ನವ ದೆಹಲಿ: ಸಾಂವಿಧಾನಿಕ ಹುದ್ದೆಯನ್ನು ಹೊಂದಿದವರ ನಿವಾಸದಲ್ಲಿ ಕೆಲಸ ಮಾಡುವ ಸಹಾಯಕ ಸಿಬ್ಬಂದಿ ಮತ್ತು ಗುಮಾಸ್ತರ ಬಗ್ಗೆ ಅಧಿಕೃತ ಅಂಕಿ ಅಂಶಗಳನ್ನು ಪರಿಗಣಿಸಿದರೆ, ನ್ಯಾಯಮೂರ್ತಿ ಯುಯು ಲಲಿತ್ ಅವರು ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ 40ಕ್ಕೂ ಹೆಚ್ಚು ಸಿಬ್ಬಂದಿಯದ್ದು (Ex-CJI UU Lalit) ಗರಿಷ್ಠ ದಾಖಲೆಯಾಗುತ್ತದೆ.
ಯುಯು ಲಲಿತ್ ಅವರು 74 ದಿನಗಳ ಕಾಲ ಭಾರತದ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು. ಆಗ ಅಕ್ಬರ್ ರಸ್ತೆಯಲ್ಲಿನ ಅವರ ನಿವಾಸದಲ್ಲಿ 40ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಗುಮಾಸ್ತರು ಸೇವೆಯಲ್ಲಿದ್ದರು.
ರಾಷ್ಟ್ರಪತಿ ಭವನ ಅಥವಾ ಪ್ರಧಾನಿಯವರ ಕಚೇರಿ ಹೊರತುಪಡಿಸಿ, ಉಳಿದ ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇದ್ದವರಿಗೆ, ಅವರವರ ನಿವಾಸದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಿಬ್ಬಂದಿ ಮತ್ತು ಗುಮಾಸ್ತರ ಸೇವೆ ಲಭ್ಯವಿದ್ದಿರಲಿಲ್ಲ. 2022ರ ಆಗಸ್ಟ್ 27 ರಿಂದ ನವೆಂಬರ್ 8 ತನಕ 49ನೇ ಸಿಜೆಐ ಆಗಿ ಕಾರ್ಯನಿರ್ವಹಿಸಿದ್ದರು. ಆಗ 40ಕ್ಕೂ ಹೆಚ್ಚು ಸಿಬ್ಬಂದಿ ಅವರ ನಿವಾಸದಲ್ಲಿದ್ದರು. ಹುದ್ದೆಯಿಂದ ನಿರ್ಗಮಿಸಿದ ಬಳಿಕವೂ ಅವರಲ್ಲಿ 12 ಮಂದಿಯನ್ನು ಉಳಿಸಿಕೊಳ್ಳಲು ಲಲಿತ್ ಅವರ ಕಚೇರಿ ಮನವಿ ಮಾಡಿತ್ತು. ಸಾಮಾನ್ಯವಾಗಿ ಸಿಜೆಐ ಅವರ ಅಧಿಕಾರಾವಧಿಯಲ್ಲಿ 12-15 ಸಿಬ್ಬಂದಿಯನ್ನು ಹೊಂದಿರುತ್ತಾರೆ. ನಿವೃತ್ತರಾದ ಬಳಿಕ ಇಬ್ಬರು ಅಥವಾ ಮೂವರನ್ನು ಉಳಿಸಿಕೊಳ್ಳುತ್ತಾರೆ.
ಆದರೆ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ಯುಯು ಲಲಿತ್ ಅವರು ನಿರ್ಗಮಿಸಿ ಒಂದೂವರೆ ತಿಂಗಳ ಬಳಿಕವೂ 28 ಗುಮಾಸ್ತರು ಮತ್ತು ಸಹಾಯಕ ಸಿಬ್ಬಂದಿ ಅವರ ನಿವಾಸದಲ್ಲಿ ಇದ್ದಾರೆ. ನಿವಾಸದ ಸ್ವಚ್ಛತೆ ಮತ್ತು ನಿರ್ವಹಣೆಯ ಬಹುಪಾಲು ಕೆಲಸಗಳನ್ನು ಹೊರಗುತ್ತಿಗೆಗೆ ನೀಡಲಾಗಿದೆ.
ಕಳೆದ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರವಿ ಸುಪ್ರೀಂಕೋರ್ಟ್ ನ್ಯಾಯಾಧೀಶರ ನಿಯಮಾವಳಿ 1959ಕ್ಕೆ ತಿದ್ದುಪಡಿ ತಂದಿತ್ತು. ಹಾಗೂ ಬಾಡಿಗೆ ರಹಿತ ವಸತಿ ವ್ಯವಸ್ಥೆಯನ್ನು ನಿವೃತ್ತ ನ್ಯಾಯಾಧೀಶರಿಗೆ ಆರು ತಿಂಗಳ ಅವಧಿಗೆ ವ್ಯವಸ್ಥೆ ಮಾಡಿತ್ತು. ಅದರಂತೆ ಲಲಿತ್ ಅವರಿಗೂ ಷಹಜಹಾನ್ ರಸ್ತೆಯಲ್ಲಿ ಬಂಗಲೆ ಒದಗಿಸಲಾಗಿತ್ತು. ಆದರೆ ಆ ಬಂಗಲೆ ಚೆನ್ನಾಗಿಲ್ಲ ಎಂದು ಅವರು ತಿರಸ್ಕರಿಸಿದ್ದರು. ಕೊನೆಗೆ ಸಫ್ದರ್ ಜಂಗ್ ರಸ್ತೆಯ ಬಂಗಲೆಯನ್ನು ಲಲಿತ್ ಅವರು ಒಪ್ಪಿದ್ದರು. ಅಲ್ಲಿಗೆ ಹೊಸ ವರ್ಷ ಸ್ಥಳಾಂತರವಾಗುವ ನಿರೀಕ್ಷೆ ಇದೆ.