ಹೈದರಾಬಾದ್: ಅಬಕಾರಿ ನೀತಿ ಜಾರಿ ಹಗರಣದಲ್ಲಿ ಜೈಲುಪಾಲಾಗಿ, ಮಧ್ಯಂತರ ಜಾಮೀನು ಪಡೆದು ಬಿಡುಗಡೆಯಾಗಿ ಹೊರಬರುತ್ತಲೇ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi), ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ನರೇಂದ್ರ ಮೋದಿ ಅವರಿಗೆ 2025ರಲ್ಲಿ 75 ವರ್ಷ ತುಂಬುತ್ತದೆ. ಅದಾದ ಬಳಿಕ ಅವರು ಪ್ರಧಾನಿ ಸ್ಥಾನದಲ್ಲಿ ಇರಲ್ಲ” ಎಂದು ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಅಮಿತ್ ಶಾ (Amit Shah), “ನರೇಂದ್ರ ಮೋದಿ ಅವರು ಮೂರನೇ ಅವಧಿಯನ್ನು ಪೂರ್ಣಗೊಳಿಸುತ್ತಾರೆ” ಎಂದಿದ್ದಾರೆ.
“ಅರವಿಂದ್ ಕೇಜ್ರಿವಾಲ್ ಅವರಿಗೆ ನಾನೊಂದು ವಿಷಯ ತಿಳಿಸುತ್ತೇನೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುತ್ತಾರೆ ಹಾಗೂ ಮೂರನೇ ಅವಧಿಯನ್ನು ಅವರು ಪೂರ್ಣಗೊಳಿಸುತ್ತಾರೆ. ಇಂಡಿಯಾ ಒಕ್ಕೂಟವೂ ಅಷ್ಟೇ, ಮೋದಿ ಅವರಿಗೆ 75 ವರ್ಷ ತುಂಬುತ್ತದೆ ಎಂಬ ಖುಷಿ ಬೇಡ. 75 ವರ್ಷ ದಾಟಿದ ನಂತರ ಎಲ್ಲೂ ಪ್ರಧಾನಿಯಾಗಬಾರದು ಎಂಬ ನಿಯಮಗಳು ಬಿಜೆಪಿ ಸಂವಿಧಾನದಲ್ಲಿ ಪ್ರಸ್ತಾಪಿಸಿಲ್ಲ. ಹಾಗಾಗಿ, ಮೋದಿ ಅವರು ಮೂರನೇ ಅವಧಿಯನ್ನು ಪೂರ್ಣಗೊಳಿಸುವುದು ನಿಶ್ಚಿತ” ಎಂದು ಹೈದರಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
BJP EX NATIONAL PRESIDENT AND UNION HOME MINISTER AMIT SHAH JI CONFIRMS THAT PM MODI WILL COMPLETE HIS NEXT TERM AS PM (2024-2029) AND WILL CONTINUE TO REMAIN LEADER OF BJP!pic.twitter.com/SQk2r8Kgy9
— Aviral Pandey (@pandeyji_aviral) May 11, 2024
ನಡ್ಡಾ ಕೂಡ ಪ್ರತಿಕ್ರಿಯೆ
ಅರವಿಂದ್ ಕೇಜ್ರಿವಾಲ್ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. “ನರೇಂದ್ರ ಮೋದಿ ಅವರನ್ನು ಸೋಲಿಸಲಾಗದವರು ಈಗ ವಯಸ್ಸಿನ ವಿಚಾರ ಮುನ್ನೆಲೆಗೆ ತಂದಿದ್ದಾರೆ. ಆದರೆ, ಪ್ರಧಾನಿಯಾಗಿ ಮುಂದುವರಿಯಲು ವಯಸ್ಸಿನ ಮಿತಿ ಕುರಿತು ಬಿಜೆಪಿ ಸಂವಿಧಾನದಲ್ಲಿ ಉಲ್ಲೇಖವಾಗಿಲ್ಲ. ನರೇಂದ್ರ ಮೋದಿ ಅವರೇ ನಮ್ಮ ನಾಯಕ ಹಾಗೂ ಭವಿಷ್ಯದಲ್ಲೂ ಅವರೇ ನಾಯಕರಾಗಿ ಇರಲಿದ್ದಾರೆ” ಎಂದಿದ್ದಾರೆ.
ಕೇಜ್ರಿವಾಲ್ ನಡೆಸಿದ ವಾಗ್ದಾಳಿ ಹೀಗಿತ್ತು…
ಜೈಲಿನಿಂದ ಬಿಡುಗಡೆಯಾದ ಬಳಿಕ ಮೊದಲ ಸುದ್ದಿಗೋಷ್ಠಿ ನಡೆಸಿದ ಕೇಜ್ರಿವಾಲ್, ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಆರೋಪ ಮಾಡಿದರು. “ನರೇಂದ್ರ ಮೋದಿ ಅವರಿಗೆ ಬೇರೆಯವರು ಬೆಳೆಯುವುದು ಇಷ್ಟವಿಲ್ಲ. ದೇಶಕ್ಕೆ ಒಬ್ಬನೇ ನಾಯಕ ಬೇಕು, ಅದು ಅವರೇ ಆಗಿರಬೇಕು. ಈಗಾಗಲೇ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ, ಶಿವರಾಜ್ ಸಿಂಗ್ ಚೌಹಾಣ್, ವಸುಂಧರಾ ರಾಜೆ, ಮನೋಹರ ಲಾಲ್ ಖಟ್ಟರ್, ರಮಣ್ ಸಿಂಗ್ ಸೇರಿ ಹಲವು ನಾಯಕರ ರಾಜಕೀಯ ಜೀವನವನ್ನು ಮೋದಿ ಕೊನೆಗೊಳಿಸಿದ್ದಾರೆ. ಶೀಘ್ರದಲ್ಲೇ, ಯೋಗಿ ಆದಿತ್ಯನಾಥ್ ಅವರ ರಾಜಕೀಯ ಜೀವನವನ್ನೂ ಇವರು ಕೊನೆಗಾಣಿಸಲಿದ್ದಾರೆ” ಎಂದು ದೂರಿದರು.
“ನರೇಂದ್ರ ಮೋದಿ ಅವರೇನಾದರೂ ಮತ್ತೆ ಪ್ರಧಾನಿಯಾದರೆ, ಅಧಿಕಾರ ವಹಿಸಿಕೊಂಡ ಎರಡೇ ತಿಂಗಳಿಗೆ ಯೋಗಿ ಆದಿತ್ಯನಾಥ್ ಅವರ ಬದಲಿಗೆ ಬೇರೆಯವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಲಿದ್ದಾರೆ. ಆದರೆ, ನಮ್ಮ ದೇಶದ ಇತಿಹಾಸವೇ ಬೇರೆ ಇದೆ. ದೇಶದಲ್ಲಿ ಇದುವರೆಗೆ ಯಾರೆಲ್ಲ ಸರ್ವಾಧಿಕಾರ ಮಾಡಲು ಹೊರಟಿದ್ದರೋ, ಅವರನ್ನೆಲ್ಲ ಜನ ಮನೆಗೆ ಕಳುಹಿಸಿದ್ದಾರೆ. ಈಗ ಮತ್ತೆ ಸರ್ವಾಧಿಕಾರಿಗಳು ಪ್ರಜಾಪ್ರಭುತ್ವವನ್ನು ಕೊನೆಗಾಣಿಸಲು ಯತ್ನಿಸುತ್ತಿದ್ದಾರೆ. ಆದರೆ, ದೇಶದ 140 ಕೋಟಿ ಜನ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಎಂಬುದೇ ನನ್ನ ಮನವಿಯಾಗಿದೆ” ಎಂದರು.
ಇದನ್ನೂ ಓದಿ: ಮೋದಿಯಿಂದ ಯೋಗಿ ಆದಿತ್ಯನಾಥ್ ರಾಜಕೀಯ ಜೀವನ ಶೀಘ್ರದಲ್ಲೇ ಖತಂ; ಕೇಜ್ರಿವಾಲ್ ಸ್ಫೋಟಕ ಭವಿಷ್ಯ