Site icon Vistara News

Rahul Gandhi: ಕಾಂಗ್ರೆಸ್‌ ಹೆಚ್ಚು ಕ್ಷೇತ್ರ ಗೆದ್ದರೂ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಾಹುಲ್‌ ಗಾಂಧಿ !

Rahul Gandhi

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಮುಗಿದು, ಫಲಿತಾಂಶವೂ ಪ್ರಕಟವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಬಹುಮತ ಸಾಧಿಸಿ, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಳೆದ ಚುನಾವಣೆಯಲ್ಲಿ 52 ಕ್ಷೇತ್ರ ಗೆದ್ದಿದ್ದ ಕಾಂಗ್ರೆಸ್‌ ಈಗ 99 ಕ್ಷೇತ್ರಗಳಲ್ಲಿ ಗೆದ್ದಿದೆ. ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟವೂ (INDIA Bloc) 234 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಬಿಜೆಪಿಯೊಂದಕ್ಕೇ ಬಹುಮತ ಬರುವುದನ್ನು ತಪ್ಪಿಸಿವೆ. ಇಷ್ಟೆಲ್ಲ ಆದರೂ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಮತ್ತೆ ಚುನಾವಣೆ ಮತಯಂತ್ರಗಳ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

“ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಬಳಸಿ ಇವಿಎಂಗಳನ್ನು ಹ್ಯಾಕ್‌ ಮಾಡಬಹುದು” ಎಂದು ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಹೇಳಿರುವ ಬೆನ್ನಲ್ಲೇ ರಾಹುಲ್‌ ಗಾಂಧಿ ಅವರು ಇವಿಎಂ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. “ಭಾರತದಲ್ಲಿ ಇವಿಎಂಗಳು ಎಂದರೆ ಬ್ಲ್ಯಾಕ್‌ ಬಾಕ್ಸ್‌ (ಯಾರಿಗೂ ಗೊತ್ತಾಗದ, ಒಬ್ಬರಿಗೆ ಮಾತ್ರ ಆಕ್ಸೆಸ್‌ ಇರುವ ಎಲೆಕ್ಟ್ರಾನಿಕ್‌ ಡಿವೈಸ್)‌ ಇದ್ದಂತೆ. ಅವುಗಳನ್ನು ಯಾರೂ ಪರಿಶೀಲನೆ ಮಾಡಲು, ತಪಾಸಣೆ ಮಾಡಲು ಸಾಧ್ಯವಿಲ್ಲ. ಭಾರತದ ಚುನಾವಣೆ ಪಾರದರ್ಶಕತೆ ಕುರಿತು ಗಂಭೀರವಾದ ಆತಂಕಗಳು ವ್ಯಕ್ತವಾಗುತ್ತಿವೆ. ಸಂಸ್ಥೆಗಳು ವಿಶ್ವಾಸ ಕಳೆದುಕೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಒಂದು ನಾಟಕೀಯ ಸ್ವರೂಪ ಪಡೆಯುತ್ತದೆ” ಎಂಬುದಾಗಿ ರಾಹುಲ್‌ ಗಾಂಧಿ ಹೇಳಿದ್ದಾರೆ.

ಎಲಾನ್‌ ಮಸ್ಕ್‌ ಹೇಳಿದ್ದಿಷ್ಟು…

ಅಮೆರಿಕದ ಚುನಾವಣೆಯಲ್ಲಿ ಬಳಸುವ ಇವಿಎಂಗಳ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. “ಅಮೆರಿಕದಲ್ಲಿ ನಾವು ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷೀನ್‌ಗಳ ಬಳಕೆಯನ್ನು ನಿಲ್ಲಿಸಬೇಕು. ಹ್ಯಾಕರ್‌ಗಳು ಅಥವಾ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನವನ್ನು ಬಳಕೆ ಮಾಡುವ ಮೂಲಕ ಇವಿಎಂಗಳನ್ನು ಹ್ಯಾಕ್‌ ಮಾಡುವ ಸಾಧ್ಯತೆ ಇದೆ. ಇದು ಸಣ್ಣ ಸಂಗತಿಯಾದರೂ, ದೊಡ್ಡ ಸಮಸ್ಯೆಯಾಗಿದೆ” ಎಂದು ಎಲಾನ್‌ ಮಸ್ಕ್‌ ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದು ಅಮೆರಿಕದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ರಾಜೀವ್‌ ಚಂದ್ರಶೇಖರ್‌ ತಿರುಗೇಟು

ಎಲಾನ್‌ ಮಸ್ಕ್‌ ಮಾಡಿರುವ ಆರೋಪಕ್ಕೆ ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ತಿರುಗೇಟು ನೀಡಿದ್ದಾರೆ. “ಸುರಕ್ಷಿತವಾಗಿರುವ ಡಿಜಿಟಲ್‌ ಹಾರ್ಡ್‌ವೇರ್‌ಅನ್ನು ಯಾರೂ ತಯಾರಿಸಲು ಆಗುವುದಿಲ್ಲ ರೀತಿಯಲ್ಲಿ ನೀವು ಇವಿಎಂ ಕುರಿತು ಸಾಮಾನ್ಯವಾದ ಹೇಳಿಕೆ ನೀಡಿದ್ದೀರಿ. ಇವಿಎಂಗೆ ಇಂಟರ್‌ನೆಟ್‌, ಬ್ಲ್ಯೂಟ್‌, ವೈಫೈ ಸಂಪರ್ಕ ಕೂಡ ಇಲ್ಲ. ಕಾರ್ಖಾನೆಯಲ್ಲಿ ತಯಾರಾದ ಇವಿಎಂಗಳನ್ನು, ಯಾವುದೇ ಕನೆಕ್ಟಿವಿಲ್ಲದ ಇವಿಎಂಗಳನ್ನು ಹ್ಯಾಕ್‌ ಮಾಡಲು ಆಗುವುದಿಲ್ಲ. ಭಾರತದಲ್ಲಿ ಇದು ಸಾಬೀತಾಗಿದೆ. ನಾವು ಈ ಕುರಿತು ಒಂದು ಟ್ಯುಟೋರಿಯಲ್‌ ತೆರೆಯೋಣ” ಎಂದು ಟಾಂಟ್‌ ನೀಡಿದ್ದಾರೆ.

ಲೋಕಸಭೆ ಚುನಾವಣೆ ಹೊತ್ತಿನಲ್ಲೂ ಭಾರತದಲ್ಲಿ ವಿದ್ಯುನ್ಮಾನ ಮತಯಂತ್ರಗಳ ದಕ್ಷತೆ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಇವಿಎಂಗಳಲ್ಲಿ ದಾಖಲಾದ ಮತಗಳನ್ನು ಹಾಗೂ ವಿವಿಪ್ಯಾಟ್‌ನಲ್ಲಿ ದಾಖಲಾದ ಮತಗಳನ್ನು ಶೇ.100ರಷ್ಟು ತಾಳೆ ಹಾಕಬೇಕು ಎಂಬುದಾಗಿ ನಿರ್ದೇಶನ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸ್ಲಲಿಸಲಾಗಿತ್ತು. ಆದರೆ, ನ್ಯಾಯಾಲಯವು ಅರ್ಜಿಗಳನ್ನು ತಳ್ಳಿಹಾಕಿತ್ತು. ಇನ್ನು, ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಇದರ ಮಧ್ಯೆಯೇ, ಎಲಾನ್‌ ಮಸ್ಕ್‌ ಅವರು ಇವಿಎಂಗಳನ್ನು ಹ್ಯಾಕ್‌ ಮಾಡಬಹುದು ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: Rahul Gandhi : ಮಹಾತ್ಮ ರಾಹುಲ್​, ಕುತಂತ್ರಿ ಗಾಂಧೀಜಿ; ಚರ್ಚೆಗೆ ಗ್ರಾಸವಾಯ್ತು​ ಕಾಂಗ್ರೆಸ್​ ನಾಯಕನ ಹೇಳಿಕೆ

Exit mobile version