ರಾಯ್‌ಪುರ: ಛತ್ತೀಸ್‌ಗಢದ ಕಂಕೇರ್ (Kanker) ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್ (Encounter)ನಲ್ಲಿ ಓರ್ವ ನಕ್ಸಲ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ (Encounter In Kanker). ಕೊಯಲಿಬೇಡಾ ಪೊಲೀಸ್ ಠಾಣೆ ವ್ಯಾಪ್ತಿಯ ಚಿಲ್ಪಾರಸ್ ಗ್ರಾಮದ ಬಳಿಯ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಯ ತಂಡವು ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಚಕಮಕಿ ನಡೆದಿದೆ ಎಂದು ಕಂಕೇರ್ ಪೊಲೀಸ್ ವರಿಷ್ಠಾಧಿಕಾರಿ ಇಂದಿರಾ ಕಲ್ಯಾಣ್ ಎಲೆಸೆಲಾ ತಿಳಿಸಿದ್ದಾರೆ.
ಜಿಲ್ಲಾ ರಿಸರ್ವ್ ಗಾರ್ಡ್ (District Reserve Guard) ಮತ್ತು ಗಡಿ ಭದ್ರತಾ ಪಡೆ (Border Security Force) ಜಂಟಿಯಾಗಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಈ ವೇಳೆ ಗುಂಡಿನ ಚಕಮಕಿ ನಡೆದಿದೆ. ಸಾವನ್ನಪ್ಪಿದ ನಕ್ಸಲ್‌ನ ಶವ, ಶಸ್ತ್ರಾಸ್ತ್ರ ಮತ್ತು ಸ್ಫೋಟಕ ವಸ್ತುಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಇಂದಿರಾ ಕಲ್ಯಾಣ್ ಎಲೆಸೆಲಾ ವಿವರಿಸಿದ್ದಾರೆ. ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ ಮತ್ತು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.
ಈತನ್ಮಧ್ಯೆ ಬಿಜಾಪುರ ಜಿಲ್ಲೆಯಲ್ಲಿ ಶುಕ್ರವಾರ ಪೊಲೀಸರೊಂದಿಗಿನ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಇಬ್ಬರು ನಕ್ಸಲರ ಗುರುತನ್ನು ಪೊಲೀಸರು ದೃಢಪಡಿಸಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ಗುಂಡಿನ ಚಕಮಕಿ ನಡೆದ ಹಿಂಗ್ಮೆಟಾ ಗ್ರಾಮದ ನಿವಾಸಿಗಳಾದ ಸುರೇಶ್ ಮುಹಂಡಾ (30) ಮತ್ತು ಸಣ್ಣು ಮುಹಂಡಾ (20) ಮೃತ ನಕ್ಸಲರು ಎಂದು ಅವರು ಹೇಳಿದ್ದಾರೆ. ಸುರೇಶ್ ಮಾವೋವಾದಿಗಳ ಇಂದ್ರಾವತಿ ಪ್ರದೇಶ ಸಮಿತಿಯಲ್ಲಿ 10 ವರ್ಷಗಳ ಕಾಲ ಕೆಲಸ ಮಾಡಿದ್ದ ಮತ್ತು ಕಮಾಂಡರ್ ಆಗಿ ಸಕ್ರಿಯನಾಗಿದ್ದ. ಸಣ್ಣು ಐದು ವರ್ಷಗಳ ಹಿಂದೆ ನಿಷೇಧಿತ ಸಂಘಟನೆಗೆ ಸೇರಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.
ಪೊಲೀಸ್ ಕಾನ್ಸ್‌ಟೇಬಲ್ ಹುತಾತ್ಮ
ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಮಾವೋವಾದಿ ಸಾವನ್ನಪ್ಪಿದ್ದರು. ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಛೋಟೆಬೆಥಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಹಿಡೂರ್ ಗ್ರಾಮದ ಬಳಿಯ ಕಾಡಿನಲ್ಲಿ ಗುಂಡಿನ ಚಕಮಕಿ ನಡೆದಿತ್ತು.
ಹಿಡೂರ್ ಅರಣ್ಯದಲ್ಲಿ ಮಾವೋವಾದಿಗಳ ಅಡಗಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಈ ವೇಳೆ ರಾಜ್ಯ ಪೊಲೀಸ್ ಘಟಕ ಬಸ್ತಾರ್ ಫೈಟರ್ಸ್‌ಗೆ ಸೇರಿದ ಕಾನ್ಸ್‌ಟೇಬಲ್ ರಮೇಶ್ ಕುರೇತಿ ಅವರು ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದರು. ಸ್ಥಳದಿಂದ ಮಾವೋವಾದಿಯ ಶವ ಮತ್ತು ಎಕೆ -47 ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ: ಛತ್ತೀಸ್ಗಢ್ನಲ್ಲಿ ಮತ್ತೆ ನಕ್ಸಲರ ಕ್ರೌರ್ಯ; ಬೆಟ್ಟದ ಬುಡದಲ್ಲಿ ಐಇಡಿ ಸ್ಫೋಟ, ಸಿಆರ್ಪಿಎಫ್ನ ಇಬ್ಬರು ಯೋಧರಿಗೆ ಗಾಯ
ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿ ಮಾವೋವಾದಿಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ವಿಶೇಷ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆ್ಯಕ್ಷನ್‌ಗೆ ಸೇರಿದ ಇಬ್ಬರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ಮೂವರು ಸಿಬ್ಬಂದಿ ಮೃತಪಟ್ಟು ಸುಮಾರು ಒಂದು ತಿಂಗಳ ನಂತರ ಈ ಎನ್‌ಕೌಂಟರ್‌ಗಳು ನಡೆದಿವೆ. 2021ರಲ್ಲಿ ಇಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ 23 ಸೈನಿಕರು ಹುತಾತ್ಮರಾಗಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ