Site icon Vistara News

Women Entry To Mosques: ಮಸೀದಿ ಪ್ರವೇಶಿಸಲು ಮುಸ್ಲಿಂ ಮಹಿಳೆಯರು ಮುಕ್ತ, ಸುಪ್ರೀಂಗೆ ಮುಸ್ಲಿಂ ಮಂಡಳಿ ಮಾಹಿತಿ

Women Entry To Mosques

#image_title

ನವದೆಹಲಿ: ಮಸೀದಿಗಳಿಗೆ ಮುಸ್ಲಿಂ ಮಹಿಳೆಯರು ಕೂಡ ಪ್ರವೇಶಿಸಲು (Women Entry To Mosques) ಅನುಮತಿ ನೀಡಬೇಕು ಎಂದು ದೇಶದಲ್ಲಿ ಆಗಾಗ ಚರ್ಚೆಗಳು ನಡೆಯುತ್ತವೆ. ಆ ಮೂಲಕ ಮುಸ್ಲಿಂ ಮಹಿಳೆಯರಿಗೂ ಸಮಾನ ಸ್ಥಾನಮಾನ ನೀಡಬೇಕು ಎಂಬ ವಾದಗಳು ಕೇಳಿಬರುತ್ತವೆ. ಇದರ ಬೆನ್ನಲ್ಲೇ, “ಮುಸ್ಲಿಂ ಮಹಿಳೆಯರು ಮಸೀದಿಗಳನ್ನು ಪ್ರವೇಶಿಸಲು, ಅಲ್ಲಿಯೇ ನಮಾಜ್‌ ಮಾಡಲು ಅನುಮತಿ ಇದೆ” ಎಂದು ಸುಪ್ರೀಂ ಕೋರ್ಟ್‌ಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಮಾಹಿತಿ ನೀಡಿದೆ.

ದೇಶದಲ್ಲಿ ಮುಸ್ಲಿಂ ಮಹಿಳೆಯರು ಮಸೀದಿಗಳನ್ನು ಪ್ರವೇಶಿಸದಂತೆ ತಡೆದಿರುವುದು ಅಸಾಂವಿಧಾನಿಕವಾಗಿದೆ. ಹಾಗಾಗಿ, ಹೆಣ್ಣುಮಕ್ಕಳು ಮಸೀದಿ ಪ್ರವೇಶಿಸಲು ಅನುಮತಿ ನೀಡಬೇಕು ಎಂಬುದಾಗಿ ಫರ್ಹಾ ಅನ್ವರ್‌ ಹುಸೇನ್‌ ಶೇಖ್‌ ಎಂಬುವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇದನ್ನು ಮಾರ್ಚ್‌ನಲ್ಲಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಹಾಗಾಗಿ, ಎಐಎಂಪಿಎಲ್‌ಬಿಯು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದೆ.

“ಇಸ್ಲಾಂ ಧಾರ್ಮಿಕ ಪುಸ್ತಕಗಳು, ಮೌಲ್ವಿಗಳ ಬೋಧನೆಗಳು, ಧಾರ್ಮಿಕ ನಂಬಿಕೆಗಳು, ಇಸ್ಲಾಂ ಧರ್ಮದ ಅನುಯಾಯಿಗಳ ಪ್ರಕಾರ, ಮಸೀದಿಗಳಿಗೆ ಮಹಿಳೆಯರು ತೆರಳಲು ಅನುಮತಿ ಇದೆ. ಮಸೀದಿಗಳಿಗೆ ತೆರಳಿ ಮಹಿಳೆಯರು ಪ್ರಾರ್ಥನೆ ಸಲ್ಲಿಸುವುದು, ಬಿಡುವುದು ಅವರಿಗೆ ಬಿಟ್ಟ ವಿಷಯವಾಗಿದೆ. ಆದರೆ, ಸದ್ಯ ಸಲ್ಲಿಕೆಯಾಗಿರುವ ಅರ್ಜಿಯು ಯಾವುದೇ ಸರ್ಕಾರಕ್ಕೆ ಸಂಬಂಧಿಸಿಲ್ಲ. ಇನ್ನು ಎಐಎಂಪಿಎಲ್‌ಬಿಯು ಯಾವುದೇ ಸರ್ಕಾರ ನಿಯಂತ್ರಿತ ಸಂಸ್ಥೆಯಲ್ಲ. ಹಾಗಾಗಿ, ಮಸೀದಿಗಳ ಮೇಲೆ ಆಯಾ ಮಸೀದಿಗಳ ಆಡಳಿತ ಮಂಡಳಿಯದ್ದೇ ನಿಯಂತ್ರಣವಿದೆ. ಇದರಿಂದಾಗಿ, ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಪ್ರವೇಶಿಸಬಾರದು” ಎಂಬುದಾಗಿ ಎಐಎಂಪಿಎಲ್‌ಬಿ ಪರ ವಕೀಲರು ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದಾರೆ.

ಇದನ್ನೂ ಓದಿ: Viral Video: ಪಾಕಿಸ್ತಾನವನ್ನೇ ಪುಡಿಗಟ್ಟುತ್ತಿದ್ದಾರೆ ಭಯೋತ್ಪಾದಕರು; ಕರಾಚಿ ಮಸೀದಿಯ ಮೇಲೆ ಹತ್ತಿ ಮಿನಾರ್​ಗಳ ಧ್ವಂಸ

Exit mobile version