟ್ಟಿಯಲ್ಲಿ ಮೋದಿ ಅವರ ಹೆಸರೂ ಇದೆ. ಈ ಪಟ್ಟಿಯೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಎಲಾನ್‌ ಮಸ್ಕ್‌ ಅವರು ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಉದ್ಯಮಿಯಾಗಿದ್ದಾರೆ. ಅವರಿಗೆ 13.43 ಕೋಟಿ ಫಾಲೋವರ್ಸ್‌ ಇದ್ದರೆ, ನರೇಂದ್ರ ಮೋದಿ ಅವರಿಗೆ 8.77 ಕೋಟಿ ಫಾಲೋವರ್ಸ್‌ ಇದ್ದಾರೆ. ಎಲಾನ್‌ ಅಲರ್ಟ್ಸ್‌ ಎಂಬ ಟ್ವಿಟರ್‌ ಖಾತೆಯಿಂದ ಈ ಮಾಹಿತಿಯನ್ನು ಟ್ವೀಟ್‌ ಮಾಡಲಾಗಿದೆ. ಇನ್ನು ಮಸ್ಕ್‌ ಅವರು ಮೋದಿ ಅವರನ್ನು ಫಾಲೋ ಮಾಡುತ್ತಿರುವ ಕುರಿತು ಹಲವು ರೀತಿಯಲ್ಲಿ ಜನ ಪ್ರತಿಕ್ರಿಯಿಸಿದ್ದಾರೆ. ಇನ್ನು ಹಲವು ರೀತಿಯ ಚರ್ಚೆಯೂ ಆರಂಭವಾಗಿದೆ.

“ನರೇಂದ್ರ ಮೋದಿ ಅವರನ್ನು ಎಲಾನ್‌ ಮಸ್ಕ್‌ ಫಾಲೋ ಮಾಡಲು ಕಾರಣ ಏನಿರಬಹುದು? ಭಾರತದಲ್ಲೂ ಟೆಸ್ಲಾ ಕಂಪನಿಯ ಘಟಕವನ್ನು ನಾವು ನಿರೀಕ್ಷೆ ಮಾಡಬಹುದಾ? ಕಾದು ನೋಡೋಣ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನು ಮತ್ತೊಬ್ಬರು ಮಸ್ಕ್‌ ಅವರಿಗೆ ಧನ್ಯವಾದ ತಿಳಿಸಿದ್ದರೆ. “ಧನ್ಯವಾದ ಎಲಾನ್‌ ಮಸ್ಕ್‌. ನರೇಂದ್ರ ಮೋದಿ ಅವರು ಭಾರತದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಭಾರತೀಯರ ಜೀವನ ಮಟ್ಟ ಸುಧಾರಣೆಗೆ ಯೋಜನೆ ಜಾರಿಗೊಳಿಸುತ್ತಿದ್ದಾರೆ. ಮಸ್ಕ್‌ ಅವರೂ ಜಾಗತಿಕ ಉದ್ಯಮಿಯಾಗಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ಮಸ್ಕ್‌ ಶ್ರಮಿಸುತ್ತಿದ್ದಾರೆ. ಹಾಗಾಗಿ, ಇಬ್ಬರಿಗೂ ಒಳಿತಾಗಲಿ ಎಂಬುದಾಗಿ ಬಯಸುತ್ತೇನೆ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹೀಗೆ ಹಲವು ಜನ, ಹಲವು ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಎಲಾನ್‌ ಮಸ್ಕ್‌ ಅವರು ಟ್ವಿಟರ್‌ನಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಸತ್ಯ ನಾಡೆಳ್ಳ ಸೇರಿ ಹಲವು ಪ್ರಮುಖ ಲೇಖಕರು, ಹಾಸ್ಯ ಕಲಾವಿದರು ಸೇರಿ ಹಲವರನ್ನು ಫಾಲೋ ಮಾಡುತ್ತಿದ್ದಾರೆ.

ನರೇಂದ್ರ ಮೋದಿ ಮಾತ್ರವಲ್ಲ, ಕೆಲ ದಿನಗಳ ಹಿಂದಷ್ಟೇ ಬಿಜೆಪಿಯು ಹೆಚ್ಚು ಫಾಲೋವರ್ಸ್‌ ಹೊಂದಿದ ಪಕ್ಷ ಎಂಬ ಖ್ಯಾತಿ ಗಳಿಸಿದೆ. ಭಾರತೀಯ ರಾಜಕೀಯ ಪಕ್ಷಗಳ ಪೈಕಿ ಸೋಷಿಯಲ್ ಮೀಡಿಯಾಗಳಲ್ಲಿ ಭಾರತೀಯ ಜನತಾ ಪಾರ್ಟಿ ಹೆಚ್ಚು ಪ್ರಭಾವಶಾಲಿ ಎನಿಸಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ(@BJP4India)ಯು ಕಳೆದ ತಿಂಗಳು ಟ್ವಿಟರ್‌ನಲ್ಲಿ 2 ಕೋಟಿ ಫಾಲೋವರ್ಸ್ ಗುರಿ ದಾಟಿದೆ! ಬಿಜೆಪಿ ಟ್ವಿಟರ್ ಖಾತೆಯನ್ನು 2 ಕೋಟಿಗೂ ಅಧಿಕ ಜನ ಫಾಲೋ ಮಾಡಿದರೆ, ಈ ಟ್ವಿಟರ್ ಹ್ಯಾಂಡಲ್ ಕೇವಲ ಮೂರು ಖಾತೆಗಳನ್ನು ಫಾಲೋ ಮಾಡುತ್ತದೆ! ಈ ವಿಷಯವನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯಾ ಟ್ವೀಟ್ ಮಾಡಿ ಖಚಿತಪಡಿಸಿದ್ದರು.

ಇದನ್ನೂ ಓದಿ: R Ashwin: ಎಲಾನ್​ ಮಸ್ಕ್​ಗೆ ಪ್ರಶ್ನೆ ಮಾಡಿದ ಆರ್​.ಅಶ್ವಿನ್​; ಟ್ವೀಟ್​ ವೈರಲ್​

Exit mobile version