Site icon Vistara News

Emergency: ತುರ್ತು ಪರಿಸ್ಥಿತಿ ಕರಾಳ ನೆನಪು; ಜೂನ್‌ 25ಅನ್ನು ‘ಸಂವಿಧಾನ ಹತ್ಯಾ ದಿವಸ’ ಎಂದು ಘೋಷಿಸಿದ ಕೇಂದ್ರ

Emergency

Emergency row: Centre declares June 25 as 'Samvidhaan Hatya Diwas'

ನವದೆಹಲಿ: 1975ರ ಜೂನ್‌ 25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರು ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಕಾರಣದಿಂದಾಗಿ ಜೂನ್‌ 25ಅನ್ನು ಸಂವಿಧಾನ ಹತ್ಯಾ ದಿವಸ (Samvidhaan Hatya Diwas) ಎಂಬುದಾಗಿ ಕೇಂದ್ರ ಸರ್ಕಾರ (Central Government) ಘೋಷಿಸಿದೆ. ಪ್ರತಿವರ್ಷ ಜೂನ್‌ 25ರಂದು ದೇಶಾದ್ಯಂತ ಸಂವಿಧಾನ ಹತ್ಯಾ ದಿವಸ ಎಂಬುದಾಗಿ ಆಚರಿಸಲು ಕೇಂದ್ರ ಸರ್ಕಾರವು ತೀರ್ಮಾನಿಸಿದೆ.

ಕೇಂದ್ರ ಸರ್ಕಾರದ ತೀರ್ಮಾನದ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. “ಪ್ರತಿವರ್ಷ ಜೂನ್‌ 25ರಂದು ಸಂವಿಧಾನ ಹತ್ಯಾ ದಿವಸ ಎಂಬುದಾಗಿ ಆಚರಿಸಲಾಗುತ್ತದೆ. ಆ ಮೂಲಕ ತುರ್ತು ಪರಿಸ್ಥಿತಿ ವೇಳೆ ಸಾವು-ನೋವು ಅನುಭವಿಸಿದ ಲಕ್ಷಾಂತರ ಜನರ ಹೋರಾಟ, ತ್ಯಾಗವನ್ನು ಸ್ಮರಿಸಲಾಗುತ್ತದೆ. ಅಲ್ಲದೆ, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಕಾಂಗ್ರೆಸ್‌ ಹೇಗೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿತು ಎಂಬುದನ್ನು ಜನರಿಗೆ ತಿಳಿಸಲಾಗುತ್ತದೆ” ಎಂಬುದಾಗಿ ಮಾಹಿತಿ ನೀಡಿದರು.

“1975ರ ಜೂನ್‌ 25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ಘೋಷಿಸುವ ಮೂಲಕ ತಮ್ಮಲ್ಲಿರುವ ಸರ್ವಾಧಿಕಾರಿ ಮನಸ್ಥಿತಿಯನ್ನು ಜಗತ್ತಿಗೆ ತೋರಿಸಿದರು. ತುರ್ತು ಪರಿಸ್ಥಿತಿ ಹೇರುವ ಮೂಲಕ ಅವರು ಪ್ರಜಾಪ್ರಭುತ್ವದ ಆತ್ಮದ ಮೇಲೆಯೇ ದಾಳಿ ನಡೆಸಿದರು. ದೇಶದಲ್ಲಿ ಲಕ್ಷಾಂತರ ಜನರನ್ನು ಕಾರಣವೇ ಇಲ್ಲದೆ ಬಂಧಿಸಲಾಯಿತು. ಮಾಧ್ಯಮ ಸ್ವಾತಂತ್ರ್ಯವನ್ನು ಕಸಿಯಲಾಯಿತು. ಆದರೂ, ಲಕ್ಷಾಂತರ ಜನ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಪ್ರಜಾಪ್ರಭುತ್ವವನ್ನು ಉಳಿಸಿದರು” ಎಂಬುದಾಗಿ ಅಮಿತ್‌ ಶಾ ಪೋಸ್ಟ್‌ ಮಾಡಿದ್ದಾರೆ.

ಅಲಹಾಬಾದ್‌ ಹೈಕೋರ್ಟ್‌ ತೀರ್ಪಿನ ವಿರುದ್ಧ ಕುಪಿತಗೊಂಡಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು 1975ರ ಜೂನ್‌ 25ರಂದು ತುರ್ತು ಪರಿಸ್ಥಿತಿ ಘೋಷಿಸಿದ್ದರು. 21 ತಿಂಗಳು ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ಇದೇ ವೇಳೆ ಲಕ್ಷಾಂತರ ಜನರನ್ನು ಜೈಲಿಗೆ ಕಳುಹಿಸಲಾಗಿತ್ತು. ಮಾಧ್ಯಮ ಸಂಸ್ಥೆಗಳನ್ನು ಮುಚ್ಚಲಾಗಿತ್ತು. ತಮ್ಮ ವಿರುದ್ಧ ವರದಿ ಪ್ರಕಟಿಸುವ ಪತ್ರಿಕೆಗಳನ್ನು ಮುಚ್ಚಲು ಇಂದಿರಾ ಗಾಂಧಿ ಆದೇಶಿಸಿದ್ದರು. ಜನರ ಹಕ್ಕುಗಳನ್ನು ಕಸಿಯಲಾಗಿತ್ತು. ಹಾಗಾಗಿ, ತುರ್ತು ಪರಿಸ್ಥಿತಿಯು ದೇಶದ ಪ್ರಜಾಪ್ರಭುತ್ವದ ಕರಾಳ ಅಧ್ಯಾಯ ಎನಿಸಿದೆ.

ಇದನ್ನೂ ಓದಿ: Droupadi Murmu: ತುರ್ತು ಪರಿಸ್ಥಿತಿ ಸಂವಿಧಾನದ ಮೇಲೆ ನಡೆದಿರುವ ಅತಿದೊಡ್ಡ ದಾಳಿ; ದ್ರೌಪದಿ ಮುರ್ಮು

Exit mobile version