Site icon Vistara News

NIA Raid | ಪಿಎಫ್​ಐ ನಿಷೇಧ ಪ್ರಕ್ರಿಯೆಯ ಮೊದಲ ಹೆಜ್ಜೆಯೇ ಇಂದಿನ ಎನ್​ಐಎ ದಾಳಿ?

PFI

ನವ ದೆಹಲಿ: ಪಾಪ್ಯುಲರ್ ಫ್ರಂಟ್ ಆಫ್​ ಇಂಡಿಯಾ (ಪಿಎಫ್​ಐ) ಸಂಘಟನೆಗೆ ಇಂದು ದೊಡ್ಡ ಆಘಾತವೇ ಉಂಟಾಗಿದೆ. ಈ ಸಂಘಟನೆಗೆ ಉಗ್ರರ ನಂಟಿದೆ ಎಂಬ ಆರೋಪ ಬಲವಾದ ಬೆನ್ನಲ್ಲೇ ರಾಷ್ಟ್ರೀಯ ತನಿಖಾ ದಳ ಇಂದು ದೇಶವ್ಯಾಪಿ ಸುಮಾರು 13 ರಾಜ್ಯಗಳ ಪಿಎಫ್​ಐ ಮುಖಂಡರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದೆ. ಹಲವು ಮಹತ್ವದ ದಾಖಲೆಗಳು ಸಿಕ್ಕಿದ್ದಾಗಿ ಹೇಳಲಾಗಿದೆ. ಹಲವು ವರ್ಷಗಳಿಂದಲೂ ಪಿಎಫ್​ಐ ನಿಷೇಧದ ಆಗ್ರಹ ಕೇಳಿಬರುತ್ತಿದೆ. ಈಗ ಎನ್​ಐಎ ಮತ್ತು ಇಡಿ ಜಂಟಿಯಾಗಿ ಇಷ್ಟು ದೊಡ್ಡಮಟ್ಟದಲ್ಲಿ ದಾಳಿ ನಡೆಸಿದ್ದು, ಸಂಘಟನೆ ನಿಷೇಧಕ್ಕೆ ಮುನ್ನುಡಿಯಾ ಎಂಬುದೊಂದು ಕುತೂಹಲವೂ ಎದ್ದಿದೆ.

ಪಿಎಫ್​ಐನ ಪ್ರಮುಖ ನಾಯಕರು ಸೇರಿ ಹಲವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ವಿರೋಧಿ ಕಾಯ್ದೆಯಡಿ ಕೇಸ್​ ದಾಖಲಾಗಿದೆ. ಪಿಎಫ್​ಐ ಭಯೋತ್ಪಾದನಾ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವುದು, ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ, ಕೋಮುಗಲಭೆ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಈಗಾಗಲೇ ಸಾಬೀತಾಗಿದ್ದರೂ, ಕೇಂದ್ರ ಸರ್ಕಾರ ಯಾಕೆ ಸಂಘಟನೆಯನ್ನು ನಿಷೇಧಿಸುತ್ತಿಲ್ಲ ಎಂಬ ಆಕ್ರೋಶವೂ ವ್ಯಕ್ತವಾಗುತ್ತಿದೆ. ಹೀಗಿರುವಾಗ ಇಂದು ನಡೆದ ದಾಳಿ, ಪಿಎಫ್​ಐ ಸಂಘಟನೆಯ ನಿಷೇಧಕ್ಕೊಂದು ದಾರಿ ಎಂದೇ ವಿಶ್ಲೇಷಿಸಲಾಗುತ್ತಿದೆ. ‘ಪಿಎಫ್​ಐ ನಿಷೇಧಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂಬ ವಾದವನ್ನು ತಳ್ಳಿ ಹಾಕಲು ಆಗದು. ನಾವು ಈಗಿನ ಪರಿಸ್ಥಿತಿಯನ್ನು ಕೂಲಂಕಷವಾಗಿ ವಿಶ್ಲೇಷಣೆ ಮಾಡುತ್ತಿದ್ದೇವೆ’ ಎಂದು ಕೇಂದ್ರ ಸರ್ಕಾರದ ಮೂಲಗಳೇ ಹೇಳಿದ್ದಾಗಿ ವರದಿಯಾಗಿದೆ.

ಇತ್ತೀಚೆಗೆ ಬಿಹಾರದಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದು ಇದೇ ಪಿಎಫ್​ಐ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಅಲ್ಲಿ ಸಿಕ್ಕ ದಾಖಲೆಯಲ್ಲಿ ‘2047ರ ಹೊತ್ತಿಗೆ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುತ್ತೇವೆ’ ಎಂಬ ಬರಹ ಇತ್ತು. ಈ ವಿಷಯ ಬೆಳಕಿಗೆ ಬಂದಾಗಿನಿಂದಲೂ ಪಿಎಫ್​ಐನ್ನು ಕೇಂದ್ರ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ತನಿಖೆಯನ್ನು ತೀಕ್ಷ್ಣಗೊಳಿಸಿದೆ. ಸಂಘಟನೆ ಬ್ಯಾನ್​​ ಮಾಡುವ ಒಂದು ಭಾಗವಾಗಿಯೇ ಇವತ್ತು ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: NIA Raid | 15 ರಾಜ್ಯ, 93 ಸ್ಥಳ, ಪಿಎಫ್‌ಐನ 45 ಮುಖಂಡರ ಬಂಧನ, ಇದು ಎನ್‌ಐಎ ದಾಳಿಯ ಇಡೀ ದಿನದ ಚಿತ್ರಣ

Exit mobile version