ಚಂಡೀಗಢ: ಪಂಜಾಬ್ನ ತರನ್ ತಾರನ್ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ಶುಕ್ರವಾರ ತಡರಾತ್ರಿ ನಡೆದ ರಾಕೆಟ್ ಚಾಲಿತ ಗ್ರೆನೇಡ್ ದಾಳಿಯು ವೈರಿರಾಷ್ಟ್ರದ ಕೃತ್ಯ ಎಂದು ಪಂಜಾಬ್ ಪೊಲೀಸರು (Punjab Attack) ತಿಳಿಸಿದ್ದಾರೆ. ಆ ಮೂಲಕ ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ಆರೋಪ ಮಾಡಿದ್ದಾರೆ.
“ತರನ್ ತಾರನ್ ಜಿಲ್ಲೆಯ ಗಡಿ ಭಾಗದ ಅಮೃತಸರ-ಭಟಿಂಡಾ ಹೆದ್ದಾರಿಯಲ್ಲಿರುವ ಸರಹಲಿ ಪೊಲೀಸ್ ಠಾಣೆ ಮೇಲೆ ಗ್ರೆನೇಡ್ ದಾಳಿ ಮಾಡಿರುವುದು ವೈರಿರಾಷ್ಟ್ರದ ಕೃತ್ಯವಾಗಿದೆ. ಗಡಿ ರಾಷ್ಟ್ರದಿಂದಲೇ ರಾಕೆಟ್‌ಚಾಲಿತ ಗ್ರೆನೇಡ್ ಸಾಗಿಸಲಾಗಿದ್ದು, ಇಂತಹ ದಾಳಿಗಳ ಮೂಲಕ ಭಾರತವನ್ನು ಒಡೆಯುವುದು ವೈರಿರಾಷ್ಟ್ರದ ಕುತಂತ್ರವಾಗಿದೆ. ಆದರೆ, ಇದಕ್ಕೆ ಪೊಲೀಸರು ಅವಕಾಶ ಮಾಡಿಕೊಡುವುದಿಲ್ಲ” ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ಹೇಳಿದ್ದಾರೆ.
ಶುಕ್ರವಾರ ರಾತ್ರಿ ೧೧.೨೨ರ ಸುಮಾರಿಗೆ ದಾಳಿ ನಡೆಸಲಾಗಿದೆ. ಠಾಣೆಯ ಹೊರಭಾಗದಲ್ಲಿರುವ ಕಂಬವೊಂದಕ್ಕೆ ರಾಕೆಟ್ ಬಂದು ಬಡಿದು, ಮರಳಿ ಪುಟಿದಿದ್ದರಿಂದ ಹೆಚ್ಚೇನೂ ತೊಂದರೆಯಾಗಲಿಲ್ಲ. ಪೊಲೀಸ್ ಠಾಣೆಯ ಬಾಗಿಲಿನ ಗಾಜು ಒಡೆದು ಹೋಗಿದ್ದು ಬಿಟ್ಟರೆ, ಕಟ್ಟಡವೂ ಜಾಸ್ತಿ ಹಾನಿಯಾಗಿಲ್ಲ. ಮತ್ತೊಂದೆಡೆ, ದಾಳಿಯ ಹೊಣೆಯನ್ನು ಖಲಿಸ್ತಾನ್ ಉಗ್ರರು ಹೊತ್ತುಕೊಂಡಿದ್ದಾರೆ. ದಾಳಿಯ ಸಿಸಿಟಿವಿ ದೃಶ್ಯಗಳೂ ಲಭ್ಯವಾಗಿವೆ.
ಇದನ್ನೂ ಓದಿ | ಪಂಜಾಬ್ ಪೊಲೀಸ್ ಠಾಣೆ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ ದಾಳಿ; ಬಾಗಿಲಿನ ಗಾಜು ಪುಡಿಪುಡಿ, ಪಾಕ್ ಕೈವಾಡ ಶಂಕೆ