Site icon Vistara News

Independence Day | ಭಾರತೀಯರ ಭದ್ರತೆ ಆದ್ಯತೆಯಾಗಲಿ; ಕೆನಡಾಕ್ಕೆ ಕರೆ ಮಾಡಿದ ಭಾರತ ಸರ್ಕಾರ

Independence Day

ಟೊರಂಟಾ: ಕೆನಡಾದಲ್ಲಿ ನೆಲೆಸಿರುವ ಭಾರತೀಯ ಮೂಲದವರು ಆಗಸ್ಟ್​ 15ರಂದು ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲು ನಿರ್ಧರಿಸಿ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಇದೇ ಮೊದಲ ಬಾರಿಗೆ ಭಾರತ ಕೇಂದ್ರ ಸರ್ಕಾರ ಕೆನಡಾ ಆಡಳಿತಕ್ಕೆ ಕರೆ ಮಾಡಿ, ‘ಕೆನಡಾದಲ್ಲಿ ಭಾರತೀಯರು ಸ್ವಾತಂತ್ರ್ಯ ದಿನ ಆಚರಿಸುವ ಸಂದರ್ಭದಲ್ಲಿ ಸೂಕ್ತ ಭದ್ರತೆ ಒದಗಿಸುವಂತೆ’ ಕೇಳಿಕೊಂಡಿದೆ. ಕೆನಡಾದಲ್ಲಿ ನೆಲೆ ನಿಂತಿರುವ ಭಾರತೀಯ ಮೂಲದವರು ಸಾಮಾನ್ಯವಾಗಿ ಪ್ರತಿವರ್ಷ ಸ್ವಾತಂತ್ರ್ಯೋತ್ಸವ ಆಚರಣೆ ಮಾಡುತ್ತಾರೆ. ಆದರೆ 2019ರಿಂದ ಇಲ್ಲಿಯವರೆಗೆ ಕೊವಿಡ್​ 19 ನಿರ್ಬಂಧ ಕಾರಣದಿಂದ ಭೌತಿಕವಾಗಿ ಸೇರಿ, ಒಂದೆಡೆ ಗುಂಪುಗೂಡಿ ಆಚರಿಸಿರಲಿಲ್ಲ. ಈ ಸಲ ಆಗಸ್ಟ್​ 15ಕ್ಕಾಗಿ ಸಕಲ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗುತ್ತಿದೆ. ಹೀಗಿರುವಾಗ ಕೆನಡಾದ ಒಟ್ಟಾವಾದಲ್ಲಿರುವ ಭಾರತೀಯ ಹೈಕಮಿಷನ್​, ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕರೆ ಮಾಡಿ, ರಾಜತಾಂತ್ರಿಕ ಸಂವಹನ ನಡೆಸಿದೆ. ‘ಭಾರತೀಯ ಸಮುದಾಯದವರ ಭದ್ರತೆಯನ್ನು ಆದ್ಯತೆಯಾಗಿ ಪರಿಗಣಿಸುವಂತೆ ತಿಳಿಸಿದೆ’

ಆಗಸ್ಟ್​ 15ರ ಸ್ವಾತಂತ್ರ್ಯೋತ್ಸವ, ಜನವರಿ 26 ಸೇರಿ ಇಂಥ ಹಲವು ಆಚರಣೆಗಳನ್ನು ಕೆನಡಾದಲ್ಲಿನ ಭಾರತೀಯ ಸಮುದಾಯದವರು ಮಾಡುತ್ತಾರೆ. ಆದರೆ ಇದುವರೆಗೆ ಅವರ ಭದ್ರತೆಗೆ ವ್ಯವಸ್ಥೆ ಕಲ್ಪಿಸಿ ಎಂದು ಭಾರತ ಸರ್ಕಾರ, ಅಲ್ಲಿನ ಸರ್ಕಾರವನ್ನು ಕೇಳಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ಇಂಥದ್ದೊಂದು ಮನವಿ ಹೋಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಹಿಂದೂಸ್ತಾನ್​ ಟೈಮ್ಸ್​ ವರದಿ ಮಾಡಿದೆ. ‘ಭದ್ರತೆ ಎಂಬುದು ಕೆನಡಾದ ಆಂತರಿಕ ವಿಚಾರ ಎಂದು ನಮಗೆ ತಿಳಿದಿದೆ. ಹಾಗಿದ್ದಾಗ್ಯೂ ಮಕ್ಕಳು, ಮಹಿಳೆಯರು ಎಲ್ಲ ಸೇರಿ ಆಚರಿಸುವ ಸ್ವಾತಂತ್ರ್ಯೋತ್ಸಕ್ಕೆ ಬಿಗಿ ಭದ್ರತೆ ಕೊಡಿ’ ಎಂದು ಮನವಿ ಮಾಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ಕಳೆದ ವರ್ಷ ಆಗಸ್ಟ್​ 15ರಂದು ಕೆನಡಾದ ಟೊರಂಟೊದಲ್ಲಿ ಪನೋರಮಾ ಇಂಡಿಯಾದಿಂದ ಸ್ವಾತಂತ್ರ್ಯ ದಿನ ಹಮ್ಮಿಕೊಳ್ಳಲಾಗಿತ್ತು. ಆದರೆ ಆ ಸಮಯದಲ್ಲಿ ಅಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಿಂದ ಅಡಚಣೆ ಉಂಟಾಯಿತು. ಹಾಗೇ, 2021ರ ಜನವರಿ 26ರಂದು ಗಣರಾಜ್ಯೋತ್ಸವ ಆಚರಣೆ ನಿಮಿತ್ತ, ಭಾರತೀಯ ಸಮುದಾಯದವರು ವ್ಯಾಂಕೋವರ್ ತಿರಂಗ ಯಾತ್ರೆ ನಡೆಸಿದರು. ಈ ವೇಳೆಯಂತೂ ಅಲ್ಲಿ ಖಲಿಸ್ತಾನಿ ಪರ ಘೋಷಣೆಗಳು ಮೊಳಗಿದ್ದವು. ಭಾರತದ ಧೂತಾವಾಸ ಕಚೇರಿಯನ್ನು ಕೂಡ ಪ್ರತಿಭಟನಾಕಾರರು ನಿರ್ಬಂಧಿಸಿದ್ದರು. ಹಾಗೇ ಈ ಬಾರಿಯೂ ಖಲಿಸ್ತಾನಿ ಪರ, ಪಾಕಿಸ್ತಾನ ಪರ ಸಂಘಟನೆಗಳು ಭಾರತೀಯರ ಸ್ವಾತಂತ್ರ್ಯ ದಿನಾಚರಣೆಗೆ ಅಡ್ಡಿಯುಂಟು ಮಾಡುವ ಸಾಧ್ಯತೆ ಇರುವುದರಿಂದ ಮನವಿ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಇದನ್ನೂ ಓದಿ: ಕೆನಡಾದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆ ವಿರೂಪ, ಖಲಿಸ್ತಾನಿಗಳ ಕೃತ್ಯ ಶಂಕೆ, ಭಾರತ ಆಕ್ರೋಶ

Exit mobile version