ನವದೆಹಲಿ: ಪ್ರಶ್ನೆಗಾಗಿ ನಗದು ಪ್ರಕರಣದ (Cash for Query Case) ಆರೋಪವನ್ನು ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾವನ್ನು (TMC MP Mahua Moitra) ಲೋಕಸಭೆಯಿಂದ ಉಚ್ಚಾಟಿಸುವ ಶಿಫಾರಸನ್ನು ಸಂಸದೀಯ ನೈತಿಕ ಸಮಿತಿ ಅನುಮೋದಿಸಿದೆ(Expulsion From Parliament). ಸಮಿತಿಯ ಸದಸ್ಯರ ಪೈಕಿ 6 ಸದಸ್ಯರು ಈ ಶಿಫಾರಸು ಪರವಾಗಿ ಮತ ಚಲಾಯಿಸಿದ್ದರೆ, ನಾಲ್ವರು ವಿರುದ್ಧವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಡೀ ಪ್ರಕರಣದ ತನಿಖೆಯನ್ನು ನಡೆಸಿರುವ ಸಮಿತಿಯು ತನ್ನ ವರದಿಯನ್ನು ನಾಳೆ(ನವೆಂಬರ್ 10) ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಲಿದೆ.
ಸಂಸದೀಯ ಸಮಿತಿಯು ಮೊಯಿತ್ರಾ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಸೂಚಿಸಿದೆ. ಮೋಯಿತ್ರಾ ಅವರ ಕ್ರಮಗಳು “ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಹೇಯ ಮತ್ತು ಅಪರಾಧ”ವಾಗಿವೆ. ಶಿಫಾರಸಿನ ಪರವಾಗಿ ಮತ ಚಲಾಯಿಸಿದವರ ಪೈಕಿ ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಕಾಂಗ್ರೆಸ್ ಸಂಸದೆ ಪ್ರಣೀತ್ ಕೌರ್ ಕೂಡ ಇದ್ದಾರೆ. ಅವರು ಬಿಜೆಪಿಯ ಕೈ ಬಲಪಡಿಸಿದ್ದಾರೆಂದು ತಿಳಿದು ಬಂದಿದೆ.
ಸಮಿತಿಯ ಚೇರ್ಮನ್ ಸೇರಿದಂತೆ 10 ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಬಿಜೆಪಿಯ ಮೂವರು ಸದಸ್ಯರು ಹಾಜರಾಗಲು ಸಾಧ್ಯವಾಗದ ಕಾರಣ ಇಂದು ಬಿಜೆಪಿ ಸಂಖ್ಯೆ 7 ರಿಂದ 4 ಕ್ಕೆ ಇಳಿದಿತ್ತು. ಪ್ರತಿಪಕ್ಷಗಳ ಪರವಾಗಿಯೂ ಒಬ್ಬ ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರು. ನವೆಂಬರ್ 2 ರಂದು ಮಹುವಾ ಅವರನ್ನು ಬೆಂಬಲಿಸಿ ಹೊರ ನಡೆದಿದ್ದ ಐವರು ಸಂಸದರಲ್ಲಿ ಒಬ್ಬರಾದ ಉತ್ತಮ್ ರೆಡ್ಡಿ ಅವರು ತೆಲಂಗಾಣ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದಾರೆ. ಆ ಕಾರ್ಯದಲ್ಲಿ ಅವರು ಬಿಜಿಯಾಗಿದ್ದಾರೆ. ಸಮಿತಿಯಲ್ಲಿರುವ ವೈಎಸ್‌ಆರ್ ಕಾಂಗ್ರೆಸ್ ನಾಮನಿರ್ದೇಶಿತ ಸದಸ್ಯರೂ ಸಭೆಗೆ ಹಾಜರಾಗಿರಲಿಲ್ಲ.
ಎಲ್ಲಾ ಕಡೆಯವರೊಂದಿಗೆ ಮಾತನಾಡಿದ ನಂತರ ಸಮಿತಿಯು ಮಹುವಾ ಮೊಯಿತ್ರಾ ಅವರು “ಅನಧಿಕೃತ ವ್ಯಕ್ತಿಗಳೊಂದಿಗೆ” ಯೂಸರ್ ಐಡಿಯನ್ನು ಹಂಚಿಕೊಂಡಿದ್ದಾರೆ ಎಂದು ತೀರ್ಮಾನಿಸಿದೆ. ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ನಗದು ಮತ್ತು ಸೌಕರ್ಯಗಳನ್ನು ತೆಗೆದುಕೊಂಡಿದ್ದಾರೆ ಮತ್ತು ಇದು ಮೋಯಿತ್ರಾ ಕಡೆಯಿಂದ ಸಂಭವಿಸಿದ “ಗಂಭೀರ ದುಷ್ಕೃತ್ಯ” ಮತ್ತು “ಗಂಭೀರ ಶಿಕ್ಷೆ” ಎಂದು ಸಮಿತಿ ಕರೆದಿದೆ.
ಸಂಸದೆ ಮಹುವಾ ಮೋಯಿತ್ರಾ ವಿರುದ್ಧ ಸಿಬಿಐ ತನಿಖೆ!
ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ (Cash for Query Case) ಸ್ವೀಕರಿಸಿದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ (TMC MP Mahua Moitra) ಅವರಿಗೆ ಸಂಕಷ್ಟ ಎದುರಾಗಿದೆ. ಈ ಭ್ರಷ್ಟಾಚಾರ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಲೋಕಪಾಲ್(Lokpal), ಕೇಂದ್ರ ತನಿಖಾ ದಳಕ್ಕೆ(CBI) ಸೂಚಿಸಿರುವ ಮಾಹಿತಿಯನ್ನು ಭಾರತೀಯ ಜನತಾ ಪಾರ್ಟಿಯ ಸಂಸದ ನಿಶಿಕಾಂತ್ ದುಬೆ (BJP MP Nishikant Dubey) ಅವರು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ನಾನು ನೀಡಿದ ದೂರಿನ ಆಧಾರದ ಹಿನ್ನೆಲೆಯಲ್ಲಿ ಲೋಕಪಾಲ್ ಸಂಸ್ಥೆಯು, ರಾಷ್ಟ್ರೀಯ ಭದ್ರತೆಗೆ ಸವಾಲೊಡ್ಡಿದ ಮಹುವಾ ಮೋಯಿತ್ರಾ ಅವರ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಕೈಗೊಳ್ಳುವಂತೆ ಕೇಂದ್ರ ತನಿಖಾ ದಳಕ್ಕೆ ಸೂಚಿಸಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಟ್ವೀಟ್ ಮಾಡಿದ್ದಾರೆ.
ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಗ್ರೂಪ್ ವಿರುದ್ಧ ಪ್ರಶ್ನೆ ಕೇಳಲು ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಅವರು ಎದುರಾಳಿ ಉದ್ಯಮಿಯೊಬ್ಬರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಆರೋಪಿಸಿದ್ದರು.
ಈ ಸುದ್ದಿಯನ್ನೂ ಓದಿ: MP Mahua Moitra: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಸ್ವೀಕರಿಸಿದ ಸಂಸದೆ ಮಹುವಾ ಮೋಯಿತ್ರಾ! ಬಿಜೆಪಿ ಆರೋಪ