Site icon Vistara News

CR Kesavan: ಸಿ.ರಾಜಗೋಪಾಲಚಾರಿ ಮರಿಮೊಮ್ಮಗ ಸಿ.ಆರ್.‌ ಕೇಶವನ್ ಬಿಜೆಪಿ ಸೇರ್ಪಡೆ, ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆ

Ex-Congress leader and great-grandson of C Rajagopalachari, CR Kesavan joins BJP

Ex-Congress leader and great-grandson of C Rajagopalachari, CR Kesavan joins BJP

ನವದೆಹಲಿ: ಭಾರತದ ಮೊದಲ ಗವರ್ನರ್‌ ಜನರಲ್‌ ಸಿ.ರಾಜಗೋಪಾಲಚಾರಿ ಅವರ ಮರಿಮೊಮ್ಮಗ, ಕಾಂಗ್ರೆಸ್‌ ಮಾಜಿ ನಾಯಕ ಸಿ.ಆರ್.ಕೇಶವನ್‌ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ನವದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ನಾಯಕರ ಸಮ್ಮುಖದಲ್ಲಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದರಿಂದ ತಮಿಳುನಾಡಿನಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾದಂತಾಗಿದೆ. ಹಾಗೆಯೇ, ತಮಿಳುನಾಡಿನಲ್ಲಿ ಬಿಜೆಪಿ ಬಲವರ್ಧನೆಗೆ ಸಿ.ಆರ್.ಕೇಶವನ್‌ (CR Kesavan) ಅವರು ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸಕಾರಾತ್ಮಕ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ ಸೇರ್ಪಡೆಯಾದ ಬಳಿಕ ಮಾತನಾಡಿದ ಕೇಶವನ್‌, “ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನಲ್ಲಿರುವಾಗಲೇ ನಾನು ಜಗತ್ತಿನ ಅತಿದೊಡ್ಡ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸಂತಸ ತಂದಿದೆ. ನನ್ನನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವುದಕ್ಕೆ ನಾಯಕರಿಗೆ ಧನ್ಯವಾದಗಳು. ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ನೀತಿಗಳು, ಭ್ರಷ್ಟಾಚಾರ ರಹಿತ ಆಡಳಿತ ಹಾಗೂ ಸುಧಾರಣೆ ಆಧಾರಿತ ಸರ್ಕಾರ, ಜಗತ್ತಿನಲ್ಲಿಯೇ ಭಾರತವು ಐದನೇ ಬೃಹತ್‌ ಆರ್ಥಿಕತೆ ಹೊಂದುವಂತೆ ಮಾಡಿದ್ದನ್ನು ಗಮನಿಸಿ, ಮೋದಿ ಅವರನ್ನು ಮೆಚ್ಚಿ ಬಿಜೆಪಿ ಸೇರ್ಪಡೆಯಾಗಿದ್ದೇನೆ” ಎಂದು ಮಾಹಿತಿ ನೀಡಿದರು.

ಬಿಜೆಪಿ ಸೇರಿದ ಸಿ.ಆರ್.ಕೇಶವನ್

ಮೋದಿ ನಾಯಕತ್ವ ಮೆಚ್ಚಿ ಬಿಜೆಪಿಗೆ

“ನರೇಂದ್ರ ಮೋದಿ ಅವರ ಧೀಮಂತ ನಾಯಕತ್ವವು ದೇಶದ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ. ನೀವು ಪ್ರತಿಯೊಂದು ಕಡೆಯೂ ಪ್ರಗತಿಯನ್ನು, ಏಳಿಗೆಯನ್ನು ಕಾಣಬಹುದಾಗಿದೆ. ನಾವು ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಂಬಿಕೆ ಇರಿಸಿದ್ದು, ಅವರೇ ನಮಗೆ ಸರಿಯಾದ ಮಾರ್ಗ ತೋರಲಿದ್ದಾರೆ” ಎಂದು ಹೇಳಿದರು. ಸಿ.ಆರ್.‌ ಕೇಶವನ್‌ ಅವರು ತಮಿಳುನಾಡು ಕಾಂಗ್ರೆಸ್‌ನಲ್ಲಿದ್ದು, ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಅವರು ಯುವ ನಾಯಕರಾದ ಕಾರಣ ಬಿಜೆಪಿಗೆ ಸೇರಿರುವುದು ತಮಿಳುನಾಡಿನಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ. ಇವರು ಬಿಜೆಪಿಗೆ ಸೇರ್ಪಡೆಯಾಗಿರುವುದನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಸ್ವಾಗತಿಸಿದ್ದಾರೆ.

ಇದನ್ನೂ ಓದಿ: Karnataka Elections : ಜೆಡಿಎಸ್‌ಗೆ ಹೊಡೆತ; ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ದೆಹಲಿಯಲ್ಲಿ ಬಿಜೆಪಿ ಸೇರ್ಪಡೆ

ಎರಡು ದಿನಗಳ ಹಿಂದಷ್ಟೇ ಕೇಂದ್ರದ ಮಾಜಿ ಸಚಿವ ಎ.ಕೆ. ಆ್ಯಂಟನಿ ಅವರ ಪುತ್ರ ಅನಿಲ್‌ ಆ್ಯಂಟನಿ ಅವರು ಕಾಂಗ್ರೆಸ್‌ ತೊರೆದು, ಬಿಜೆಪಿ ಸೇರ್ಪಡೆಯಾಗಿದ್ದರು. ಇದರಿಂದ ಕೇರಳದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿತ್ತು. ಅಷ್ಟೇ ಅಲ್ಲ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್‌ ಕುಮಾರ್‌ ರೆಡ್ಡಿ ಅವರು ಕೂಡ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಿದ್ದಾರೆ. ಅನಿಲ್‌ ಆ್ಯಂಟನಿ ಅವರು ಬಿಬಿಸಿ ಡಾಕ್ಯುಮೆಂಟರಿ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರ ನಡೆ ಬೇಸತ್ತು ರಾಜೀನಾಮೆ ನೀಡಿದ್ದಾರೆ. ಇನ್ನು ಕಿರಣ್‌ ಕುಮಾರ್‌ ರೆಡ್ಡಿ ಅವರು ಕೂಡ ನಾಯಕತ್ವ ಬಿಕ್ಕಟ್ಟಿನಿಂದಾಗಿ ಬಿಜೆಪಿ ಸೇರಿದ್ದಾರೆ.

Exit mobile version