Site icon Vistara News

ಬಂಗಾಳ ಹಗರಣ; ಟಿಎಂಸಿ ನಾಯಕನ ಬಂಧನದ ವೇಳೆ ಇ.ಡಿ ಕಾರಿನ ಮೇಲೆ ಕಲ್ಲು ತೂರಾಟ

ED Vehicle

Enforcement Directorate team attacked, TMC leader arrested during raids in Bengal

ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಟಿಎಂಸಿ ಕಾರ್ಯಕರ್ತರು, ಟಿಎಂಸಿ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸುವುದು, ಚುನಾವಣೆ ವೇಳೆ ಹಿಂಸಾತ್ಮಕ ದಾಳಿಗಳನ್ನು ನಡೆಸುವುದು ಸಾಮಾನ್ಯ ಎಂಬಂತಾಗಿದೆ. ಆದರೆ, ಉತ್ತರ 24 ಪರಗಣ (North 24 Parganas) ಜಿಲ್ಲೆಯಲ್ಲಿ ಪಡಿತರ ವಿತರಣೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ತನಿಖೆಗೆ ತೆರಳಿದ ಜಾರಿ ನಿರ್ದೇಶನಾಲಯದ (E.D) ಅಧಿಕಾರಿಗಳ ವಾಹನದ ಮೇಲೆಯೇ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ದಾಳಿಯ ತೀವ್ರತೆಗೆ ಇ.ಡಿ ಅಧಿಕಾರಿಗಳು ಇದ್ದ ವಾಹನದ ನಾಲ್ಕೂ ಕಿಟಕಿಗಳು ಪುಡಿಪುಡಿಯಾಗಿವೆ.

ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಪ್ರದೇಶದ ಹಲವೆಡೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಡಿತರ ವಿತರಣೆ ವೇಳೆ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದ್ದಾರೆ. ಆದರೆ, ಇದೇ ಪ್ರಕರಣದಲ್ಲಿ ಟಿಎಂಸಿ ಸ್ಥಳೀಯ ಮುಖಂಡ ಶಹಜಹಾನ್ ಶೇಖ್‌ ಎಂಬುವರ ಮನೆಯ ಮೇಲೆ ದಾಳಿ ನಡೆಸಲು ಇ.ಡಿ ಅಧಿಕಾರಿಗಳು ಮುಂದಾಗಿದ್ದಾರೆ. ಇದೇ ವೇಳೆ, ಇ.ಡಿ ಅಧಿಕಾರಿಗಳ ವಾಹನದ ಮೇಲೆ ದುಷ್ಕರ್ಮಿಗಳು ಕಲ್ಲುತೂರಾಟ ಮಾಡಿದ್ದಾರೆ. ದಾಳಿಯಲ್ಲಿ ಇ.ಡಿ ಕೆಲ ಅಧಿಕಾರಿಗಳಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಕೊನೆಗೂ ಟಿಎಂಸಿ ನಾಯಕನ ಬಂಧನ

ಗ್ರಾಮಕ್ಕೆ ಇ.ಡಿ ಅಧಿಕಾರಿಗಳ ವಾಹನ ತೆರಳುತ್ತಲೇ ಸುಮಾರು 200 ಸ್ಥಳೀಯರು ವಾಹನವನ್ನು ಸುತ್ತುವರಿದಿದ್ದಾರೆ. ಕೇಂದ್ರೀಯ ಸಶಸ್ತ್ರ ಅರೆಮಿಲಿಟರಿ ಪಡೆ ಹಾಗೂ ಇ.ಡಿ ಅಧಿಕಾರಿಗಳನ್ನು ಸುತ್ತುವರಿದು ಜನ ದಾಳಿ ಮಾಡಿದ್ದಾರೆ. ಇಷ್ಟಾದರೂ ಅಧಿಕಾರಿಗಳು ಶಹಜಹಾನ್ ಶೇಖ್‌‌ ನಿವಾಸದ ಮೇಲೆ ದಾಳಿ ನಡೆಸಿ, ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಗೊಂಡಿರುವ ಕೆಲ ಅಧಿಕಾರಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಇ.ಡಿ ಅಧಿಕಾರಿಗಳ ವಾಹನದ ಮೇಲಿನ ದಾಳಿಯನ್ನು ಬಿಜೆಪಿ ಖಂಡಿಸಿದೆ.

ಇದನ್ನೂ ಓದಿ: Jyotipriya Mallick: ಪಡಿತರ ಹಗರಣ; ಪಶ್ಚಿಮ ಬಂಗಾಳ ಸಚಿವ ಜ್ಯೋತಿಪ್ರಿಯ ಮಲ್ಲಿಕ್‌ ಬಂಧನ

ಪಶ್ಚಿಮ ಬಂಗಾಳದಲ್ಲಿ ಪಡಿತರ ಹಂಚಿಕೆ ಹಗರಣವು ಭಾರಿ ಸುದ್ದಿಯಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅರಣ್ಯ ಸಚಿವ ಜ್ಯೋತಿಪ್ರಿಯ ಮಲ್ಲಿಕ್‌ ಅವರನ್ನು ಕಳೆದ ವರ್ಷದ ಅಕ್ಟೋಬರ್‌ನಲ್ಲಿಯೇ ಬಂಧಿಸಲಾಗಿದೆ. ಜ್ಯೋತಿಪ್ರಿಯ ಅವರು ಆಹಾರ ಸಚಿವರಾಗಿದ್ದಾಗ ಸಾರ್ವಜನಿಕರಿಗೆ ಪಡಿತರ ವಿತರಣೆ ವೇಳೆ ಭಾರಿ ಹಗರಣ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಕಳೆದ ಒಂದು ವರ್ಷದಿಂದ ಬಿಜೆಪಿ ನಾಯಕರು ಇದೇ ಆರೋಪ ಮಾಡುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಈಗನ ಆಹಾರ ಸಚಿವರ ಮನೆ ಮೇಲೂ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇನ್ನು ಜ್ಯೋತಿಪ್ರಿಯ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸುತ್ತಲೇ, “ಜ್ಯೋತಿಪ್ರಿಯ ಅವರಿಗೆ ಏನಾದರೂ ಆದರೆ, ಬಿಜೆಪಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು” ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version