ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಮುಕ್ತಾಯದ ಹಂತಕ್ಕೆ ಬಂದಿದೆ. ಶನಿವಾರ (ಜೂನ್ 1) ಲೋಕಸಭೆ ಚುನಾವಣೆಯ ಕೊನೆಯ ಅಥವಾ 7ನೇ ಹಂತದ ಮತದಾನ ಮುಕ್ತಾಯವಾಗಲಿದ್ದು, ಇಂದು ಸಂಜೆಯೇ ಮತಗಟ್ಟೆ ಸಮೀಕ್ಷೆಗಳು ಹೊರಬೀಳಲಿವೆ. ಲೋಕಸಭೆ ಚುನಾವಣೆ ಫಲಿತಾಂಶ (Lok Sabha Election Results 2024) ಏನಾಗಬಹುದು, ಯಾವ ಪಕ್ಷಕ್ಕೆ ಹೆಚ್ಚು ಕ್ಷೇತ್ರ ಸಿಗಬಹುದು ಎಂಬುದಕ್ಕೆ ಮತಗಟ್ಟೆ ಸಮೀಕ್ಷೆಗಳು ದಿಕ್ಸೂಚಿಯಾಗಿರುವ ಕಾರಣ ಎಲ್ಲರ ಗಮನ ವರದಿಗಳ ಮೇಲಿದೆ. ಇನ್ನು ಇದುವರೆಗೆ ಫಲೋಡಿ ಸಟ್ಟಾ ಬಜಾರ್, ಮುಂಬೈ ಸಟ್ಟಾ ಬಜಾರ್, ಚುನಾವಣಾ ತಜ್ಞರಾದ ಪ್ರಶಾಂತ್ ಕಿಶೋರ್, ಯೋಗೇಂದ್ರ ಯಾದವ್ ಸೇರಿ ಹಲವು ಸಮೀಕ್ಷಾ ವರದಿಗಳು, ಅಭಿಪ್ರಾಯಗಳು ಏನಾಗಿದ್ದವು? ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಫಲೋಡಿ ಸಟ್ಟಾ ಬಜಾರ್ ವರದಿ ಇಲ್ಲಿದೆ
ಫಲೋಡಿ ಸಟ್ಟಾ ಬಜಾರ್ ಕೂಡ ಲೋಕಸಭೆ ಚುನಾವಣೆ ಕುರಿತು ಹಲವು ಸಮೀಕ್ಷೆ ವರದಿಗಳನ್ನು ನೀಡಿದೆ. ಬಿಜೆಪಿಯೊಂದೇ 304-306 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಎನ್‌ಡಿಎ ಮೈತ್ರಿಕೂಟವು ಸುಲಭವಾಗಿ 325-330 ಕ್ಷೇತ್ರಗಳಲ್ಲಿ ಜಯಿಸಲಿದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷವು 60-62 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂಬುದಾಗಿ ಸಮೀಕ್ಷಾ ವರದಿ ತಿಳಿಸಿದೆ. ಹಾಗಾಗಿ, ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವೇ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂಬುದು ವರದಿಯ ಸಾರಾಂಶವಾಗಿದೆ.
ರಾಮಮಂದಿರ ಕೇಂದ್ರ ಬಿಂದುವಾಗಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 63-65 ಕ್ಷೇತ್ರಗಳು ಲಭಿಸಲಿವೆ ಎಂಬುದಾಗಿ ಸಮೀಕ್ಷೆ ತಿಳಿಸಿದೆ. ಇನ್ನು, ಗುಜರಾತ್ 25, ಮಧ್ಯಪ್ರದೇಶ 28-29, ದೆಹಲಿ 5-6, ಪಂಜಾಬ್ 2-3, ಹಿಮಾಚಲ ಪ್ರದೇಶ 4, ಛತ್ತೀಸ್‌ಗಢ 10-11, ಉತ್ತರಾಖಂಡ 5, ಬಿಹಾರ 28-29, ತೆಲಂಗಾಣ 8-9, ಜಾರ್ಖಂಡ್ 10-11 ಸೀಟುಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿದೆ. ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಬಿಜೆಪಿಗೆ ಕಳೆದ ಬಾರಿಗಿಂತ ಹೆಚ್ಚಿನ ಕ್ಷೇತ್ರಗಳು ಬರಲಿವೆ. ಬಿಹಾರ, ಹರಿಯಾಣ, ಮಹಾರಾಷ್ಟ್ರ ಹಾಗೂ ರಾಜಸ್ಥಾನದಲ್ಲಿ ಬಿಜೆಪಿಯ ಸ್ಥಾನಗಳು ಕಡಿಮೆಯಾಗಲಿವೆ ಎಂದು ವರದಿ ತಿಳಿಸಿದೆ.
ಮುಂಬೈ ಸಟ್ಟಾ ಬಜಾರ್
ಮುಂಬೈ ಸಟ್ಟಾ ಬಜಾರ್ ವರದಿ ಪ್ರಕಾರ, ಚುನಾವಣೆಯಲ್ಲಿ ಬಿಜೆಪಿಯು 295-305 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಈ ಬಾರಿ 55-65 ಕ್ಷೇತ್ರಗಳಲ್ಲಿ ಮಾತ್ರ ಜಯಿಸಲಿದೆ. ಇನ್ನು, ರಾಮಮಂದಿರ ಕಾರಣದಿಂದ ಬಿಜೆಪಿಗೆ ಪ್ರಮುಖವಾಗಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 64-66 ಕ್ಷೇತ್ರಗಳು ಲಭಿಸಲಿವೆ ಎಂದು ವರದಿ ತಿಳಿಸಿದೆ. ಇದಕ್ಕೂ ಮೊದಲು ಮುಂಬೈ ಸಟ್ಟಾ ಬಜಾರ್ ಸಮೀಕ್ಷೆಯು ಬಿಜೆಪಿ 270-280 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದಿದ್ದರೆ, ಕಾಂಗ್ರೆಸ್ 70-80 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂದು ತಿಳಿಸಿತ್ತು.
ಪ್ರಶಾಂತ್ ಕಿಶೋರ್
ಚುನಾವಣೆ ತಜ್ಞ, ರಾಜಕೀಯ ಪರಿಣತರಾದ ಪ್ರಶಾಂತ್ ಕಿಶೋರ್ ಅವರು ಕೂಡ ದೇಶದಲ್ಲಿ ಮೋದಿ ಹ್ಯಾಟ್ರಿಕ್ ಗಳಿಸಲಿದ್ದಾರೆ ಎಂದು ಹೇಳಿದ್ದಾರೆ. “ದೇಶದಲ್ಲಿ ನರೇಂದ್ರ ಮೋದಿ ಅವರ ವರ್ಚಸ್ಸು ಕಡಿಮೆಯಾದರೂ ಜನಕ್ಕೆ ಅವರ ಮೇಲೆ ಸಿಟ್ಟಿಲ್ಲ. ಹಾಗಾಗಿ, ಬಿಜೆಪಿ 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ” ಎಂದು ತಿಳಿಸಿದ್ದಾರೆ. ಹಾಗೆಯೇ, ವಿರೋಧ ಪಕ್ಷಗಳ ಕಾರ್ಯ ವೈಖರಿಯನ್ನೂ ಅವರು ಟೀಕಿಸಿದ್ದಾರೆ. ಬಿಜೆಪಿ ವಿರುದ್ಧ ಪ್ರಯೋಗಿಸಬಹುದಾದ ಅನೇಕ ಅಸ್ತ್ರಗಳನ್ನು, ಅವಕಾಶಗಳನ್ನು ʼಇಂಡಿಯಾʼ ಮೈತ್ರಿಕೂಟ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.
ಯೋಗೇಂದ್ರ ಯಾದವ್
ಬಿಜೆಪಿಯು ಮತ್ತೊಂದು ಸಾರ್ವತ್ರಿಕ ಚುನಾವಣೆಯ ವಿಜಯವನ್ನು ಪಡೆಯುತ್ತದೆ ಎಂದು ಚುನಾವಣಾ ರಣತಂತ್ರಗಾರ ಯೋಗೇಂದ್ರ ಯಾದವ್ ಅವರು ಭವಿಷ್ಯ ನುಡಿದಿದ್ದಾರೆ. ಭಾರತೀಯ ಜನತಾ ಪಕ್ಷದ ಪರವಾಗಿ ತಮ್ಮ ಭವಿಷ್ಯವಾಣಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಯಾದವ್ ಅಚ್ಚರಿ ಮೂಡಿಸಿದ್ದಾರೆ. ಯಾದವ್ ಪ್ರಕಾರ ಬಿಜೆಪಿ 240-260 ಸ್ಥಾನಗಳನ್ನು ಮತ್ತು ಅದರ ಮಿತ್ರಪಕ್ಷಗಳು 34-45 ಸ್ಥಾನಗಳನ್ನು ಗೆಲ್ಲಬಹುದು. ಅಂದರೆ ಎನ್‌ಡಿಎ (NDA) ಒಟ್ಟು 275 ಮತ್ತು 305 ಸ್ಥಾನಗಳ ನಡುವೆ ಸುಳಿದಾಡಬಹುದು.
ಅಮೆರಿಕ ರಾಜಕೀಯ ತಜ್ಞ ಇಯಾನ್ ಬ್ರೆಮ್ಮರ್
ಬಿಜೆಪಿ 295ರಿಂದ 315 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಮೆರಿಕದ ರಾಜಕೀಯ ತಜ್ಞ ಇಯಾನ್ ಬ್ರೆಮ್ಮರ್ ತಿಳಿಸಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 303 ಲೋಕಸಭಾ ಸ್ಥಾನಗಳನ್ನು ಗೆದ್ದು, ಹಿಂದಿ ಹೃದಯ ರಾಜ್ಯಗಳಲ್ಲಿ ʼಮೋದಿ ಅಲೆ’ಯ ಮೇಲೆ ಸವಾರಿ ಮಾಡಿತ್ತು. 370 ಸೀಟುಗಳನ್ನು ಗೆಲ್ಲಬೇಕಾದರೆ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಪಕ್ಷಕ್ಕೆ ಭರ್ಜರಿ ಜಯಗಳಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: Modi Meditation: ಕನ್ಯಾಕುಮಾರಿಯಲ್ಲಿ ಧ್ಯಾನಾಸಕ್ತ ಪ್ರಧಾನಿ ಮೋದಿಯಿಂದ ಸೂರ್ಯ ವಂದನೆ; ವಿಡಿಯೊ ನೋಡಿ