Site icon Vistara News

EVM Row: ಮೊಬೈಲ್‌ ಬಳಸಿ ಇವಿಎಂ ಅನ್‌ಲಾಕ್‌ ಮಾಡಿದ ಸಂಸದನ ಸಂಬಂಧಿ; ಎಲ್ಲಿ ನಡೆಯಿತು ಮೋಸ?

EVM Row

EVM Row: Case against Shinde Sena MP's brother-in-law for using phone to unlock Electronic Voting Machine

ಮುಂಬೈ: ದೇಶದಲ್ಲಿ ಲೋಕಸಭೆ ಚುನಾವಣೆ (Lok Sabha Election 2024) ಮುಗಿದ ಬೆನ್ನಲ್ಲೇ ವಿದ್ಯುನ್ಮಾನ ಮತಯಂತ್ರಗಳ ದಕ್ಷತೆ ಕುರಿತು ಚರ್ಚೆ ಶುರುವಾಗಿದೆ. ಇವಿಎಂಗಳ ಬಳಕೆಯೇ ಬೇಡ ಎಂದು ಎಲಾನ್‌ ಮಸ್ಕ್‌ (Elon Musk) ಹೇಳಿದ್ದಾರೆ. ಇದರ ಬೆನ್ನಲ್ಲೇ, “ಭಾರತದಲ್ಲಿ ಇವಿಎಂಗಳನ್ನು ಪರಿಶೀಲನೆ ಮಾಡಲು ಯಾರಿಗೂ ಆಗುವುದಿಲ್ಲ” ಎಂಬುದಾಗಿ ರಾಹುಲ್‌ ಗಾಂಧಿ ಮಸ್ಕ್‌ ಅವರ ಮಾತನ್ನೇ ಅನುಮೋದಿಸಿದ್ದಾರೆ. ಇದರ ಬೆನ್ನಲ್ಲೇ, ಮೊಬೈಲ್‌ ಬಳಸಿ ಇವಿಎಂಅನ್ನು ಅನ್‌ಲಾಕ್‌ ಮಾಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಶಿವಸೇನೆ ಸಂಸದ ರವೀಂದ್ರ ವೈಕರ್‌ (Ravindra Waikar) ಅವರ ಬಾವ ಮಂಗೇಶ್‌ ಪಂಡಿಲ್ಕರ್‌ ಅವರ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ಇದು ಇವಿಎಂ ತಿರುಚಲಾಗುತ್ತದೆ ಎಂಬ ಆರೋಪಕ್ಕೆ ಪುಷ್ಟಿಯನ್ನೂ ನೀಡಿದಂತಾಗಿದೆ.

ಜೂನ್‌ 4ರಂದು ಮುಂಬೈ ವಾಯವ್ಯ ಲೋಕಸಭೆ ಕ್ಷೇತ್ರದ ಗೋರೆಗಾಂವ್‌ ಪ್ರದೇಶದ ಕೇಂದ್ರವೊಂದರಲ್ಲಿ ಮತಎಣಿಕೆ ಮಾಡಲಾಗುತ್ತಿತ್ತು. ಇದೇ ಕ್ಷೇತ್ರದ ಶಿವಸೇನೆ (ಏಕನಾಥ್‌ ಶಿಂಧೆ) ಸಂಸದ ರವೀಂದ್ರ ವೈಕರ್‌ ಅವರ ಬಾವ ಮಂಗೇಶ್ ಪಂಡಿಲ್ಕರ್‌ ಅವರು ಮತಎಣಿಕೆ ಕೇಂದ್ರಕ್ಕೆ ತೆರಳಿದ್ದಾರೆ. ಮತಎಣಿಕೆ ಕೇಂದ್ರದಲ್ಲಿ ಮಂಗೇಶ್‌ ಪಂಡಿಲ್ಕರ್‌ ಅವರು ತಮ್ಮ ಮೊಬೈಲ್‌ಅನ್ನು ಬಳಸಿಯೇ ಇವಿಎಂ ಅನ್‌ಲಾಕ್‌ ಮಾಡಿದ್ದಾರೆ. ತಮ್ಮ ಮೊಬೈಲ್‌ಗೆ ಒಟಿಪಿ ಜನರೇಟ್‌ ಮಾಡಿಕೊಂಡು ಅನ್‌ಲಾಕ್‌ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

‌ಲೋಕಸಭೆ ಚುನಾವಣೆಯಲ್ಲಿ ರವೀಂದ್ರ ವೈಕರ್‌ ಅವರು ಶಿವಸೇನೆಯ (ಉದ್ಧವ್‌ ಠಾಕ್ರೆ ಬಣ) ಅಭ್ಯರ್ಥಿ ಅಮೋಲ್‌ ಗಜಾನನ ಕೀರ್ತಿಕಾರ್ ಅವರ ವಿರುದ್ಧ ಕೇವಲ 48 ಮತಗಳ ಅಂತರದಿದ್ದ ಗೆದ್ದಿದ್ದಾರೆ. ರವೀಂದ್ರ ವೈಕರ್‌ ಅವರ ಸಂಬಂಧಿಯು ಇವಿಎಂ ತಿರುಚಿದ್ದಾರೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಉದ್ಧವ್‌ ಠಾಕ್ರೆ ಬಣದ ಶಿವಸೇನೆಯು ಮರು ಎಣಿಕೆಗಾಗಿ ಚುನಾವಣಾ ಆಯೋಗಕ್ಕೆ ಮನವಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

“ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಬಳಸಿ ಇವಿಎಂಗಳನ್ನು ಹ್ಯಾಕ್‌ ಮಾಡಬಹುದು” ಎಂದು ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಹೇಳಿರುವ ಬೆನ್ನಲ್ಲೇ ರಾಹುಲ್‌ ಗಾಂಧಿ ಅವರು ಇವಿಎಂ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. “ಭಾರತದಲ್ಲಿ ಇವಿಎಂಗಳು ಎಂದರೆ ಬ್ಲ್ಯಾಕ್‌ ಬಾಕ್ಸ್‌ (ಯಾರಿಗೂ ಗೊತ್ತಾಗದ, ಒಬ್ಬರಿಗೆ ಮಾತ್ರ ಆಕ್ಸೆಸ್‌ ಇರುವ ಎಲೆಕ್ಟ್ರಾನಿಕ್‌ ಡಿವೈಸ್)‌ ಇದ್ದಂತೆ. ಅವುಗಳನ್ನು ಯಾರೂ ಪರಿಶೀಲನೆ ಮಾಡಲು, ತಪಾಸಣೆ ಮಾಡಲು ಸಾಧ್ಯವಿಲ್ಲ. ಭಾರತದ ಚುನಾವಣೆ ಪಾರದರ್ಶಕತೆ ಕುರಿತು ಗಂಭೀರವಾದ ಆತಂಕಗಳು ವ್ಯಕ್ತವಾಗುತ್ತಿವೆ. ಸಂಸ್ಥೆಗಳು ವಿಶ್ವಾಸ ಕಳೆದುಕೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಒಂದು ನಾಟಕೀಯ ಸ್ವರೂಪ ಪಡೆಯುತ್ತದೆ” ಎಂಬುದಾಗಿ ರಾಹುಲ್‌ ಗಾಂಧಿ ಹೇಳಿದ್ದಾರೆ.

ಲೋಕಸಭೆ ಚುನಾವಣೆ ಹೊತ್ತಿನಲ್ಲೂ ಭಾರತದಲ್ಲಿ ವಿದ್ಯುನ್ಮಾನ ಮತಯಂತ್ರಗಳ ದಕ್ಷತೆ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಇವಿಎಂಗಳಲ್ಲಿ ದಾಖಲಾದ ಮತಗಳನ್ನು ಹಾಗೂ ವಿವಿಪ್ಯಾಟ್‌ನಲ್ಲಿ ದಾಖಲಾದ ಮತಗಳನ್ನು ಶೇ.100ರಷ್ಟು ತಾಳೆ ಹಾಕಬೇಕು ಎಂಬುದಾಗಿ ನಿರ್ದೇಶನ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸ್ಲಲಿಸಲಾಗಿತ್ತು. ಆದರೆ, ನ್ಯಾಯಾಲಯವು ಅರ್ಜಿಗಳನ್ನು ತಳ್ಳಿಹಾಕಿತ್ತು. ಇನ್ನು, ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಇದರ ಮಧ್ಯೆಯೇ, ಎಲಾನ್‌ ಮಸ್ಕ್‌ ಅವರು ಇವಿಎಂಗಳನ್ನು ಹ್ಯಾಕ್‌ ಮಾಡಬಹುದು ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: Rahul Gandhi: ಕಾಂಗ್ರೆಸ್‌ ಹೆಚ್ಚು ಕ್ಷೇತ್ರ ಗೆದ್ದರೂ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಾಹುಲ್‌ ಗಾಂಧಿ !

Exit mobile version