ನವದೆಹಲಿ: ಅನ್ಯ ಜಾತಿಯವರೊಂದಿಗೆ ಪ್ರೀತಿ ಅಥವಾ ಮದುವೆ ಮಾಡಿಕೊಂಡು ಪ್ರತಿ ವರ್ಷ ನೂರಾರು ಜನರು ಸಾಯುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ (CJI DY Chandrachud) ಅವರು ಹೇಳಿದ್ದಾರೆ. ನೈತಿಕತೆ ಮತ್ತು ಕಾನೂನಿನೊಂದಿಗೆ ಅದರ ಪ್ರಕ್ರಿಯೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಉತ್ತರ ಪ್ರದೇಶದಲ್ಲಿ 1991ರಲ್ಲಿ ಸಂಭವಿಸಿದ ಮರ್ಯಾದಾ ಹತ್ಯೆಯನ್ನು ಉಲ್ಲೇಖಿಸಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅಂದಿನ ಘಟನೆಯನ್ನು ಅಮೆರಿಕನ್ ಮ್ಯಾಗಜಿನ್ ಟೈಮ್ ಕೂಡ ವರದಿ ಮಾಡಿತ್ತು.
ಮೇಲ್ವರ್ಗದ 15 ವರ್ಷದ ಹುಡುಗಿಯೊಬ್ಬಳು ಕೆಳಜಾತಿಯ 20 ವರ್ಷದ ಯುವಕನೊಂದಿಗೆ ಓಡಿ ಹೋಗಿದ್ದಳು. ಬಳಿಕ ಮೇಲ್ವರ್ಗದ ಹುಡುಗಿಯ ಹಳ್ಳಿಯವರು, ಅವರನ್ನು ಕೊಂದು ಹಾಕಿದ್ದರಲ್ಲದೇ, ಸಮಾಜದ ನಿಯಮಗಳನ್ನು ಮೀರಿದ್ದಾರೆಂದು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು.
ಅಶೋಕ ದೇಸಾಯಿ ಮೆಮೋರಿಯಲ್ ಉಪನ್ಯಾಸ ಕಾರ್ಯಾಕ್ರಮದಲ್ಲಿ ಮಾತನಾಡಿದ ಸಿಜೆಐ, ಬಾಹ್ಯ ಸಂಬಂಧವನ್ನು ಕಾನೂನು ನಿಯಂತ್ರಿಸಿದರೆ, ನೈತಿಕತೆಯು ಒಳ ಮನಸ್ಸು ಮತ್ತು ಪ್ರೇರಣೆಯನ್ನು ನಿರ್ವಹಿಸುತ್ತದೆ. ನೈತಿಕತೆಯು ನಮ್ಮ ಆತ್ಮಸಾಕ್ಷಿಗೆ ಕಿವಿಯಾಗುತ್ತದೆ ಮತ್ತು ನಾವು ವರ್ತಿಸುವ ರೀತಿಯ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಿದರು.
ನೈತಿಕತೆ ಎಂಬುದು ನಮ್ಮ ನಡವಳಿಕೆಯನ್ನು ನಿಯಂತ್ರಿಸುವ ಮೌಲ್ಯಗಳ ಸಂಹಿತೆ ಎಂದು ನಾವು ಒಪ್ಪಿಕೊಳ್ಳಬಹುದು. ಆದರೆ, ನೈತಿಕತೆ ಏನೆಂಬುದನ್ನು ನಾವೆಲ್ಲರೂ ಪ್ರಮುಖವಾಗಿ ಒಪ್ಪಿಕೊಳ್ಳುತ್ತೇವೆಯೋ? ಅಂದರೆ, ನನಗೆ ಯಾವುದು ನೈತಿಕತೆಯಾಗಿದೆಯೋ ಅದು ನಿನಗೂ ನೈತಿಕತೆಯಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕಲ್ಲವೇ ಎಂದು ಹೇಳಿದರು.
ಇದನ್ನೂ ಓದಿ | Justice D Y Chandrachud | ಡಿ ವೈ ಚಂದ್ರಚೂಡ್ ನ್ಯಾಯನಿಷ್ಠ, ಧೈರ್ಯಶಾಲಿ ನ್ಯಾಯಮೂರ್ತಿ