Site icon Vistara News

K Annamalai: ರಾಹುಲ್ ಗಾಂಧಿ ರೀತಿ ‘ನನ್ನ ಭೂಮಿ ನನ್ನ ಜನ’ ಎಂದು ಪಾದಯಾತ್ರೆ ಹೊರಟ ಬಿಜೆಪಿ ನಾಯಕ ಅಣ್ಣಾಮಲೈ

K Annamalai

ಚೆನ್ನೈ, ತಮಿಳುನಾಡು: ಜುಲೈ 28 ಶುಕ್ರವಾರ ಸಂಜೆಯಿಂದ ಬಿಜೆಪಿಯು (BJP) ತಮಿಳುನಾಡಿನಲ್ಲಿ ಪಾದಯಾತ್ರೆ(Padayatra in Tamil Nadu) ಆರಂಭಿಸಲಿದೆ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ (K Annamalai) ಅವರು ಈ ಪಾದಯಾತ್ರೆಯನ್ನು ಕೈಗೊಳ್ಳಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ (Minister Amit Shah) ಅವರು ಚಾಲನೆ ನೀಡಲಿದ್ದಾರೆ. ಈ ಪಾದಯಾತ್ರೆಯು ಶುಕ್ರವಾರ ಸಂಜೆ ರಾಮೇಶ್ವರದಿಂದ ಆರಂಭವಾಗಲಿದೆ. ದಕ್ಷಿಣ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿ, ತಮಿಳುನಾಡಿನಲ್ಲಿ ಪಾದಯಾತ್ರೆಯ ಮೂಲಕ ಸದ್ದು ಮಾಡಲು ಹೊರಟಿದೆ. ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಪಾದಯಾತ್ರೆ ಕೈಗೊಂಡಾಗ, ಅವರ ಯಾತ್ರೆಯನ್ನು ಕೆ. ಅಣ್ಣಾ ಮಲೈ ಅವರು ಟೀಕಿಸಿದ್ದರು. ಈಗ ಅವರೇ ಪಾದಯಾತ್ರೆ ಕೈಗೊಳ್ಳುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚಿಸಲಾಗುತ್ತಿದೆ.

ಈ ಪಾದಯಾತ್ರೆಗೆ ಎನ್ ಮನ್ನ್, ಎನ್ನ ಮಕ್ಕಳ್ ಹೆಸರು ಇಡಲಾಗಿದೆ. ಕನ್ನಡದಲ್ಲಿ ಈ ಶೀರ್ಷಿಕೆಯ ಅರ್ಥ, ನನ್ನ ಭೂಮಿ ನನ್ನ ಜನ ಎಂದಾಗುತ್ತದೆ. ಈ ಪಾದಯಾತ್ರೆಯು ತಮಿಳುನಾಡಿನ ಎಲ್ಲ 234 ವಿಧಾನಸಭಾ ಕ್ಷೇತ್ರಗಳನ್ನು ಸ್ಪರ್ಶಿಸಲಿದೆ. ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಕೆ ಅಣ್ಣಾಮಲೈ ಅವರು ತಮ್ಮ, ಪೊಲೀಸ್ ವೃತ್ತಿಯನ್ನು ತೊರೆದು ರಾಜಕಾರಣಕ್ಕೆ ಸೇರ್ಪಡೆಯಾಗಿದ್ದರು. ಬಿಜೆಪಿ ಸೇರ್ಪಡೆಯಾದ ಕೆ ಅಣ್ಣಾಮಲೈ ಅವರಿಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಹುದ್ದೆಯನ್ನು ವಹಿಸಲಾಯಿತು. ಅವರು ತಮಿಳುನಾಡಿನಲ್ಲಿ ಡಿಎಂಕೆ ವಿರುದ್ಧ ಅಗ್ರೇಸ್ಸಿವ್ ಆಗಿ ಮುಂದುವರಿದಿದ್ದಾರೆ. ಡಿಎಂಕೆ ಸರ್ಕಾರ ಹಾಗೂ ಹಿರಿಯ ಸಚಿವರ ವಿರುದ್ಧ ನಿರಂತರವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಾ ಬಂದಿದ್ದಾರೆ.

ಕೆ ಅಣ್ಣಾಮಲೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಪಾದಯಾತ್ರೆಯು ತಮಿಳುನಾಡಿನ ಎಲ್ಲ 39 ಲೋಕಸಭಾ ಕ್ಷೇತ್ರಗಳನ್ನು ಕವರ್ ಮಾಡಲಿದೆ. ಜುಲೈ 28ರಂದು ಆರಂಭವಾಗಲಿರುವ ಪಾದಯಾತ್ರೆಯು 2024ರ ಜನವರಿ 11ರಂದು ಮುಕ್ತಾಯವಾಗಲಿದೆ. ಈ ಪಾದಯಾತ್ರೆ ಪೂರ್ತಿಯಾದ ಮೂರ್ನಾಲ್ಕು ತಿಂಗಳಿಗೆ ಲೋಕಸಭೆ ಚುನಾವಣೆ ನಡೆಯಲಿದೆ.

ಈ ಸುದ್ದಿಯನ್ನೂ ಓದಿ: ನಮ್ಮನ್ನು ಕೆಣಕಬೇಡಿ ಎಂದ ತಮಿಳುನಾಡು ಸಿಎಂ ಸ್ಟಾಲಿನ್; ನಮ್ಮನ್ನು ಮುಟ್ಟಬೇಡಿ ಎಂದ ಬಿಜೆಪಿ ಚೀಫ್​ ಅಣ್ಣಾಮಲೈ

ಈ ಆರು ತಿಂಗಳ ಪಾದಯಾತ್ರೆಯಲ್ಲಿ ಕೆ. ಅಣ್ಣಾಮಲೈ ಅವರು ಒಟ್ಟು 1770 ಕಿ.ಮೀ. ನಡೆಯಲಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅವರು ಪಾದಯಾತ್ರೆ ಕೈಗೊಳ್ಳದೇ ವಾಹನದಲ್ಲಿ ಸಂಚರಿಸಲಿದ್ದಾರೆ. ಈ ಪಾದಯಾತ್ರೆ ವೇಳೆ ಒಟ್ಟು 19 ಬೃಹತ್ ರ್ಯಾಲಿಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಪ್ರತಿ ರ್ಯಾಲಿಯ ವೇಳೆ ಪಕ್ಷದ ಒಬ್ಬ ಹಿರಿಯ ನಾಯಕರು ಮತ್ತು ಕೇಂದ್ರ ಸಚಿವರು ಪಾಲ್ಗೊಳ್ಳಲಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version