Site icon Vistara News

Chandrababu Naidu: ಆಂಧ್ರದಲ್ಲಿ ಹೈಡ್ರಾಮಾ; ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ, ಏನಿದು ಕೇಸ್?

Chandrababu Naidu

ಹೈದರಾಬಾದ್:‌ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಾರ್ಟಿ (TDP) ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು (Chandrababu Naidu) ಅವರನ್ನು ಶನಿವಾರ (ಸೆಪ್ಟೆಂಬರ್‌ 9) ಬಂಧಿಸಲಾಗಿದೆ. ಕೌಶಲಾಭಿವೃದ್ಧಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮೊದಲ ಆರೋಪಿಯಾಗಿರುವ ಚಂದ್ರಬಾಬು ನಾಯ್ಡು ಅವರನ್ನು ಬೆಳಗಿನ ಜಾವ 6 ಗಂಟೆಗೆ ನಂದ್ಯಾಲದಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಚಂದ್ರಬಾಬು ನಾಯ್ಡು ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ನಂದ್ಯಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಇದಾದ ಬಳಿಕ ಅವರನ್ನು ವಿಜಯವಾಡ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಕೆಲ ದಿನಗಳಿಂದ ಚಂದ್ರಬಾಬು ನಾಯ್ಡು ಅವರಿಗೆ ಬಂಧನದ ಭೀತಿ ಎದುರಾಗಿತ್ತು. ಇದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ನನ್ನ ಮೇಲೆ ದಾಳಿ ನಡೆಯುತ್ತದೆ, ನನ್ನನ್ನು ಬಂಧಿಸಲಾಗುತ್ತದೆ ಎಂದು ಅವರು ಹೇಳಿಕೊಂಡೇ ತಿರುಗಾಡುತ್ತಿದ್ದರು. ಈಗ ಕೊನೆಗೂ ಸಿಐಡಿ ಅಧಿಕಾರಿಗಳು ಮಾಜಿ ಮುಖ್ಯಮಂತ್ರಿಯನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?

ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿದ್ದಾಗ ಆಂಧ್ರಪ್ರದೇಶ ರಾಜ್ಯ ಕೌಶಲಾಭಿವೃದ್ಧಿ ನಿಗಮದಲ್ಲಿ (APSSDC) ಸುಮಾರು 3,300 ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ತಿಳಿದುಬಂದಿದೆ. ನಿರುದ್ಯೋಗಿ ಯುವಕರು ಹಾಗೂ ಯುವತಿಯರ ಕೌಶಲಾಭಿವೃದ್ಧಿಗೊಳಿಸುವ ದಿಸೆಯಲ್ಲಿ 2016ರಲ್ಲಿ ನಿಗಮ ಸ್ಥಾಪಿಸಲಾಗಿದ್ದು, ಯೋಜನೆ ಜಾರಿಯಲ್ಲಿ ಭಾರಿ ಹಗರಣ ನಡೆದಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸುತ್ತಿದ್ದು, ಚಂದ್ರಬಾಬು ನಾಯ್ಡು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಇದನ್ನೂ ಓದಿ: Freebies politics : ಆಂಧ್ರ ಚುನಾವಣೆ ಗೆಲ್ಲಲು ಕಾಂಗ್ರೆಸ್‌ನ ಗ್ಯಾರಂಟಿ ಮಾರ್ಗ ಹಿಡಿದ ಚಂದ್ರಬಾಬು ನಾಯ್ಡು, ಏನೇನು ಫ್ರೀ?

ಮಧ್ಯರಾತ್ರಿ ಹೈಡ್ರಾಮಾ

ಚಂದ್ರಬಾಬು ನಾಯ್ಡು ಅವರನ್ನು ಬಂಧಿಸುವ ಮೊದಲು ಶುಕ್ರವಾರ ತಡರಾತ್ರಿ ನಂದ್ಯಾಲದಲ್ಲಿ ಹೈಡ್ರಾಮಾ ನಡೆದಿದೆ. ಕಾರ್ಯಕ್ರಮವೊಂದರ ನಿಮಿತ್ತ ಚಂದ್ರಬಾಬು ನಾಯ್ಡು ಅವರು ನಂದ್ಯಾಲದಲ್ಲಿರುವ ಆರ್‌.ಕೆ. ಫಂಕ್ಷನ್‌ ಹಾಲ್‌ಗೆ ಆಗಮಿಸಿದ್ದರು. ಆಗ ಸಿಐಡಿ ಅಧಿಕಾರಿಗಳು ಚಂದ್ರಬಾಬು ನಾಯ್ಡು ಅವರಿಗೆ ಅರೆಸ್ಟ್‌ ವಾರೆಂಟ್‌ ನೀಡಿದರು. ಇದಾದ ಬಳಿಕ ಟಿಡಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಕಾರಣ ಹೈಡ್ರಾಮಾ ನಡೆಯಿತು. ಕೊನೆಗೂ ಶನಿವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿಯನ್ನು ಬಂಧಿಸುವಲ್ಲಿ ಸಿಐಡಿ ಅಧಿಕಾರಿಗಳು ಯಶಸ್ವಿಯಾದರು.

Exit mobile version