Site icon Vistara News

Ambati Rayudu: ಆಂಧ್ರ ರಾಜಕಾರಣಕ್ಕೆ ಮಾಜಿ ಕ್ರಿಕೆಟರ್ ಅಂಬಾಟಿ ರಾಯುಡು ಎಂಟ್ರಿ!

Ex CSK Cricketer Ambati Rayudu entered Andhra Pradesh politics with CM Jagan Party

ಹೈದ್ರಾಬಾದ್: ಭಾರತದ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು (Ex Cricketer Ambati Rayudu) ಅವರು ಆಂಧ್ರ ಪ್ರದೇಶದ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದು(Andhra Pradesh Politics), ತಮ್ಮ ಜೀವನದ ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ. ಆಂಧ್ರ ಪ್ರದೇಶ ಸಿಎಂ ವೈಎಸ್ ಜಗನ್ ರೆಡ್ಡಿ (CM Jagan Mohan Reddy) ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್ ಪಾರ್ಟಿಯನ್ನು (YSR Congress Party) ಅವರು ಗುರುವಾರ ಸೇರ್ಪಡೆಯಾದರು. ವಿಜಯವಾಡದಲ್ಲಿ ಮುಖ್ಯ ಮಂತ್ರಿ ವೈಎಸ್ ಜಗನ್ ರೆಡ್ಡಿ, ಡೆಪ್ಯುಟಿ ಸಿಎಂ ನಾರಾಯಣ ಸ್ವಾಮಿ, ಸಂಸದ ಪೆದ್ದಿರೆಡ್ಡಿ ಮಿಥುನ್ ರೆಡ್ಡಿ ಅವರ ಸಮ್ಮುಖದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಾರ್ಟಿಯನ್ನು ಅಧಿಕೃತವಾಗಿ ಸೇರಿದರು.

ಭಾರತೀಯ ಖ್ಯಾತ ಕ್ರಿಕೆಟಿಗ ಅಂಬಾಟಿ ತಿರುಪತಿ ರಾಯುಡು ಅವರು ಮುಖ್ಯಮಂತ್ರಿ ವೈಎಸ್ ಜಗನ್ ಅವರ ಸಮ್ಮುಖದಲ್ಲಿ ಸಿಎಂ ಕ್ಯಾಂಪ್ ಕಚೇರಿಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ನಾರಾಯಣ ಸ್ವಾಮಿ ಮತ್ತು ಸಂಸದ ಪೆದ್ದಿರೆಡ್ಡಿ ಮಿಥುನ್ ರೆಡ್ಡಿ ಭಾಗವಹಿಸಿದ್ದರು ಎಂದು ಪಕ್ಷವು ತನ್ನ ಎಕ್ಸ್ ವೇದಿಕೆಯ ಖಾತೆಯಲ್ಲಿ ಬರೆದುಕೊಂಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ನಂತರ ರಾಯುಡು 2023ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದರು. ಆಂಧ್ರಪ್ರದೇಶ ಮೂಲದ ಅವರು ದೇಶೀಯ ಕ್ರಿಕೆಟ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ಟೀಂ ಇಂಡಿಯಾ ಪರ ಕೂಡ ಆಡಿದ್ದರು. 37 ವರ್ಷದ ಅಂಬಾಟಿ ರಾಯುಡು ಅವರು ರಾಜಕಾರಣ ಸೇರುವುದಾಗಿ ಕಳೆದ ಜೂನ್ ತಿಂಗಳಲ್ಲಿ ಘೋಷಣೆ ಮಾಡಿದ್ದರು. ತಮ್ಮ ತವರು ಜಿಲ್ಲೆ ಗುಂಟೂರಿಗೆ ಮೇ ತಿಂಗಳಲ್ಲಿ ಪ್ರವಾಸ ಕೈಗೊಂಡಿದ್ದ ರಾಯುಡು ಅವರು, ಸ್ಥಳೀಯ ಸಮಸ್ಯೆಗಳನ್ನು ಆಲಿಸಿದ್ದರು. ನಾನಾ ಸ್ತರದ ಜನರೊಂದಿಗೆ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಜನಸೇವೆಗಾಗಿ ನಾನು ಶೀಘ್ರದಲ್ಲೇ ಆಂಧ್ರಪ್ರದೇಶದಲ್ಲಿ ರಾಜಕೀಯಕ್ಕೆ ಬರುತ್ತೇನೆ. ಅದಕ್ಕೂ ಮುನ್ನ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ ಜನರ ನಾಡಿಮಿಡಿತ ಅರಿಯಲು ಮತ್ತು ಅವರ ಸಮಸ್ಯೆಗಳನ್ನು ಅರಿಯಲು ನಿರ್ಧರಿಸಿದ್ದೇನೆ ಎಂದು ರಾಯುಡು ಅ ವರು ಆಗ ಸುದ್ದಿಗಾರರಿಗೆ ತಿಳಿಸಿದ್ದರು. ರಾಜಕಾರಣಕ್ಕೆ ಹೇಗೆ ಪ್ರವೇಶ ಪಡೆಯುವುದು ಮತ್ತು ಯಾವ ಪಕ್ಷವನ್ನು ನಾನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಕುರಿತು ಶೀಘ್ರವೇ ಕ್ರಿಯಾ ಯೋಜನೆಯೊಂದಿಗೆ ಬರಲಿದ್ದೇನೆ ಎಂದು ಅವರು ಹೇಳಿದ್ದಾರೆ. ಹಾಗೆಯೇ, ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ರಾಯುಡು ಅವರು ಹಾಲಿ ಸಿಎಂ ವೈಎಸ್ ಜಗನ್ ಅವರನ್ನು ಹೊಗಳಿದ್ದರು.

ಸಿಎಸ್‌ಕೆ ಪರ ಮಿಂಚಿದ್ದ ರಾಯುಡು

ಭಾರತೀಯ ರಾಷ್ಟ್ರೀಯ ಕ್ರಿಕೆಟ್‌ ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಗಳನ್ನು ಆಡಲು ಅಂಬಾಟಿ ರಾಯುಡು ಅವರಿಗೆ ಅವಕಾಶ ಸಿಗಲಿಲ್ಲ. ತಮಗೆ ಸಿಕ್ಕ ಸಿಮೀತ ಅವಧಿಯಲ್ಲೇ ಅವರು ಗಮನ ಸೆಳೆದಿದ್ದರು. 55 ಏಕದಿನ ಪಂದ್ಯಗಳನ್ನು ಆಡಿರುವ ರಾಯುಡು ಅವರು, 47.06ರ ಸರಾಸರಿಯಲ್ಲಿ 1694 ರನ್‌ಗಳನ್ನು ಕಲೆ ಹಾಕಿದ್ದಾರೆ. ಅದೇ ರೀತಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಪ್ರವೇಶಿಸಿದ್ದರು. ಧೋನಿ ನೇತೃತ್ವದ ಸಿಎಸ್‌ಕೆ ಐದು ಬಾರಿ ಚಾಂಪಿಯನ್ ಆಗಿದ್ದು, ಅಷ್ಟೂ ಬಾರಿ ಅವರು ಆ ತಂಡದ ಸದಸ್ಯರಾಗಿದ್ದರು ಮತ್ತು ಗೆಲುವಿಗೆ ತಮ್ಮದೇ ಆದ ಕಾಣಿಕೆಯನ್ನೂ ನೀಡಿದ್ದರು.

ಈ ಸುದ್ದಿಯನ್ನೂ ಓದಿ: Ambati Rayudu: ಮೂರೇ ಪಂದ್ಯಕ್ಕೆ ಕೆರಿಬಿಯನ್ ಲೀಗ್​ ತೊರೆದ ಅಂಬಾಟಿ ರಾಯುಡು

Exit mobile version