ಚೆನ್ನೈ: ತಮಿಳುನಾಡಿನ ಈರೋಡ್ ಪೂರ್ವ ಬೈಎಲೆಕ್ಷನ್‌ನಲ್ಲಿ (Erode East bye-election) ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ನಟ ಕಮ್ ರಾಜಕಾರಣಿ ಕಮಲ್ ಹಾಸನ್ (Kamal Haasan) ಹೇಳಿದ್ದಾರೆ. ತಮಿಳುನಾಡಿನ ಈ ಸೂಪರ್ ಸ್ಟಾರ್, ಮಕ್ಕಳ ನೀಧಿ ಮೈಯಂ ಪಕ್ಷದ ಸಂಸ್ಥಾಪಕರೂ ಹೌದು. ಈರೋಡ್ ವೆಸ್ಟ್ ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಅವರು 2024ರ ಚುನಾವಣೆ ಹೊತ್ತಿಗೆ, ಡಿಎಂಕೆ ನೇತೃತ್ವ ಮೈತ್ರಿಕೂಟವನ್ನು ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಜನರ ವಿಷಯ ಬಂದಾಗ ಹೊಂದಾಣಿಕೆ ಎಂಬುದು ಇರುವುದೇ ಇಲ್ಲ. ನಾನು ಮಧ್ಯೆಮಾರ್ಗಿ. ಜನರ ಸೇವೆಗೆ ಸಿದ್ಧಾಂತ ಯಾವಾಗಲೂ ಅಡ್ಡಿಯಾಗುವುದಿಲ್ಲ ಎಂದು ಅವರು ಎನ್‌ಡಿಟಿವಿಗೆ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಕಮಲ್ ಹಾಸನ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ಮಾತನಾಡಿದ ಅವರು, ನಮ್ಮ ಭಾರತ ಕಳೆದುಕೊಂಡಿರುವ ನೈತಿಕ ಮೌಲ್ಯಗಳನ್ನು ಮತ್ತೆ ಪಡೆದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಯಾತ್ರೆಯು ರಾಜಕೀಯದ ಹೊರತಾಗಿದೆ ಎಂದು ಹೇಳಿದರು.
ಇದನ್ನೂ ಓದಿ : Rahul Gandhi | ಉಕ್ರೇನ್ ಪರಿಸ್ಥಿತಿಯೇ ಭಾರತಕ್ಕೂ ಬರುತ್ತಾ? ಆಘಾತಕಾರಿ ಹೇಳಿಕೆ ನೀಡಿದ ರಾಹುಲ್ ಗಾಂಧಿ
ಪರೋಕ್ಷವಾಗಿ ಬಿಜೆಪಿಯನ್ನು ಟೀಕಿಸಿದ ಕಮಲ್ ಹಾಸನ್, ಇರೋಡ್ ಬೈಪೋಲ್, ಕೋಮುವಾದಿ ಶಕ್ತಿಗಳ ವಿರುದ್ಧ ಸಾಮಾನ್ಯ ಗುರಿಯೊಂದಿಗೆ ಹೋರಾಡುತ್ತಿರುವ ಶಕ್ತಿಗಳಿಗೆ ಬಲ ನೀಡುವುದಾಗಿದೆ. ಹಾಗಾಗಿ, ಈ ಚುನಾವಣೆ, ರಾಷ್ಟ್ರೀಯ ಮಹತ್ವವನ್ನು ಪಡೆದುಕೊಂಡಿದೆ. ನಾನು ಏಕ ಸಂಸ್ಕೃತಿಯನ್ನು ದ್ವೇಷಿಸುತ್ತೇನೆ. ನನ್ನ ಹೋರಾಟ ಈ ಸಣ್ಣ ಭೂಮಿಯಲ್ಲಿ ಶುರುವಾಗುತ್ತದೆ ಮತ್ತು ಅದು ರಾಷ್ಟ್ರೀಯವಾಗಿ ವ್ಯಾಪಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.