Exit Poll 2024: ಗುಜರಾತ್‌ನಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್, ಉತ್ತರ ಪ್ರದೇಶದಲ್ಲಿ ಮೇಲುಗೈ; ರಾಜ್ಯವಾರು ಎಕ್ಸಿಟ್ ಪೋಲ್ ವರದಿ ಇಲ್ಲಿದೆ
B Somashekhar
ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಮುಕ್ತಾಯಗೊಂಡಿದ್ದು, ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿವೆ. ಬಹುತೇಕ ಮತಗಟ್ಟೆ ಸಮೀಕ್ಷೆಗಳ (Exit Poll 2024) ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವೇ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿದುಬಂದಿದೆ. ಇನ್ನು, ಎಲ್ಲ ಪ್ರತಿಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟಕ್ಕೆ (India Bloc) ಹಿನ್ನಡೆಯಾಗಲಿದೆ ಎಂದೇ ಹೆಚ್ಚಿನ ಸಮೀಕ್ಷಾ ವರದಿಗಳು ತಿಳಿಸಿವೆ. ಇನ್ನು, ನರೇಂದ್ರ ಮೋದಿ (Narendra Modi) ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಹಾಗಾದರೆ, ರಾಜ್ಯವಾರು ಫಲಿತಾಂಶ ಏನಾಗಲಿದೆ? ಸಮೀಕ್ಷೆಗಳು ಹೇಳಿದ್ದೇನು? ಇಲ್ಲಿದೆ ಸಂಕ್ಷಿಪ್ತ ವರದಿ.
ಗುಜರಾತ್‌ನಲ್ಲಿ ಕ್ಲೀನ್ ಸ್ವೀಪ್
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿಯು ಎಲ್ಲ 26ಕ್ಕೆ 26 ಕ್ಷೇತ್ರಗಳನ್ನೂ ತನ್ನ ಮಡಿಲಿಗೆ ಸೆಳೆಯಲಿದೆ ಎಂದು ಬಹುತೇಕ ಸಮೀಕ್ಷೆಗಳು ತಿಳಿಸಿವೆ. ಟಿವಿ-ಸಿಎನ್‌ಎಕ್ಸ್ ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿಯು ಎಲ್ಲ ಕ್ಷೇತ್ರಗಳಲ್ಲಿ ಜಯಿಸಲಿದೆ. ಈಗಾಗಲೇ ಸೂರತ್‌ನಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 25 ಕ್ಷೇತ್ರಗಳಲ್ಲಿ ಕಮಲ ಅರಳಲಿದೆ. ಕಾಂಗ್ರೆಸ್, ಆಪ್ ಖಾತೆ ಕೂಡ ತೆರೆಯುವುದಿಲ್ಲ ಎಂದು ತಿಳಿಸಿದೆ.
ಉತ್ತರ ಪ್ರದೇಶದಲ್ಲಿ ಮೇಲುಗೈ
ರಾಮಮಂದಿರ ನಿರ್ಮಾಣ, ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಅವರ ಅಲೆಯಿಂದಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬುದಾಗಿ ಸಮೀಕ್ಷೆಗಳು ತಿಳಿಸಿವೆ. ರಿಪಬ್ಲಿಕ್ ಭಾರತ್ ವರದಿ ಪ್ರಕಾರ ಎನ್‌ಡಿಎ 69-74, ಇಂಡಿಯಾ ನ್ಯೂಸ್-ಡಿ ಡೈನಾಮಿಕ್ಸ್ ಪ್ರಕಾರ 69 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದೆ.