Site icon Vistara News

Encounter in Rajouri: ರಾಜೌರಿಯಲ್ಲಿ ಎನ್​ಕೌಂಟರ್​; ಮೂರು ಉಗ್ರರು ಟ್ರ್ಯಾಪ್​, ಒಬ್ಬ ಯೋಧನಿಗೆ ಗಾಯ

Encounter underway in Rajouri 3 terrorists Trapped

#image_title

ರಾಜೌರಿ: ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆ (Encounter In Rajouri) ಯಲ್ಲಿ ಉಗ್ರರ ವಿರುದ್ಧ ಭದ್ರತಾ ಸಿಬ್ಬಂದಿ (Security Force) ಕಾರ್ಯಾಚರಣೆ ಮುಂದುವರಿದಿದೆ. ಕಳೆದ ಮೂರು ದಿನಗಳಿಂದಲೂ ಇಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಎನ್​ಕೌಂಟರ್​ ನಡೆಯುತ್ತಲೇ ಇದೆ. ಇಂದು ಬೆಳಗ್ಗೆ ರಾಜೌರಿಯ ಕಂಡಿ ಹ್ಯಾಮ್ಲೆಟ್​ ಏರಿಯಾದಲ್ಲಿರುವ ಕೇಸರಿ ಎಂಬಲ್ಲಿ ಎನ್​ಕೌಂಟರ್ ನಡೆಯುತ್ತಿದ್ದು, ಈ ಸ್ಥಳವನ್ನು ಸಂಪೂರ್ಣವಾಗಿ ಭದ್ರತಾ ಪಡೆ ಸಿಬ್ಬಂದಿ ಸುತ್ತುವರಿದಿದ್ದಾರೆ. ಇಲ್ಲಿ ಮೂರ್ನಾಲ್ಕು ಉಗ್ರರು ಸಿಲುಕಿರುವ ಶಂಕೆಯಿದೆ. ಉಗ್ರರು ಪೂರ್ಣವಾಗಿ ಟ್ರ್ಯಾಪ್​ ಆಗಿದ್ದು ಅವರನ್ನು ಜೀವಂತವಾಗಿ ಅಥವಾ ಕೊಂದಾದರೂ ಸೆರೆ ಹಿಡಿಯುವ ಕಾಯಕದಲ್ಲಿ ಭದ್ರತಾ ಸಿಬ್ಬಂದಿ ತೊಡಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಯೋಧನೊಬ್ಬ ಗಾಯಗೊಂಡಿದ್ದಾರೆ.

ಕೇಸರಿ ಎಂಬಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಪಡೆದ ಬಳಿಕ ಸಿಆರ್​ಪಿಎಫ್​ ಮತ್ತು ಭಾರತೀಯ ಸೇನೆ ಸಿಬ್ಬಂದಿ ಅಲ್ಲಿಗೆ ತೆರಳಿ, ಇಡೀ ಪ್ರದೇಶವನ್ನು ಸುತ್ತುವರಿದಿದ್ದಾರೆ. ಉಗ್ರರಿಗಾಗಿ ಹುಡುಕಾಟ ನಡೆಯುತ್ತಿದೆ. ಹೀಗೆ ಹುಡುಕುತ್ತಿದ್ದಾಗಲೇ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದಕ್ಕೂ ಮೊದಲು ಗುರುವಾರ ಬಾರಾಮುಲ್ಲಾ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಅವರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇವರಿಬ್ಬರೂ ಲಷ್ಕರೆ ತೊಯ್ಬಾ ಸಂಘಟನೆಗೆ ಸೇರಿದವರಾಗಿದ್ದು, ಒಬ್ಬನ ಹೆಸರು ಶಕೀರ್ ಮಜೀದ್ ನಜರ್ ಮತ್ತು ಇನ್ನೊಬ್ಬ ಹನಾನ್ ಅಹ್ಮದ್​ ಸೇಹ್​. ಇಬ್ಬರೂ ಶೋಪಿಯಾನ್​ ಜಿಲ್ಲೆಗೆ ಸೇರಿದವರು.

ಇದನ್ನೂ ಓದಿ: Terrorists Killed: ಬಾರಾಮುಲ್ಲಾದಲ್ಲಿ ಇಬ್ಬರು ಲಷ್ಕರೆ ತೊಯ್ಬಾ ಉಗ್ರರ ಹತ್ಯೆ; ಶಸ್ತ್ರಾಸ್ತ್ರ ವಶ

ಪೂಂಚ್​​ನಲ್ಲಿ ಸೇನಾ ವಾಹನದ ಮೇಲೆ ಉಗ್ರರು ದಾಳಿ ಮಾಡಿ, ಐವರು ಯೋಧರು ಮೃತಪಟ್ಟ ಬಳಿಕ ಉಗ್ರರ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಿದೆ. ಬುಧವಾರ ಜಮ್ಮು-ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನಾ ಸಿಬ್ಬಂದಿ ಕುಪ್ವಾರಾದಲ್ಲಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದರು.

Exit mobile version