Site icon Vistara News

Poll Of Polls: ಎನ್‌ಡಿಎಗೆ 350+ ಸೀಟು, ದಕ್ಷಿಣದಲ್ಲೂ ಬಿಜೆಪಿಗೆ ಸ್ವೀಟು, ಇಂಡಿಯಾ ‌ಕೂಟಕ್ಕೆ ಹಿನ್ನಡೆಯ ಏಟು!

Poll Of Polls

Exit Poll 2024: With 350+ seats, poll of polls predicts majority for BJP-led NDA, INDIA bloc to get less than 200 seats

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಮುಗಿದ ಕೆಲವೇ ನಿಮಿಷಗಳಲ್ಲಿ ಮತಗಟ್ಟೆ ಸಮೀಕ್ಷೆ ಪ್ರಕಟವಾಗಿದೆ. ಬಹುತೇಕ ಸಮೀಕ್ಷೆಗಳ ವರದಿಗಳು ಎನ್‌ಡಿಎ ಮೈತ್ರಿಕೂಟವೇ ಗದ್ದುಗೆ ಹಿಡಿಯಲಿವೆ ಎಂದು ತಿಳಿಸಿವೆ. ಇನ್ನು, ಬಿಜೆಪಿಯನ್ನು ಶತಾಯಗತಾಯ ಸೋಲಿಸಲೇಬೇಕು ಎಂಬ ಕಾರಣದಿಂದ ಪ್ರತಿಪಕ್ಷಗಳು ಒಗ್ಗೂಡಿ ಇಂಡಿಯಾ ಒಕ್ಕೂಟ ರಚಿಸಿದರೂ, ಫಲ ಸಿಗುವುದಿಲ್ಲ ಎಂಬುದು ಮತಗಟ್ಟೆ ಸಮೀಕ್ಷೆಗಳ ವರದಿಗಳು ಇನ್ನು ತಿಳಿಸಿವೆ. ಇನ್ನು ಎಲ್ಲ ವರದಿಗಳನ್ನು ವಿಶ್ಲೇಷಿಸಿ, ಸರಾಸರಿ ಕ್ಷೇತ್ರಗಳನ್ನಾಗಿ ವಿಂಗಡಿಸಿದಾಗ (Poll Of Polls) ಎನ್‌ಡಿಎ ಮೈತ್ರಿಕೂಟವು 350ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ನಿಶ್ಚಿತ ಎಂಬಂತಾಗಿದೆ.

ಎಲ್ಲ ಸಮೀಕ್ಷಾ ವರದಿಗಳನ್ನು ವಿಶ್ಲೇಷಿಸಿದಾಗ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಒಟ್ಟು 543 ಕ್ಷೇತ್ರಗಳ ಪೈಕಿ 355-380 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ 2019ರ ಲೋಕಸಭೆ ಚುನಾವಣೆ ಫಲಿತಾಂಶವೇ ಮರುಕಳಿಸಲಿದೆ ಎಂದು ಹೇಳಲಾಗುತ್ತಿದೆ. 2019ರಲ್ಲಿ ಎನ್‌ಡಿಎ ಮೈತ್ರಿಕೂಟವು 353 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿಯೊಂದೇ 303 ಕ್ಷೇತ್ರಗಳಲ್ಲಿ ಜಯ ಕಂಡಿತ್ತು.

200 ಸಮೀಪವೂ ಬಾರದ ಇಂಡಿಯಾ ಒಕ್ಕೂಟ

ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟವು ಪ್ರಸಕ್ತ ಸಾರ್ವತ್ರಿಕ ಚುನಾವಣೆಯಲ್ಲಿ 125-165 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬುದು ಮತಗಟ್ಟೆ ಸಮೀಕ್ಷೆಗಳ ಒಟ್ಟು ಸಾರವಾಗಿದೆ. ಇದರೊಂದಿಗೆ ಇಂಡಿಯಾ ಒಕ್ಕೂಟವು ಮ್ಯಾಜಿಕ್‌ ನಂಬರ್‌ (272) ಬಿಡಿ, 200 ಕ್ಷೇತ್ರಗಳನ್ನೂ ತಲುಪುವುದಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ. ಇದರೊಂದಿಗೆ ಕಾಂಗ್ರೆಸ್‌ ಸೇರಿ ಪ್ರತಿಪಕ್ಷಗಳಿಗೆ ಸತತ ಮೂರನೇ ಬಾರಿಯೂ ಹಿನ್ನಡೆಯಾಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

NDTV ಪೋಲ್‌ ಆಫ್‌ ಪೋಲ್ಸ್

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಲಾಭ

ದಕ್ಷಿಣ ಭಾರತದಲ್ಲಿ, ಅದರಲ್ಲೂ ಕೇರಳ ಹಾಗೂ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಬಹುತೇಕ ಸಮೀಕ್ಷೆಗಳು ತಮಿಳುನಾಡಿನಲ್ಲಿ ಬಿಜೆಪಿ 1-3 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಅಂದಾಜಿಸಿವೆ. ಕಾಂಗ್ರೆಸ್ 8-11, ಬಿಜೆಪಿ 36-39 ಮತ್ತು ಇತರರು 0-2 ಸ್ಥಾನಗಳನ್ನು ಪಡೆಯಲಿವೆ. ಬಹು ಕಟ್ಟರ್ ಪ್ರಾಂತೀಯವಾದಿ ಮತದಾರರು ಇರುವ ತಮಿಳುನಾಡಿನಲ್ಲಿ ಖಾತೆ ತೆರೆಯುವುದು ಬಿಜೆಪಿಗೆ ಸುಲಭ ಮಾತಲ್ಲ. ಹೀಗಾಗಿ ಈ ಸಲ ಗೆದ್ದರೆ ಅದೊಂದು ಐತಿಹಾಸಿಕ ಸಾಧನೆಯಾಗಲಿದೆ.

ಎನ್​ಡಿಎ ಕೇರಳದಲ್ಲಿ ಒಂದರಿಂದ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಖಾತೆಯನ್ನು ತೆರೆಯಲು ಸಜ್ಜಾಗಿದೆ ಎಂಬುದಾಗಿ ಸಮೀಕ್ಷೆಗಳು ಅಂದಾಜಿಸಿವೆ. ಕೇರಳದ 20 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆದಿದ್ದು, 2019ರಲ್ಲಿ ಶೇ.77.84ರಷ್ಟಿದ್ದ ಮತದಾನ ಪ್ರಮಾಣ ಈ ಬಾರಿ ಶೇ.70.35ಕ್ಕೆ ಕುಸಿದಿತ್ತು.

ಇದನ್ನೂ ಓದಿ: Exit Poll 2024 : ತಮಿಳುನಾಡು, ಕೇರಳದಲ್ಲೂ ಅರಳಲಿದೆ ಕಮಲ; ಮೋದಿಗಿದು ಐತಿಹಾಸಿಕ ಸಾಧನೆ

Exit mobile version