ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಮುಕ್ತಾಯವಾಗಿದೆ. ಬಿಜೆಪಿಯು ಸ್ಪಷ್ಟ ಬಹುಮತ ಪಡೆಯದಿದ್ದರೂ, ಎನ್‌ಡಿಎ ಒಕ್ಕೂಟದ ಬಲದಿಂದ ಅಧಿಕಾರ ಗಳಿಸಿದೆ. ಕಳೆದ ಬಾರಿಗಿಂತ ಈ ಬಾರಿ ಪ್ರತಿಪಕ್ಷಗಳು ಗಣನೀಯವಾಗಿ ಸೀಟುಗಳನ್ನು ಹೆಚ್ಚಿಸಿಕೊಂಡಿವೆ. ಇಷ್ಟಾದರೂ ಚುನಾವಣಾ ಮತಯಂತ್ರಗಳ (EVM) ಕುರಿತು ಪ್ರತಿಪಕ್ಷಗಳ ಅನುಮಾನ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, “ಉತ್ತರ ಪ್ರದೇಶದ ಎಲ್ಲ 80 ಲೋಕಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೂ ನಾನು ಚುನಾವಣೆ ಮತಯಂತ್ರಗಳನ್ನು ನಂಬುವುದಿಲ್ಲ” ಎಂಬುದಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಹೇಳಿದ್ದಾರೆ.
ಸಂಸತ್ತಿನಲ್ಲಿ ರಾಷ್ಟ್ರಪತಿಯವರ ವಂದನಾ ನಿರ್ಣಯದ ಕುರಿತು ಮಾತನಾಡಿದ ಅವರು ಇವಿಎಂ ವಿಚಾರವನ್ನು ಪ್ರಸ್ತಾಪಿಸಿದರು. “ನಾನು ಮೊದಲಿನಿಂದಲೂ ಇವಿಎಂಗಳ ಬಗ್ಗೆ ಅನುಮಾನ ಹೊಂದಿದ್ದೇನೆ. ನಾನು ಮೊದಲು ಕೂಡ ಇವಿಎಂಗಳನ್ನು ನಂಬಿಲ್ಲ, ಈಗಲೂ ನಂಬುವುದಿಲ್ಲ. ಉತ್ತರ ಪ್ರದೇಶದ ಎಲ್ಲ 80 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೂ ಇವಿಎಂಗಳನ್ನು ನಂಬುವುದಿಲ್ಲ. ಇವಿಎಂಗಳ ವಿಚಾರದಲ್ಲಿ ನಮ್ಮ ನಿಲುವು ಮುಂದುವರಿಯುತ್ತದೆ. ಇವಿಎಂಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸದ ಹೊರತು ಸಮಸ್ಯೆ ಬಗೆಹರಿಯುವುದಿಲ್ಲ” ಎಂಬುದಾಗಿ ತಿಳಿಸಿದ್ದಾರೆ.
अखिलेश यादव ईवीएम का मुद्दा मरा नहीं है,
— Jay Singh (@singhjay96) July 2, 2024
मैं 80 सीट भी जाऊँगा तब भी EVM पर भरोसा नहीं करूँगा#AkhileshYadav
pic.twitter.com/cBAWMuPb1b
ಅನುಮಾನ ವ್ಯಕ್ತಪಡಿಸಿದ್ದ ಎಲಾನ್ ಮಸ್ಕ್
ಕೆಲ ದಿನಗಳ ಹಿಂದೆ ಟೆಸ್ಲಾ ಸಿಎಒ ಎಲಾನ್ ಮಸ್ಕ್ ಅವರು ಕೂಡ ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅಮೆರಿಕದ ಚುನಾವಣೆಯಲ್ಲಿ ಬಳಸುವ ಇವಿಎಂಗಳ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದರು. “ಅಮೆರಿಕದಲ್ಲಿ ನಾವು ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್‌ಗಳ ಬಳಕೆಯನ್ನು ನಿಲ್ಲಿಸಬೇಕು. ಹ್ಯಾಕರ್‌ಗಳು ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಬಳಕೆ ಮಾಡುವ ಮೂಲಕ ಇವಿಎಂಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ. ಇದು ಸಣ್ಣ ಸಂಗತಿಯಾದರೂ, ದೊಡ್ಡ ಸಮಸ್ಯೆಯಾಗಿದೆ” ಎಂದು ಎಲಾನ್ ಮಸ್ಕ್ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು ಇದು ಅಮೆರಿಕದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಎಲಾನ್ ಮಸ್ಕ್ ಅಭಿಪ್ರಾಯವನ್ನು ರಾಹುಲ್ ಗಾಂಧಿ ಕೂಡ ಅನುಮೋದಿಸಿದ್ದರು. “ಭಾರತದಲ್ಲಿ ಇವಿಎಂಗಳು ಎಂದರೆ ಬ್ಲ್ಯಾಕ್ ಬಾಕ್ಸ್ (ಯಾರಿಗೂ ಗೊತ್ತಾಗದ, ಒಬ್ಬರಿಗೆ ಮಾತ್ರ ಆಕ್ಸೆಸ್ ಇರುವ ಎಲೆಕ್ಟ್ರಾನಿಕ್ ಡಿವೈಸ್) ಇದ್ದಂತೆ. ಅವುಗಳನ್ನು ಯಾರೂ ಪರಿಶೀಲನೆ ಮಾಡಲು, ತಪಾಸಣೆ ಮಾಡಲು ಸಾಧ್ಯವಿಲ್ಲ. ಭಾರತದ ಚುನಾವಣೆ ಪಾರದರ್ಶಕತೆ ಕುರಿತು ಗಂಭೀರವಾದ ಆತಂಕಗಳು ವ್ಯಕ್ತವಾಗುತ್ತಿವೆ. ಸಂಸ್ಥೆಗಳು ವಿಶ್ವಾಸ ಕಳೆದುಕೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಒಂದು ನಾಟಕೀಯ ಸ್ವರೂಪ ಪಡೆಯುತ್ತದೆ” ಎಂಬುದಾಗಿ ರಾಹುಲ್ ಗಾಂಧಿ ಹೇಳಿದ್ದರು.
ಇದನ್ನೂ ಓದಿ: DK Shivakumar: ಇವಿಎಂ ಸತ್ಯಾಸತ್ಯತೆ ಪ್ರಪಂಚಕ್ಕೇ ಅರ್ಥವಾಗಿದೆ; ಮಸ್ಕ್ ಅನುಮಾನ ಸಮರ್ಥಿಸಿಕೊಂಡ ಡಿಕೆಶಿ