ಚೆನ್ನೈ: ಕೇಂದ್ರ ಸರ್ಕಾರವು ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಆರೋಪಗಳು ಹಲವು ವರ್ಷಗಳಿಂದ ಕೇಳಿಬರುತ್ತಿವೆ. ಅದರಲ್ಲೂ, ದಕ್ಷಿಣ ಭಾರತದಲ್ಲಿ ಹಿಂದಿ ಭಾಷೆಯ ವಿರುದ್ಧ ಆಕ್ರೋಶವೇ ವ್ಯಕ್ತವಾಗುತ್ತಿದೆ. “ಹಿಂದಿ ದಿವಸ”ವನ್ನು ವಿರೋಧಿಸಲಾಗುತ್ತಿದೆ. ಇಂತಹ ಆರೋಪ, ಆಕ್ರೋಶದ ಮಧ್ಯೆಯೇ, “ನೀವು ತಮಿಳು ಭಾಷೆಗೆ ಉತ್ತೇಜನ ನೀಡಿ. ಆದರೆ, ಹಿಂದಿ ಭಾಷೆಯನ್ನು ಅವಮಾನಿಸದಿರಿ” ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ.
“ನಾವು ಯಾವುದೇ ಸಿದ್ಧಾಂತವನ್ನು ಅನುಸರಿಸುವುದಕ್ಕೂ ಬೇರೆಯವರು ಮತ್ತೊಂದು ಭಾಷೆ ಕಲಿಯುವುದನ್ನು ವಿರೋಧಿಸುವುದಕ್ಕೂ ವ್ಯತ್ಯಾಸವಿದೆ. ಹಾಗಾಗಿ, ಯಾರೇ ಆಗಲಿ ಹಿಂದಿ ಅಥವಾ ಬೇರಾವುದೇ ಭಾಷೆಯನ್ನು ಕಲಿಯಲು ಮುಂದಾದರೆ ಅವರನ್ನು ತೆಗಳದಿರಿ. ನೀವು ತಮಿಳನ್ನು ಆರಾಧಿಸಿ, ಉತ್ತೇಜನ ನೀಡಿ, ಆದರೆ, ಹಿಂದಿಯನ್ನು ಅವಮಾನ ಮಾಡದಿರಿ” ಎಂದು “ಹಿಂದಿ ಹೇರಿಕೆ” ಕುರಿತು ಮಾಧ್ಯಮ ಸಂಸ್ಥೆಯೊಂದು ಆಯೋಜಿಸಿದ್ದ ಸಂವಾದದಲ್ಲಿ ಮನವಿ ಮಾಡಿದ್ದಾರೆ.
“ಭಾಷೆಯ ವಿಚಾರದಲ್ಲಿ ಭೇದ-ಭಾವ ಮಾಡುವುದು, ನಿರ್ಲಕ್ಷ್ಯ ಧೋರಣೆ ಅನುಸರಿಸುವುದು ಸರಿಯಲ್ಲ. ನಾನು ಕಾಲೇಜು ಓದುವಾಗಲೂ ಹಿಂದಿ ಅಥವಾ ಸಂಸ್ಕೃತ ಕಲಿಯುವವರನ್ನು ತಾತ್ಸಾರದಿಂದ ನೋಡಲಾಗುತ್ತಿತ್ತು. ಈಗಲೂ ಹಿಂದಿ ಅಥವಾ ಸಂಸ್ಕೃತದಲ್ಲಿ ಟಾಪರ್ ಆಗಿ ಹೊರಹೊಮ್ಮಿದರೆ ಯಾವುದೇ ಸ್ಕಾಲರ್‌ಶಿಪ್ ಸಿಗುವುದಿಲ್ಲ. ಇನ್ನಾದರೂ ಇಂತಹ ತಾರತಮ್ಯ ಧೋರಣೆ ಅನುಸರಿಸುವುದನ್ನು ನಿಲ್ಲಿಸೋಣ” ಎಂದಿದ್ದಾರೆ.
ಇದನ್ನೂ ಓದಿ | ಹಿಂದಿ ದಿವಸ ವಿರೋಧಿಸಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ JDS ಪ್ರತಿಭಟನೆ