Site icon Vistara News

Esha Deol: ನೀನಲ್ಲ, ನೀನಲ್ಲ, ಕರಿಮಣಿ ಮಾಲೀಕ ನೀನಲ್ಲ; ನಟಿ ಇಶಾ ಡಿಯೋಲ್‌ ಡಿವೋರ್ಸ್

Esha Deol Couple

Esha Deol, Bharat Takhtani confirm separation after 12 years of marriage

ಮುಂಬೈ: ಬಾಲಿವುಡ್‌ ತಾರಾ ಜೋಡಿಯಾದ ನಟ ಧರ್ಮೇಂದ್ರ ಹಾಗೂ ನಟಿ ಹೇಮಾಮಾಲಿನಿ ಪುತ್ರಿ, ನಟಿ ಇಶಾ ಡಿಯೋಲ್‌ (Esha Deol) ಹಾಗೂ ಪತಿ ಭರತ್‌ ತಖ್ತಾನಿ (Bharat Takhtani) ಅವರು ವಿಚ್ಛೇದನ ಪಡೆದುಕೊಂಡಿದ್ದಾರೆ. ಇದರೊಂದಿಗೆ ತಾರ ದಂಪತಿಯ 12 ವರ್ಷಗಳ ದಾಂಪತ್ಯ ಅಂತ್ಯಗೊಂಡಿದೆ. ವಿಚ್ಛೇದನ ಕುರಿತು ಇಶಾ ಡಿಯೋಲ್‌ ಹಾಗೂ ಭರತ್‌ ತಖ್ತಾನಿ ಅವರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. “ಇಬ್ಬರೂ ಪರಸ್ಪರ ಮಾತುಕತೆಯ ಬಳಿಕವೇ ಬೇರೆಯಾಗುವ ತೀರ್ಮಾನ ತೆಗೆದುಕೊಂಡಿದ್ದೇವೆ” ಎಂದು ಪ್ರಕಟಣೆ ತಿಳಿಸಿದ್ದಾರೆ.

“ನಾವಿಬ್ಬರೂ ಪರಸ್ಪರ ಮಾತುಕತೆ ಬಳಿಕವೇ ಸೌಹಾರ್ದಯುತವಾಗಿ ಬೇರೆಯಾಗಲು ತೀರ್ಮಾನಿಸಿದ್ದೇವೆ. ನಮ್ಮ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡೇ ನಾವು ತೀರ್ಮಾನ ತೆಗೆದುಕೊಂಡಿದ್ದೇವೆ. ಮುಂದೆಯೂ ನಮ್ಮ ಮಕ್ಕಳ ಭವಿಷ್ಯವೇ ನಮಗೆ ಮುಖ್ಯವಾಗಿರುತ್ತದೆ. ಇಬ್ಬರ ಖಾಸಗಿತನವನ್ನು ಗೌರವಿಸುತ್ತ, ಇಬ್ಬರೂ ಜೀವನದಲ್ಲಿ ಬೇರೆ ಬೇರೆ ಹಾದಿ ತುಳಿಯಲು ಮುಂದಾಗಿದ್ದೇವೆ” ಎಂದು ಇಶಾ ಡಿಯೋಲ್‌ ಹಾಗೂ ಭರತ್‌ ತಖ್ತಾನಿ ಅವರು ಜಂಟಿ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ದಂಪತಿಯು ಯಾವುದೇ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿಲ್ಲ.

ಇಶಾ ಡಿಯೋಲ್‌ ಹಾಗೂ ಭರತ್‌ ತಖ್ತಾನಿ ಅವರು 2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮುಂಬೈನಲ್ಲಿ ಇಬ್ಬರೂ ಮದುವೆಯಾಗಿದ್ದರು. ದಂಪತಿಗೆ ರಾಧ್ಯಾ (6) ಹಾಗೂ ಮಿರಾಯಾ (4) ಎಂಬ ಪುತ್ರಿಯರಿದ್ದಾರೆ. ಕಳೆದ ವರ್ಷ ಭರತ್‌ ತಖ್ತಾನಿ ಅವರು ಅತ್ತೆ ಹೇಮಾಮಾಲಿನಿ ಅವರ ಜನ್ಮದಿನದ ಪಾರ್ಟಿಗೆ ಗೈರಾಗಿದ್ದರು. ಅಲ್ಲದೆ, ಅತ್ತೆಗೆ ವಿಶ್‌ ಕೂಡ ಮಾಡಿರಲಿಲ್ಲ. ಇದಾದ ಬಳಿಕವೇ, ಇಶಾ ಡಿಯೋಲ್‌ ಹಾಗೂ ಭರತ್‌ ತಖ್ತಾನಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿಬಂದಿವೆ. ಈಗ ವಿಚ್ಛೇದನದ ಕುರಿತು ಇಬ್ಬರೂ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Sania Mirza: ವಿಚ್ಛೇದನ ಚರ್ಚೆಗೆ ಅಧಿಕೃತ ಪ್ರಕಟನೆ ಮೂಲಕ ಉತ್ತರಿಸಿದ ಸಾನಿಯಾ ಮಿರ್ಜಾ ಕುಟುಂಬ

ಭರತ್‌ ತಖ್ತಾನಿ ಅವರಿಗೆ ಬೆಂಗಳೂರಿನಲ್ಲಿ ಗರ್ಲ್‌ಫ್ರೆಂಡ್‌ ಇದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದಿವೆ. ಇದೇ ಕಾರಣಕ್ಕಾಗಿ ಇಶಾ ಡಿಯೋಲ್‌ ಅವರು ವಿಚ್ಛೇದನ ನೀಡಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿಗಳೂ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿವೆ. ಕೊಯಿ ಮೇರೆ ದಿಲ್‌ ಸೇ ಪೂಚೆ ಸಿನಿಮಾ ಮೂಲಕ ಬಾಲಿವುಡ್‌ ಪ್ರವೇಶಿಸಿದ ಇಶಾ ಡಿಯೋಲ್‌ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ, ಧೂಮ್‌ ಸಿನಿಮಾ, ಧೂಮ್‌ ಮಚಾಲೆ ಹಾಡಿನ ಡಾನ್ಸ್‌ ಮೂಲಕವೇ ಇವರು ಚಿರಪರಿಚಿತರಾದರು. ಕನ್ನಡದ ಕೇರ್‌ ಆಫ್‌ ಫುಟ್‌ ಪಾತ್‌ ಸಿನಿಮಾದಲ್ಲೂ ಇಶಾ ಡಿಯೋಲ್‌ ನಟಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version