ನವ ದೆಹಲಿ: ನನ್ನ ಅಮ್ಮನ ಬಗ್ಗೆ ತಿಳಿದುಕೊಂಡ್ರೆ ಎಲ್ಲರೂ ಕೂಡಾ ಅವರನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಬೆಂಬಲ ಕೊಡ್ತಾರೆ: ಹೀಗಂದವರು ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಕೂಟದ ಅಭ್ಯರ್ಥಿಯಾಗಿಗುವ ದ್ರೌಪದಿ ಮುರ್ಮು ಅವರ ಮಗಳು ಇತಿಶ್ರೀ ಮುರ್ಮು.
ಅಮ್ಮನ ಕುರಿತ ನೆನಪುಗಳನ್ನು ಹಂಚಿಕೊಂಡಿರುವ ಅವರು, ನನ್ನ ಅಮ್ಮ ಭಾರಿ ಶಿಸ್ತಿನ ಅಮ್ಮ ಮತ್ತು ಟೀಚರ್. ಪ್ರಾಥಮಿಕ ಶಾಲೆಯಲ್ಲಿ ನನಗೂ ಟೀಚರ್ ಆಗಿದ್ದರು. ಆಗ ನನಗೆ ಡಬಲ್ ಪ್ರೆಷರ್. ಒಂದು ಕಡೆ ಮಗಳಾಗಿ, ಇನ್ನೊಂದು ಕಡೆ ವಿದ್ಯಾರ್ಥಿನಿಯಾಗಿ. ಅಮ್ಮ ಆಗಾಗ ಮೊದಲೇ ಹೇಳದೆ ಪರೀಕ್ಷೆ ಮಾಡಿಬಿಡೋರು. ಆಗ ನಮ್ಮ ಕ್ಲಾಸಿನ ಮಕ್ಕಳಿಗೆಲ್ಲ ನನ್ನ ಮೇಲೆ ಸಿಟ್ಟು ಬರ್ತಾ ಇತ್ತು ಎಂದಿದ್ದಾರೆ.
ದ್ರೌಪದಿ ಮುರ್ಮು ಅವರು ರಾಜಕೀಯ ಜೀವನ ಪ್ರವೇಶಿಸುವ ಮೊದಲು ಒಡಿಶಾದ ರಾಯ್ ರಂಗಾಪುರದ ಶ್ರೀ ಅರಬಿಂದೋ ಇಂಟಗ್ರೇಟಲ್ ಎಜುಕೇಶನ್ ಎಂಡ್ ರಿಸರ್ಚ್ ಸೆಂಟರ್‌ನಲ್ಲಿ ಶಿಕ್ಷಕಿಯಾಗಿದ್ದರು. ಪ್ರಸಕ್ತ ಅವರು ರಾಯ್ ರಂಗಾಪುರದಲ್ಲಿ ಮಗಳು ಇತಿಶ್ರೀ ಮತ್ತು ಸಹೋದರ ತಾರಿಣಿ ಸೇನ್ ಅವರ ಜತೆ ವಾಸಿಸುತ್ತಿದ್ದಾರೆ. ಇತಿಶ್ರೀ ಅವರು ಭುವನೇಶ್ವರದ ಯುಕೋ ಬ್ಯಾಂಕ್‌ನಲ್ಲಿ ಮ್ಯಾನೇಜರ್.
ಇಬ್ಬರು ಮಕ್ಕಳ ತಾಯಿಯಾಗಿರುವ ಇತಿಶ್ರೀ ಅಮ್ಮ ಏನಾದರೂ ರಾಷ್ಟ್ರಪತಿ ಆದರೆ ತಾನೂ ದೆಹಲಿಗೆ ಬಂದು ಅಮ್ಮನೊಂದಿಗೇ ವಾಸಿಸುವುದಾಗಿ ಹೇಳಿದ್ದಾರೆ.
ಮಹಿಳಾ ಸಾರಥ್ಯ ಹೊಂದಿರುವ ಕಾಂಗ್ರೆಸ್, ಟಿಎಂಸಿ ಮೊದಲಾದ ಪಕ್ಷಗಳು ಮಹಿಳೆ ಎಂಬ ನೆಲೆಯಲ್ಲಾದರೂ ಮುರ್ಮು ಅವರನ್ನು ಬೆಂಬಲಿಸಬೇಕಲ್ವೇ ಎಂದು ಪ್ರಶ್ನಿಸಿದಾಗ, ಎಲ್ಲ ಪ್ರತಿಪಕ್ಷಗಳು ನನ್ನ ಅಮ್ಮ ಎಂಥವರು ಅಂತ ತಿಳಿದುಕೊಂಡರೆ ಖಂಡಿತವಾಗಿಯೂ ಬೆಂಬಲಿಸುತ್ತಾರೆ ಎಂದರು.
ಯಾರಿವರು ದ್ರೌಪದಿ ಮುರ್ಮು?
1958ರಲ್ಲಿ ಜನಿಸಿದ ಮುರ್ಮು ಅವರಿಗೆ ಈಗ 64 ವರ್ಷ. ಒಡಿಶಾದ ಮಯೂರ್‌ಭಂಜ್ ಎಂಬಲ್ಲಿನ ಬುಡಕಟ್ಟು ಸಮುದಾಯ ಒಂದರಲ್ಲಿ ಜನನ. ಬಿಎ ವರೆಗೂ ಶಿಕ್ಷಣ ಪಡೆದಿದ್ದು, ರಾಜಕಾರಣ ಸೇರುವ ಮುನ್ನ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. 1997ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
1997ರಲ್ಲಿ ರಾಯ್‌ರಂಗ್‌ಪುರದಲ್ಲಿ ಕೌನ್ಸಿಲರ್ ಆಗಿ ಆಯ್ಕೆಯಾದರು. 2000ದಲ್ಲಿ ಇದೇ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾದರು. ನವೀನ್ ಕುಮಾರ್ ಪಾಟ್ನಾಯಿಕ್ ಅವರ ಸಚಿವ ಸಂಪುಟದಲ್ಲಿ ಸಾರಿಗೆ, ವಾಣಿಜ್ಯ, ಮೀನುಗಾರಿಕೆ ಸಚಿವರಾಗಿ ಕಾರ್ಯ ನಿರ್ವಹಿಸಿದರು. 2004ರಲ್ಲಿ ಮತ್ತೆ ಶಾಸಕಿಯಾಗಿ ಆರಿಸಿ ಬಂದರು. 2006ರಲ್ಲಿ ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಛಾದ ಅಧ್ಯಕ್ಷೆಯಾದರು. 2015ರಲ್ಲಿ ಮುರ್ಮು ಅವರನ್ನು ಜಾರ್ಖಂಡ್‌ನ ರಾಜ್ಯಪಾಲರನ್ನಾಗಿ ಆಯ್ಕೆ ಮಾಡಲಾಯಿತು. ನರೇಂದ್ರ ಮೋದಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರು ಇವರ ನೆಚ್ಚಿನ ರಾಜಕೀಯ ನಾಯಕರು.
ಇದನ್ನೂ ಓದಿ| Video: ಶಿವನ ದೇಗುಲದ ಆವರಣದಲ್ಲಿ ಕಸಗುಡಿಸಿದ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು !