Site icon Vistara News

PM Modi : ಕಾಂಗ್ರೆಸ್​ ಲೂಟಿ ಮಾಡಿದ ಪ್ರತಿ ಪೈಸೆಯನ್ನೂ ವಸೂಲಿ ಮಾಡುತ್ತೇವೆ; ಮೋದಿಯ ಹೊಸ ಟ್ವೀಟ್​ನಲ್ಲೇನಿದೆ?

PM Modi

ನವದೆಹಲಿ: ಸಾರ್ವಜನಿಕರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನೂ ವಸೂಲಿ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ 300 ಕೋಟಿ ರೂ.ಗೂ ಹೆಚ್ಚು ನಗದು ವಶಪಡಿಸಿಕೊಂಡಿದ್ದಾರೆ ಎಂಬ ವರದಿಯನ್ನು ಟ್ವೀಟ್ ಮಾಡಿ ಪ್ರಧಾನಿ ಮೋದಿ ಅವರು ಈ ಹೇಳಿಕೆ ನೀಡಿದ್ದಾರೆ.

ಹಿಂದಿ ದಿನಪತ್ರಿಕೆ ದೈನಿಕ್ ಜಾಗರಣ್​ನ ಮುಖ ಪುಟದಲ್ಲಿ ವರದಿ ಮತ್ತು ಹಣದ ರಾಶಿಯ ಚಿತ್ರವನ್ನು ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ಮೊದಲು ಚಿತ್ರಗಳನ್ನು ನೋಡಿ. ಬಳಿಕ ವಿರೋಧ ಪಕ್ಷದ ನಾಯಕರ (ಇಂಡಿಯಾ ಒಕ್ಕೂಟ) ಭಾಷಣಗಳನ್ನು ಆಲಿಸಿ ಜನರನ್ನು ಕೇಳಿ ಎಂದು ಟಾಂಗ್ ಕೊಟ್ಟಿದ್ದಾರೆ. ಹಿಂದಿಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ , “ದೇಶವಾಸಿಗಳು ಈ ನೋಟುಗಳ ರಾಶಿಯನ್ನು ನೋಡಬೇಕು ಮತ್ತು ನಂತರ ತಮ್ಮ ನಾಯಕರ ಪ್ರಾಮಾಣಿಕ ‘ಭಾಷಣಗಳನ್ನು’ ಕೇಳಬೇಕು…” ಎಂದು ಲೇವಡಿ ಮಾಡಿದ್ದಾರೆ.

ನಂತರ ಅವರು ಸಾರ್ವಜನಿಕರಿಂದ ಲೂಟಿ ಮಾಡಿದ ಎಲ್ಲಾ ಹಣವನ್ನು ತಮ್ಮ ಸರ್ಕಾರವು ವಸೂಲಿ ಮಾಡಲಿದೆ ಎಂದು ಭರವಸೆ ನೀಡಿದರು. “ಸಾರ್ವಜನಿಕರಿಂದ ಏನನ್ನು ಲೂಟಿ ಮಾಡಲಾಗಿದೆಯೋ, ಪ್ರತಿ ಪೈಸೆಯನ್ನೂ ಹಿಂದಿರುಗಿಸಬೇಕಾಗುತ್ತದೆ, ಇದು ಮೋದಿಯವರ ಭರವಸೆ” ಎಂದು ಅವರು ಬರೆದುಕೊಂಡಿದ್ದಾರೆ.

ಪಿಎಂ ಮೋದಿ ಟ್ವೀಟ್​​ನಲ್ಲಿ ಹಲವಾರು ಎಮೋಜಿಗಳನ್ನು ಕೂಡ ಸೇರಿಸಿದ್ದಾರೆ. ಇದು ವಿಧಾನಸಭಾ ಚುನಾವಣಾ ಫಲಿತಾಂಶಗಳ ನಂತರ ಅವರ ಆಯ್ಕೆ ಮಾಡಿಕೊಂಡಿರುವ ಹೊಸ ಮಾದರಿಯಾಗಿದೆ.

ಆದಾಯ ತೆರಿಗೆ ಅಧಿಕಾರಿಗಳ ದಾಳಿ

ಗುರುವಾರ (ಡಿಸೆಂಬರ್ 7) ಆದಾಯ ತೆರಿಗೆ ಇಲಾಖೆ ಒಡಿಶಾ ಮತ್ತು ಜಾರ್ಖಂಡ್​​ನ ಬೌಧ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ (ಬಿಡಿಪಿಎಲ್) ಮೇಲೆ ದಾಳಿ ನಡೆಸಿತ್ತು. ಈ ಸಂಸ್ಥೆಯು ಜಾರ್ಖಂಡ್ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರೊಂದಿಗೆ ಸಂಪರ್ಕ ಹೊಂದಿದೆ ಎಂದು ವರದಿಯಾಗಿದೆ. ಅಧಿಕಾರಿಗಳು ಭಾರಿ ಹಣವನ್ನು ವಶಪಡಿಸಿಕೊಂಡಿದ್ದರಿಂದ ದಾಳಿ ಇನ್ನೂ ಮುಂದುವರಿದಿದೆ. ಇದು ಎಣಿಕೆಗೆ ಸಮಯ ತೆಗೆದುಕೊಳ್ಳುತ್ತದೆ. ವರದಿಗಳ ಪ್ರಕಾರ, ಈ ದಾಳಿಯಲ್ಲಿ 300 ಕೋಟಿ ರೂ.ಗೂ ಹೆಚ್ಚು ನಗದು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Mahua Moitra: ಪ್ರಶ್ನೆ ಕೇಳಲು ಲಂಚ; ತೃಣಮೂಲ ಸಂಸದೆ ಮಹುವಾ ಮೋಯಿತ್ರಾ ಲೋಕಸಭೆಯಿಂದ ಉಚ್ಚಾಟನೆ

ರಾಂಚಿ, ಲೋಹರ್ದಗಾ ಮತ್ತು ಒಡಿಶಾದಲ್ಲಿ ಸಂಸದರ ಆವರಣದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದಾಗ ಬ್ಯಾಂಕಿಗೆ ಸಾಗಿಸಲು ಟ್ರಕ್​​ಗಳು ಬೇಕಾಗುವಷ್ಟು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಜಾರ್ಖಂಡ್​ನ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಹರ್ದಗಾ ಮತ್ತು ರಾಂಚಿಯಲ್ಲಿ ಸಂಸದರಿಗೆ ಸಂಬಂಧಿಸಿದ ಆವರಣದಲ್ಲಿ ನಗದು ತುಂಬಿದ ಅಲ್ಮೇರಾಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಸಂಬಲ್ಪುರ, ಬೋಲಾಂಗೀರ್, ತಿತಿಲಾಘರ್, ಬೌಧ್, ಸುಂದರ್ಗಢ್, ರೂರ್ಕೆಲಾ ಮತ್ತು ಭುವನೇಶ್ವರದಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಕಾಂಗ್ರೆಸ್ ಸಂಸದ ಧೀರಜ್ ಸಾಹು ಮತ್ತು ಅವರಿಗೆ ಸಂಬಂಧಿಸಿದ ಮದ್ಯ ಕಂಪನಿಗಳ ಮೇಲೆ ನಡೆದ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Exit mobile version