ಜಮ್ಮು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರ ಕಣಿವೆಯ ರಾಜೌರಿಯ ಭೂಸೇನಾ ನೆಲೆ ಬಳಿ ಉಗ್ರರು ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಇಬ್ಬರು ಯೋಧರು ಗಾಯಗೊಂಡಿದ್ದಾರೆ.
ರಾಜೌರಿಯಿಂದ 25 ಕಿಮೀ ದೂರದ ಪರ್ಗಲ್ ಎಂಬಲ್ಲಿರುವ ಸೇನಾ ಶಿಬಿರದ ಬೇಲಿಯನ್ನು ದಾಟಿ ಒಳನುಸುಳಲು ಯತ್ನಿಸುತ್ತಿದ್ದ ಉಗ್ರರನ್ನು ಸೇನಾಯೋಧರು ತಡೆದಾಗ ಗುಂಡಿನ ಚಕಮಕಿ ನಡೆಯಿತು ಎಂದು ಪೊಲೀಸ್ ಹೆಚ್ಚುವರಿ ಡೈರೆಕ್ಟರ್ ಜನರಲ್ ಮುಕೇಶ್ ಸಿಂಗ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮೂವರು ಯೋಧರು ಬಲಿಯಾದರು. ಇಬ್ಬರು ಭಯೋತ್ಪಾದಕರು ಸತ್ತರು.
ರಾಜೌರಿ ಮುಂತಾದ ಪ್ರದೇಶಗಳು ಕಳೆದ ಕೆಲ ವರ್ಷಗಳಲ್ಲಿ ಭಯೋತ್ಪಾದನೆಯಿಂದ ಬಹುತೇಕ ಮುಕ್ತವಾಗಿದ್ದವು. ಆದರೆ ಕಳೆದ ಆರು ತಿಂಗಳುಗಳಿಂದ ಜಮ್ಮುವಿನಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗಿವೆ. ಲಷ್ಕರೆ ತಯ್ಬಾ ಭಯೋತ್ಪಾದಕ ಗುಂಪು ಈ ದಾಳಿಯ ಹಿಂದೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಪೊಲೀಸರು ಲಷ್ಕರೆ ಗುಂಪಿನ ಸಂಚೊಂದನ್ನು ಭೇದಿಸಿದ್ದರು. ಈ ಸಂದರ್ಭದಲ್ಲಿ ಬಂಧಿಸಲಾದ ತಾಲಿಬ್ ಹುಸೇನ್ ಶಾ ಎಂಬಾತ ಹಿಂದೆ ಬಿಜೆಪಿ ನಾಯಕನಾಗಿದ್ದನೆಂದು ಹೇಳಲಾಗಿತ್ತು. ಇವನು ಈ ಪ್ರದೇಶದಲ್ಲಿ ಹಿಂದೆ ಹಲವಾರು ಉಗ್ರ ದಾಳಿಗಳಿಗೆ ಕಾರಣನಾಗಿದ್ದ. ಈತನ ಬಳಿಯಿಂದ ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಪುಲ್ವಾಮಾದಲ್ಲಿ ಬುಧವಾರ ಪೊಲೀಸರು 25 ಕಿಲೋದಷ್ಟು ಅತ್ಯಾಧುನಿಕ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದರು. 2016ರಲ್ಲಿ ಇಂಥದೇ ಸ್ಫೋಟಕ ಬಳಸಿ ಪುಲ್ವಾಮಾದಲ್ಲಿ ಸೇನಾ ವಾಹನಗಳ ಮೇಲೆ ದಾಳಿ ನಡೆಸಲಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್; ಪಾಕಿಸ್ತಾನದ ಇಬ್ಬರು ಸೇರಿ 4 ಭಯೋತ್ಪಾದಕರ ಹತ್ಯೆ