Site icon Vistara News

Encounter in Kupwara: ಕುಪ್ವಾರದಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ: ಮೂವರು ಸೈನಿಕರಿಗೆ ಗಾಯ; ಓರ್ವ ಉಗ್ರ ಹತ

Encounter in Kupwara

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ಕುಪ್ವಾರ ಜಿಲ್ಲೆಯಲ್ಲಿ ಶನಿವಾರ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಮೂವರು ಸೈನಿಕರು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ (Encounter in Kupwara). ಘಟನೆಯಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ.

ಜಿಲ್ಲೆಯ ಕುಮ್ಕಾರಿ (Kumkari) ಪ್ರದೇಶದಲ್ಲಿ ಸೈನಿಕರು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಎನ್‌ಕೌಂಟರ್ ಪ್ರಾರಂಭವಾಯಿತು. ಈ ವೇಳೆ ಸೈನಿಕರು ಗಾಯಗೊಂಡರು. ಇದು ಮೂರು ದಿನಗಳಲ್ಲಿ ಈ ಪ್ರದೇಶದಲ್ಲಿ ನಡೆದ ಎರಡನೇ ಎನ್‌ಕೌಂಟರ್. ಇಲ್ಲಿ ಭಯೋತ್ಪಾದಕರ ದಂಡು ಬೀಡು ಬಿಟ್ಟಿದೆ ಎನ್ನುವ ಖಚಿತ ಮಾಹಿತಿ ಮೇರೆ ಸೈನಿಕರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆ ಹೆಚ್ಚಾಗಿದ್ದು, ಇದನ್ನು ಮಟ್ಟ ಹಾಕಲು ಯೋಧರು ನಿರತರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಈಗಾಗಲೇ ಹಲವು ಭಯೋತ್ಪಾದಕರು ಹತರಾಗಿದ್ದಾರೆ.

ಜುಲೈ 24ರಂದು ಕುಪ್ವಾರಾ ಜಿಲ್ಲೆಯ ಕೌಟ್‌ನ ತ್ರಿಮುಖ್ ಟಾಪ್ ಬಳಿ ಸೇನಾ ಸಿಬ್ಬಂದಿಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಯೋತ್ಪಾದಕನೊಬ್ಬ ಹತನಾಗಿದ್ದ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನೆ ಜಂಟಿಯಾಗಿ ನಡೆಸಿದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಎನ್‌ಸಿಒ ನಿಯೋಜಿತ ಅಧಿಕಾರಿಯೊಬ್ಬರು ಗಾಯಗೊಂಡಿದ್ದರು.

ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಇನ್ನು ಜುಲೈ 18ರಂದು ಕುಪ್ವಾರಾ ಜಿಲ್ಲೆಯಲ್ಲಿ ಯೋಧರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಕೇರನ್‌ ಗಡಿ ನಿಯಂತ್ರಣ ರೇಖೆ ಬಳಿ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಘಟನೆಯಲ್ಲಿ ಒಬ್ಬ ಯೋಧ ಗಂಭೀರವಾಗಿ ಗಾಯಗೊಂಡಿದ್ದರು.

ಜಡ್ಡಾನ ಬಾಟಾ ಗ್ರಾಮದಲ್ಲಿ ಉಗ್ರರು ಬೀಡು ಬಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸೇನೆಗೆ ಬೆಳ್ಳಂಬೆಳಗ್ಗೆ 2 ಗಂಟೆಗೆ ಸೇನೆ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಶೋಧ ಕಾರ್ಯದ ವೇಳೆ ಸರ್ಕಾರಿ ಶಾಲೆಯೊಳಗಿನ ತಾತ್ಕಾಲಿಕ ಭದ್ರತಾ ಶಿಬಿರದ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದರು.

ಈ ಬಗ್ಗೆ ಜಮ್ಮುವಿನ ರಕ್ಷಣಾ ಇಲಾಖೆ ಪಿಆರ್‌ಒ ಪ್ರತಿಕ್ರಿಯಿಸಿ, ಉಧಂಪುರದ ಏರ್ ಫೋರ್ಸ್ ಸ್ಟೇಷನ್‌ನಿಂದ ಎಎಲ್‌ಎಚ್‌ನ ತ್ವರಿತ ಕ್ರಮವು ದೋಡಾದಲ್ಲಿ (ಜೆ&ಕೆ) ತೀವ್ರವಾಗಿ ಗಾಯಗೊಂಡ ಸೈನಿಕನ ಜೀವವನ್ನು ಉಳಿಸಿತ್ತು. ಸವಾಲಿನ ಹವಾಮಾನದ ಹೊರತಾಗಿಯೂ, ಉಧಮ್‌ಪುರದ ಕಮಾಂಡ್ ಆಸ್ಪತ್ರೆಯಲ್ಲಿ ಸಕಾಲಿಕ ವೈದ್ಯಕೀಯ ಆರೈಕೆಯನ್ನು ಖಾತರಿಪಡಿಸುವ ಮೂಲಕ ಸ್ಥಳಾಂತರಿಸುವಿಕೆ ಯಶಸ್ವಿಯಾಗಿದೆ. ಅವರ ಸಮರ್ಪಣೆ ಮತ್ತು ಶೌರ್ಯಕ್ಕಾಗಿ ತಂಡಕ್ಕೆ ಅಭಿನಂದನೆಗಳು ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿತ್ತು.

ಇದನ್ನೂ ಓದಿ: Terrorists Killed: ಸೇನೆಯ ಭರ್ಜರಿ ಬೇಟೆ; ಎಲೆಕ್ಷನ್‌ ಹಾಳುಗೆಡವಲು ಗಡಿ ನುಸುಳುತ್ತಿದ್ದ ನಾಲ್ವರು ಉಗ್ರರ ಹತ್ಯೆ

ನಾಲ್ವರು ಯೋಧರು ಹುತಾತ್ಮ

ದೋಡಾ ಜಿಲ್ಲೆಯ ದೇಸಾ ಎಂಬ ಪ್ರದೇಶದ ಅರಣ್ಯದಲ್ಲಿ ಉಗ್ರರು ಅಡಗಿರುವ ಕುರಿತು ನಿಖರ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿಯು ಜುಲೈ 16ರ ರಾತ್ರಿಯೇ ಕಾರ್ಯಾಚರಣೆ ಆರಂಭಿಸಿದ್ದರು. ಈ ಕಾರ್ಯಾಚರಣೆ ವೇಳೆ ಭಯೋತ್ಪಾದಕರು ಯೋಧರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದರು. ಇದೇ ವೇಳೆ ಯೋಧರು ಕೂಡ ಗುಂಡಿನ ದಾಳಿ ಆರಂಭಿಸಿದ್ದರು. ರಾತ್ರೋರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

Exit mobile version