Site icon Vistara News

Emirates Flight: ವಿಮಾನ ಡಿಕ್ಕಿ ಹೊಡೆದು 36 ಫ್ಲೆಮಿಂಗೊ ಪಕ್ಷಿಗಳಿಗೆ ದಾರುಣ ಅಂತ್ಯ

Emirates Flight

Emirates Flight

ಮುಂಬೈ: ದುಬೈಯಿಂದ ಮುಂಬೈ ಆಗಮಿಸಿದ ಎಮಿರೇಟ್ಸ್‌ ವಿಮಾನ (Emirates Flight)ಕ್ಕೆ ಸಿಲುಕಿ ಸುಮಾರು 36 ಫ್ಲೆಮಿಂಗೊ(Flamingos) ಪಕ್ಷಿಗಳು ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ. ಮುಂಬೈಯ ಘಾಟ್‌ಕೋಪರ್‌ನ ಪಂತ್‌ನಗರದ ಲಕ್ಷ್ಮೀ ನಗರ ಪ್ರದೇಶದಲ್ಲಿ ಸೋಮವಾರ ರಾತ್ರಿ ಈ ಅವಘಡ ನಡೆದಿದೆ. ಸುಮಾರು 310 ಪ್ರಯಾಣಿಕರನ್ನು ಹೊತ್ತ ಇಕೆ 508 (EK 508) ಎಮಿರೇಟ್ಸ್‌ ವಿಮಾನ ರಾತ್ರಿ 9.18ರ ಸುಮಾರಿಗೆ ಮುಂಬೈಗೆ ಆಗಮಿಸಿತ್ತು. ಈ ವೇಳೆ ಕೊಕ್ಕರೆಯಂತಹ ಫ್ಲೆಮಿಂಗೊಗಳು ವಿಮಾನಕ್ಕೆ ಸಿಲುಕಿ ಸಾವನ್ನಪ್ಪಿವೆ ಎಂದು ಮೂಲಗಳು ತಿಳಿಸಿವೆ. ವಿಮಾನಕ್ಕೂ ಅಲ್ಪ ಸ್ವಲ್ಪ ಹಾನಿಯಾಗಿದ್ದು, ಯಾವುದೇ ಅಪಾಯವಿಲ್ಲದೆ ಲ್ಯಾಂಡ್‌ ಆಗಿದೆ.

ಘಾಟ್ಕೋಪರ್ ಪೂರ್ವ ಪ್ರದೇಶದ ರಸ್ತೆಯಲ್ಲಿ ಫ್ಲೆಮಿಂಗೊ ಮೃತದೇಹಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದು, ಪಕ್ಷಿ ಪ್ರೇಮಿಗಳು ದುಃಖ ವ್ಯಕ್ತಪಡಿಸಿದ್ದಾರೆ. ಈ ಪಕ್ಷಿಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಇವು ಹಿಂಡಾಗಿ ಹಾರಾಡುತ್ತಿದ್ದಾಗ ವಿಮಾನ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.

ಗಾಯಗೊಂಡಿರುವ ಪಕ್ಷಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪಕ್ಷಿಪ್ರೇಮಿಗಳು ತಿಳಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯುವ ಮೊದಲು ವಿಮಾನಗಳು ಘಾಟ್ಕೋಪರ್ ಪ್ರದೇಶದ ಮೂಲಕ ಹಾದು ಹೋಗುತ್ತವೆ. ಈ ವೇಳೆ ವಿಮಾನಗಳು ಕಡಿಮೆ ಎತ್ತರದಿಂದ ಹಾರುತ್ತವೆ. ಆದ್ದರಿಂದ ವಿಮಾನಕ್ಕೆ ಸಿಲುಕಿ ಫ್ಲೆಮಿಂಗೊ ಸಾವನ್ನಪ್ಪಿರುವ ಸಾಧ್ಯತೆ ಇದೆ. ವಿಮಾನ ನಿಲ್ದಾಣ ಅದಿಕಾರಿಗಳು ಹಕ್ಕಿಗಳ ಸಾವನ್ನು ದೃಢಪಡಿಸಿದ್ದಾರೆ.

ಅರಣ್ಯ ಅಧಿಕಾರಿ ಪ್ರಶಾಂತ್‌ ಬಹಾದುರ್‌ ಮಾತನಾಡಿ, ʼʼಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ವಿಮಾನ ನಿಲ್ದಾಣಕ್ಕೆ ತೆರಳಿದ್ದೆವು. ಆದರೆ ಅವರು ಒಳ ಪ್ರವೇಶಿಸಲು ನಿರಾಕರಿಸಿದ್ದಾರೆ. ಎಮಿರೇಟ್ಸ್‌ ವಿಮಾನ ಡಿಕ್ಕಿ ಹೊಡೆದ ಕಾರಣದಿಂದಲೇ ಪಕ್ಷಿಗಳ ಮಾರಣ ಹೋಮ ನಡೆದಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಮೊದಲು ಸ್ಥಳೀಯರು ಮಾಹಿತಿ ನೀಡಿದ್ದರುʼʼ ಎಂದು ತಿಳಿಸಿದ್ದಾರೆ.

ಪರಿಸರ ಪ್ರೇಮಿಗಳ ಆತಂಕ

ಪರಿಸರ ಪ್ರೇಮಿ ಡಿ.ಸ್ಟಾಲಿನ್‌ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿ, ʼʼವಿಮಾನ ನಿಲ್ದಾಣದ ಬಳಿ ಹಕ್ಕಿಗಳು ಯಾಕೆ ಹಾರಾಡುತ್ತವೆ ಎನ್ನುವುದನ್ನು ತನಿಖೆಗೆ ಒಳಪಡಿಸಬೇಕು. ಅಭಯಾರಣ್ಯದ ಮೂಲಕ ಹಾದುಹೋಗುವ ಹೊಸ ವಿದ್ಯುತ್ ಮಾರ್ಗಗಳು ಪಕ್ಷಿಗಳಿಗೆ ದಿಗ್ಭ್ರಮೆಯನ್ನುಂಟು ಮಾಡುತ್ತಿವೆ. ಹೀಗಾಗಿ ಭಯದಿಂದ ಪಕ್ಷಿಗಳು ತಮ್ಮ ಪಥ ಬದಲಾಯಿಸಿ ನಗರ ಪ್ರದೇಶಗಳತ್ತ ಬರುತ್ತವೆ. ಅಭಯಾರಣ್ಯದಲ್ಲಿ ವಿದ್ಯುತ್ ಮಾರ್ಗಗಗಳಿಗೆ ಅನುಮತಿ ನೀಡಬಾರದು. ಇದಕ್ಕೆ ಅನೇಕ ಪರ್ಯಾಯ ಮಾರ್ಗಗಳಿವೆ. ಅದನ್ನು ಬಳಸಿಕೊಳ್ಳಬೇಕು. ಈ ಹಿಂದೆ ಇಲ್ಲಿ ಅನುಮತಿ ನೀಡುತ್ತಿರಲಿಲ್ಲ. ಇದರ ಜತೆಗೆ ಥಾಣೆ ಕ್ರೀಕ್ ವನ್ಯಜೀವಿ ಅಭಯಾರಣ್ಯವನ್ನು ನೆಲಸಮಗೊಳಿಸಲಾಯಿತು ಮತ್ತು ಗೋಪುರಗಳನ್ನು ನಿರ್ಮಿಸಲಾಯಿತು. ಇದು ಕೂಡ ಪಕ್ಷಿಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆʼʼ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ʼʼಫ್ಲೆಮಿಂಗೊ ಪಕ್ಷಿಗಳು ಮುಖ್ಯವಾಗಿ ತೇವಾಂಶ ಪ್ರದೇಶ ಮತ್ತು ಕೆರೆಗಳಲ್ಲಿ ವಾಸಿಸುತ್ತವೆ. ಈ ಪ್ರದೇಶಗಳು ಗಣನೀಯವಾಗಿ ಕುಗ್ಗುತ್ತಿರುವುದರಿಂದಲೂ ಅವು ವಾಸಯೋಗ್ಯ ಜಾಗಗಳಿಲ್ಲದೆ ಎಲ್ಲೆಂದರಲ್ಲಿ ಹಾರಾಡುತ್ತಿವೆʼʼ ಎಂದು ಸ್ಟಾಲಿನ್‌ ತಿಳಿಸಿದ್ದಾರೆ. ತಮ್ಮ ಸೌಂದರ್ಯದಿಂದಲೇ ಗಮನ ಸೆಳೆಯುವ ಫ್ಲೆಮಿಂಗೊ ಪಕ್ಷಿಗಳು ಮುಂಬೈಯ ಪ್ರಧಾನ ಆಕರ್ಷಣೆ.

ಇದನ್ನೂ ಓದಿ: Air India: ಏರ್‌ ಇಂಡಿಯಾ ವಿಮಾನದಲ್ಲಿ ಮತ್ತೆ ಅವಘಡ; ತಪ್ಪಿದ ಭಾರೀ ದುರಂತ; ತುರ್ತು ಭೂ ಸ್ಪರ್ಶ

Exit mobile version