Site icon Vistara News

Emergency Anniversary: ತುರ್ತು ಪರಿಸ್ಥಿತಿಗೆ 48 ವರ್ಷ; ದೇಶ ಕಂಡ ಕರಾಳ ಅಧ್ಯಾಯ ಎಂದ ಮೋದಿ

PM Narendra Modi

PM Narendra Modi to attend BRICS Summit in Johannesburg Of South Africa

ನವದೆಹಲಿ: ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ ಕರಾಳ ಅಧ್ಯಾಯಕ್ಕೆ ಜೂನ್‌ 25ರಂದು 48 ವರ್ಷ (Emergency Anniversary) ತುಂಬಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರದ ಹಲವು ಸಚಿವರು, ಬಿಜೆಪಿ ನಾಯಕರು ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನೆದಿದ್ದಾರೆ. ಅದರಲ್ಲೂ ಮೋದಿ ಅವರು, “ತುರ್ತು ಪರಿಸ್ಥಿತಿಯು ದೇಶ ಕಂಡ ಕರಾಳ ಅಧ್ಯಾಯ” ಎಂದಿದ್ದಾರೆ.

“ತುರ್ತು ಪರಿಸ್ಥಿತಿಯನ್ನು ಖಂಡಿಸಿದ, ವಿರೋಧಿಸಿದ, ಪ್ರತಿಭಟಿಸಿದ ಎಲ್ಲರಿಗೂ ನನ್ನ ನಮನಗಳು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ, ಭಾರತದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದಿದ್ದಕ್ಕೆ ಗೌರವ ಸಲ್ಲಿಸುತ್ತೇನೆ. ತುರ್ತು ಪರಿಸ್ಥಿತಿಯ ಕರಾಳ ದಿನಗಳು ಭಾರತದ ಇತಿಹಾಸದಲ್ಲಿ ಮರೆಯಲಾಗದ ದಿನಗಳಾಗಿವೆ. ಸಂವಿಧಾನದ ಆಚರಣೆಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದ್ದ ತುರ್ತು ಪರಿಸ್ಥಿತಿ ಖಂಡನೀಯ” ಎಂದು ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ಅಲಹಾಬಾದ್‌ ಹೈಕೋರ್ಟ್‌ ತೀರ್ಪಿನ ವಿರುದ್ಧ ಕುಪಿತಗೊಂಡಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು 1975ರ ಜೂನ್‌ 25ರಂದು ತುರ್ತು ಪರಿಸ್ಥಿತಿ ಘೋಷಿಸಿದ್ದರು. 21 ತಿಂಗಳು ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ಇದೇ ವೇಳೆ ಲಕ್ಷಾಂತರ ಜನರನ್ನು ಜೈಲಿಗೆ ಕಳುಹಿಸಲಾಗಿತ್ತು. ಮಾಧ್ಯಮ ಸಂಸ್ಥೆಗಳನ್ನು ಮುಚ್ಚಲಾಗಿತ್ತು. ಜನರ ಹಕ್ಕುಗಳನ್ನು ಕಸಿಯಲಾಗಿತ್ತು. ಹಾಗಾಗಿ, ತುರ್ತು ಪರಿಸ್ಥಿತಿಯು ದೇಶದ ಪ್ರಜಾಪ್ರಭುತ್ವದ ಕರಾಳ ಅಧ್ಯಾಯ ಎನಿಸಿದೆ.

ಇದನ್ನೂ ಓದಿ: Mann Ki Baat; ಮನ್​ ಕೀ ಬಾತ್​​ನಲ್ಲಿ ’ತುರ್ತು ಪರಿಸ್ಥಿತಿ’ ನೆನಪು; ಒಂದು ವಾರ ಮೊದಲು ಪ್ರಸಾರಕ್ಕೆ ಕಾರಣ ಏನು?

ನರೇಂದ್ರ ಮೋದಿ ಅವರ ಜತೆಗೆ ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ಸ್ಮೃತಿ ಇರಾನಿ, ಹರ್ದೀಪ್‌ ಸಿಂಗ್‌ ಪುರಿ ಸೇರಿ ಹಲವರು ತುರ್ತು ಪರಿಸ್ಥಿತಿಯ ದುರಂತ ಕ್ಷಣಗಳನ್ನು ನೆನೆದಿದ್ದಾರೆ. ತುರ್ತು ಪರಿಸ್ಥಿತಿ ವೇಳೆ ಹೇಗೆ ಪ್ರಜಾಪ್ರಭುತ್ವದ ಕತ್ತು ಹಿಸುಕಲಾಗಿತ್ತು ಎಂಬುದನ್ನು ಬಿಜೆಪಿ ನಾಯಕರು ಸ್ಮರಿಸಿದ್ದಾರೆ. ಸ್ಮೃತಿ ಇರಾನಿ ಅವರಂತೂ ವಿಡಿಯೊ ಮೂಲಕ ಕಾಂಗ್ರೆಸ್‌ಗೆ ಚಾಟಿ ಬೀಸಿದ್ದಾರೆ.

Exit mobile version