ನವದೆಹಲಿ: ಕೇಂದ್ರೀಯ ಸಶಸ್ತ್ರ ಪಡೆಗಳ ಪರೀಕ್ಷೆಗಳನ್ನು ಇಂಗ್ಲಿಷ್, ಹಿಂದಿ ಹೊರತಾಗಿ ಕನ್ನಡವೂ ಸೇರಿದಂತೆ 13 ಸ್ಥಳೀಯ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಿದ ಬೆನ್ನಲ್ಲೇ ಮತ್ತೊಂದು ಅಂಥದ್ದೇ ಸೌಲಭ್ಯ ಒದಗಿ ಬಂದಿದೆ. ಉತನ್ನ ಶಿಕ್ಷಣದ ಕೋರ್ಸ್ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುತ್ತಿದ್ದರೂ ವಿದ್ಯಾರ್ಥಿಗಳಿಗೆ ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(UGC)ವು ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದಿದೆ. ಇದರಿಂದಾಗಿ ಕನ್ನಡವೂ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಉನ್ನತ ಶಿಕ್ಷಣ ಪರೀಕ್ಷೆಗಳನ್ನು ಬರೆಯಲು ಅವಕಾಶವೂ ದೊರೆಯಲಿದೆ(Exam in Local Language).
ಪರೀಕ್ಷೆಯನ್ನು ಸ್ಥಳೀಯ ಭಾಷೆಯಲ್ಲಿ ಬರೆಯಲು ಅವಕಾಶ ನೀಡುವುದು ಮಾತ್ರವಲ್ಲದೇ, ವಿಶ್ವವಿದ್ಯಾಲಯಗಳು ಸ್ಥಳೀಯ ಭಾಷೆಗಳಲ್ಲೇ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ವಿಶ್ವ ವಿದ್ಯಾಲಯಗಳ ಧನ ಸಹಾಯ ಆಯೋಗದ ಅಧ್ಯಕ್ಷ ಎಂ ಜಗದೀಶ್ ಕುಮಾರ್ ಅವರು ಹೇಳಿದ್ದಾರೆ.
ಶಿಕ್ಷಣದಲ್ಲಿ ನಿರಂತರವಾಗಿ ಭಾರತೀಯ ಭಾಷೆಗಳ ಬಳಕೆ ಹಾಗೂ ಉತ್ತೇಜನವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ವಿಷಯವಾಗಿದೆ. ಇದು ಮಾತೃಭಾಷೆ ಮತ್ತು ಸ್ಥಳೀಯ ಭಾಷೆಗಳಲ್ಲಿ ಬೋಧನೆ ಮತ್ತು ಬೋಧನೆಯ ಮಹತ್ವವನ್ನು ಒತ್ತಿಹೇಳುತ್ತದೆ. ಉತ್ತಮ ಅರಿವಿನ ಸಾಧನೆಗಾಗಿ ಮತ್ತು ಕಲಿಯುವವರ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಗಾಗಿ ಎಲ್ಲಾ ಭಾರತೀಯ ಭಾಷೆಗಳಲ್ಲಿ ಸಂವಹನವನ್ನು ಉತ್ತಮಗೊಳಿಸುವ ಅಗತ್ಯವನ್ನು ಇದು ಒತ್ತಿಹೇಳುತ್ತದೆ ಎಂದು ಅವರು ತಿಳಿಸಿದ್ದಾರೆ.
ಒಂದು ವೇಳೆ, ಕೋರ್ಸ್ ಇಂಗ್ಲಿಷ್ ಮಾಧ್ಯಮದಲ್ಲೇ ಬೋಧನೆಯಾಗುತ್ತಿದ್ದರೂ ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು. ಮೂಲ ಬರವಣಿಗೆಯನ್ನು ಸ್ಥಳೀಯ ಭಾಷೆಗೆ ಭಾಷಾಂತರಿಸುವುದನ್ನು ಉತ್ತೇಜಿಸಬೇಕು. ಹಾಗೆಯೇ, ಸ್ಥಳೀಯ ಭಾಷೆಯನ್ನು ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಯಲ್ಲೂ ಪರಿಣಾಮಕಾರಿಯಾಗಿ ಬಳಸಬೇಕು ಎಂದು ಯುಜಿಸಿ ವಿಶ್ವವಿದ್ಯಾಲಯಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
ವಿದ್ಯಾರ್ಥಿಗಳು ಸ್ಥಳೀಯ ಭಾಷೆಯಲ್ಲಿ ಬರೆದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಗ್ಗೆ ತಿಳಿಸಿರುವ ಯುಜಿಸಿ, ಒಂದು ವೇಳೆ ಮೌಲ್ಯಮಾಪಕರಿಗೆ ಸ್ಥಳೀಯ ಭಾಷೆಯ ಗೊತ್ತಿದ್ದರೆ ಇದು ಸುಲಭವಾಗಲಿದೆ. ಇಲ್ಲದಿದ್ದರೆ, ವಿಶ್ವವಿದ್ಯಾಲಯವು ಸ್ಥಳೀಯ ಭಾಷೆ ಗೊತ್ತಿರುವವರನ್ನು ಹುಡುಕಬೇಕಾಗುತ್ತದೆ ಎಂದು ಹೇಳಲಾಗಿದೆ. ಸ್ಥಳೀಯ ಭಾಷೆಯಲ್ಲಿ ಪರೀಕ್ಷೆಯನ್ನು ಬರೆಯಲು ಅವಕಾಶ ಕಲ್ಪಿಸುತ್ತಿರುವುದೇ, ವಿದ್ಯಾರ್ಥಿಗಳು ಮುಕ್ತವಾಗಿ ತಮ್ಮ ಭಾಷೆಯಲ್ಲಿ ಅಭಿವ್ಯಕ್ತಿಸಲು ಸಾಧ್ಯವಾಗಲಿ ಎಂಬುದಷ್ಟೇ ಎಂದು ಜಗದೀಶ್ ಕುಮಾರ್ ಹೇಳಿದ್ದಾರೆ.