ಬೆಂಗಳೂರು: ಉತ್ತರ ಭಾರತದ ಹಿಂದಿ ಬೆಲ್ಟ್‌ನ ಪ್ರಮುಖ ರಾಜ್ಯವಾಗಿರುವ ಛತ್ತೀಸ್‌ಗಢ ರಾಜ್ಯದಲ್ಲಿ (Chhattisgarh Assembly Election) ಕಾಂಗ್ರೆಸ್ ಪಕ್ಷವು (Congress Party) ಅಧಿಕಾರ ಉಳಿಸಿಕೊಂಡರೆ, ಭಾರತೀಯ ಜನತಾ ಪಾರ್ಟಿಗೆ (BJP Party) ನಿರಾಸೆಗೆ ಕಾದಿದೆ ಎಂಬುದು ಚುನಾವಣೋತ್ತರ ಸಮೀಕ್ಷೆಗಳ ಒಟ್ಟಾರೆ ಸಾರಾಂಶ. ಬಹುತೇಕ ಎಕ್ಸಿಟ್ ಪೋಲ್‌ಗಳು ಭಾರತೀಯ ಜನತಾ ಪಾರ್ಟಿಗಿಂತ ಆಡಳಿತಾರೂಢ ಕಾಂಗ್ರೆಸ್ ಮುಂದಿದೆ ಎಂಬುದನ್ನು ಸೂಚಿಸಿವೆ(Exit Polls Result 2023).
ಛತ್ತೀಸ್‌ಗಢ ವಿಧಾನಸಭೆಯ ಎಲ್ಲಾ 90 ಸದಸ್ಯರನ್ನು ಆಯ್ಕೆ ಮಾಡಲು ನವೆಂಬರ್ 7 ಮತ್ತು ನವೆಂಬರ್ 17 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ. ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ 48 ಸ್ಥಾನಗಳನ್ನು ಹೊಂದಿದ್ದರೆ, ಬಿಜೆಪಿ 15 ಸ್ಥಾನಗಳನ್ನು ಹೊಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಉತ್ತಮ ಅಂತರದಿಂದ ಸೋಲಿಸಿ 3 ಚುನಾವಣೆಗಳ ನಂತರ ಅಧಿಕಾರಕ್ಕೆ ಬಂದಿತು.
ಈಗಿನ ಎಕ್ಸಿಟ್ ಪೋಲ್‌ಗಳ ಪ್ರಕಾರ, ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲಿದೆ. ಕಾಂಗ್ರೆಸ್ ಪಕ್ಷದ ನಾಯಕ, ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಚುನಾವಣೆಯ ನೇತೃತ್ವವನ್ನು ವಹಿಸಿಕೊಂಡಿದ್ದರು. ಛತ್ತೀಸ್‌ಗಢದಲ್ಲೂ ಉಚಿತ ಕೊಡುಗೆಗಳು ಪರಿಣಾಮ ಬೀರಿರುವ ಸಾಧ್ಯತೆಗಳಿವೆ.
2023 ರ ವಿಧಾನಸಭಾ ಚುನಾವಣೆಯಲ್ಲಿ, 18,833 ಮತಗಟ್ಟೆಗಳಲ್ಲಿ 81,41,624 ಪುರುಷರು, 81,72,171 ಮಹಿಳೆಯರು ಮತ್ತು 684 ತೃತೀಯ ಲಿಂಗಿಗಳು ಸೇರಿದಂತೆ 1,63,14,479 ಮತದಾರರು ಮತ ಚಲಾಯಿಸಿದದರು. ಕಾಂಗ್ರೆಸ್ ನ ಪ್ರಮುಖ ಅಭ್ಯರ್ಥಿಗಳಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಉಪಮುಖ್ಯಮಂತ್ರಿ ಟಿ.ಎಸ್.ಸಿಂಗ್ ದೇವ್ ಮತ್ತು ವಿಧಾನಸಭಾ ಸ್ಪೀಕರ್ ಚರಣ್ ದಾಸ್ ಮಹಂತ್ ಸೇರಿದ್ದಾರೆ.
ಎಕ್ಸಿಟ್ ಪೋಲ್‌ಗಳು ಹೇಳೋದೇನು?
ಎಬಿಪಿ ನ್ಯೂಸ್-ಸಿ ವೋಟರ್: ಬಿಜೆಪಿ 36-48, ಕಾಂಗ್ರೆಸ್ 41-53, ಬಿಎಸ್ಪಿ 0, ಇತರ 0-4
ದೈನಿಕ್ ಭಾಸ್ಕರ್: ಬಿಜೆಪಿ 35-45, ಕಾಂಗ್ರೆಸ್ 46-55, ಬಿಎಸ್ಪಿ 0, ಇತರ 0-10
ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ: ಬಿಜೆಪಿ 36-46,ಕಾಂಗ್ರೆಸ್ 40-50, ಬಿಎಸ್ಪಿ 0,ಇತರ 1-5
ಇಂಡಿಯಾ ಟಿವಿ- ಸಿಎನ್ಎಕ್ಸ್: ಬಿಜೆಪಿ 30-40,ಕಾಂಗ್ರೆಸ್ 46-56,ಬಿಎಸ್ಪಿ 0,ಇತರ 3-5
ಜನ್ ಕಿ ಬಾತ್: ಬಿಜೆಪಿ 34-45,ಕಾಂಗ್ರೆಸ್ 42-53,ಬಿಎಸ್ಪಿ 0,ಇತರ 3
ನ್ಯೂಸ್ 24-ಟುಡೇಸ್ ಚಾಣಕ್ಯ: ಬಿಜೆಪಿ 33.ಕಾಂಗ್ರೆಸ್ 57, ಬಿಎಸ್ಪಿ 0,ಇತರ 0
ರಿಪಬ್ಲಿಕ್ ಟಿವಿ- ಮ್ಯಾಟ್ರಿಜ್: ಬಿಜೆಪಿ 34-42, ಕಾಂಗ್ರೆಸ್ 44-52,ಬಿಎಸ್ಪಿ 0,ಇತರ 00-02
ಟೈಮ್ಸ್ ನೌ-ಇಟಿಜಿ: ಬಿಜೆಪಿ 32-40, ಕಾಂಗ್ರೆಸ್ 48-56,ಬಿಎಸ್ಪಿ 0,ಇತರ 2-4
ಟಿವಿ 9 ಭಾರತ್ ವರ್ಷ್ – ಪೋಲ್ಸ್ಟ್ರಾಟ್: ಬಿಜೆಪಿ 35-45,ಕಾಂಗ್ರೆಸ್ 40-50,ಬಿಎಸ್ಪಿ 0,ಇತರ 0-3
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ, ಕನಿಷ್ಠ 31% ಮತದಾರರು ಕಾಂಗ್ರೆಸ್ನ ಭೂಪೇಶ್ ಬಘೇಲ್ ಅವರನ್ನು ಆಯ್ಕೆ ಮಾಡಿದರೆ, 21% ಬಿಜೆಪಿಯ ರಮಣ್ ಸಿಂಗ್ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದಾರೆ.
ರಾಜಸ್ಥಾನದಲ್ಲಿ ಹಿಸ್ಟರಿ ರಿಪೀಟ್! ಬಿಜೆಪಿಗೆ ಅಧಿಕಾರ, ಕಾಂಗ್ರೆಸ್‌ಗೆ ತಿರಸ್ಕಾರ!
200 ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ (Rajasthan Exit Poll) ಅಧಿಕಾರಕ್ಕೆ ಏರಲು 100 ಕ್ಷೇತ್ರಗಳನ್ನು ಗೆಲ್ಲಬೇಕು. ರಾಜಸ್ಥಾನದ ವಿಷಯದಲ್ಲಿ ರಾಜಕಾರಣ ಬೇರೆಯದ್ದೇ ರೀತಿಯಲ್ಲಿ ನಡೆಯುತ್ತಿದೆ. ಇಲ್ಲಿ ಒಂದು ಅವಧಿಗೆ ಆಯ್ಕೆಯಾದವರು ಮತ್ತೊಂದು ಅವಧಿಗೆ ಆಯ್ಕೆಯಾಗುವುದಿಲ್ಲ. ಹಾಗಾಗಿ, ಈಗ ಪ್ರಕಟವಾಗಿರುವ ಎಕ್ಸಿಟ್ ಪೋಲ್‌ಗಳು ಕೂಡ ಇದೇ ಟ್ರೆಂಡ್ ಊಹಿಸಿವೆ. ಕಾಂಗ್ರೆಸ್ ಪಕ್ಷಕ್ಕೆ (Congress Party) ಅಧಿಕಾರ ನಷ್ಟವಾಗಲಿದ್ದು, ಭಾರತೀಯ ಜನತಾ ಪಾರ್ಟಿ ಲಾಭವಾಗಲಿದೆ(BJP Party). ಬಹುತೇಕ ಎಕ್ಸಿಟ್ ಪೋಲ್‌ಗಳು ಇದೇ ಟ್ರೆಂಡ್ ಅನ್ನು ಗಮನಿಸಿವೆ(Exit Polls Result 2023).
ಬಹುತೇಕ ಚುನಾವಣೋತ್ಸ ಸಮೀಕ್ಷೆಗಳು ಭಾರತೀಯ ಜನತಾ ಪಾರ್ಟಿಗೆ ಅಧಿಕಾರವನ್ನು ನೀಡಿವೆ. ಆಡಳಿತಾರೂಢ ಕಾಂಗ್ರೆಸ್ ಅಧಿಕಾರ ವಂಚಿತವಾಗಲಿದೆ. ಇಟಿಜಿ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್: 56-72; ಬಿಜೆಪಿ: 108-128; ಇತರರು: 13-21 ಸ್ಥಾನಗಳನ್ನು ಗೆಲ್ಲಲಿದ್ದರೆ, ಪಿಎಂಎಆರ್ಕ್ಯೂ ಪ್ರಕಾರ, ಕಾಂಗ್ರೆಸ್: 69-81 ಬಿಜೆಪಿ: 105-125; ಇತರರು: 5-15 ಹಾಗೂ ಟಿವಿ 9 ಭಾರತ್ ವರ್ಷ್ -ಪೋಲ್ಸ್ಟ್ರಾಟ್ ಸಮೀಕ್ಷೆಯು ಬಿಜೆಪಿ 100-110 ಕಾಂಗ್ರೆಸ್ +: 90-110; ಇತರರು: 05-15 ಸ್ಥಾನಗಳನ್ನು ಗೆಲ್ಲಲಿದ್ದಾರೆಂದು ಹೇಳಿದೆ.
ಅದೇ ರೀತಿ ಜನ್ ಕಿ ಬಾತ್ ಸಮೀಕ್ಷೆಯು ಬಿಜೆಪಿ: 100-122 ಕಾಂಗ್ರೆಸ್: 62-85 ಇತರರು: 14-15 , ಸಿಎನ್ಎನ್ 18 ಸಮೀಕ್ಷೆಯು, ಬಿಜೆಪಿ: 111, ಕಾಂಗ್ರೆಸ್: 74 ,ಇತರೆ: 14 ಹಾಗೂ ಸಟ್ಟಾ ಬಜಾರ್ ಬಿಜೆಪಿ- 115, ಕಾಂಗ್ರೆಸ್- 68 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಹೇಳಿದೆ.
ಬಹುತೇಕ ಸಮೀಕ್ಷೆಗಳ ಪ್ರಕಾರ ಈ ಬಾರಿ ಮತ್ತೆ ಭಾರತೀಯ ಜನತಾ ಪಾರ್ಟಿ ಅಧಿಕಾರ ಪಡೆಯುವುದು ಖಚಿತ. ಆಡಳಿತಾರೂಢ ಕಾಂಗ್ರೆಸ್ ಸೋಲಲಿದೆ. ಹಾಲಿ ಸಿಎಂ ಅಶೋಕ್ ಗೆಹ್ಲೋಟ್ ಅವರು ಮರಳಿ ಅಧಿಕಾರ ಪಡೆಯುವುದಕ್ಕಾಗಿ ಸಾಕಷ್ಟು ಕೊಡುಗೆಗಳನ್ನು ಘೋಷಣೆ ಮಾಡಿದ್ದಾರೆ. ಉಚಿತ ಕೊಡುಗೆಗಳು ಜನರನ್ನು ಸೆಳೆದಿದ್ದರೂ, ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರ ವಿರುದ್ಧದ ಆಡಳಿತ ವಿರೋಧಿ ಅಲೆ ಕೆಲಸ ಮಾಡಿರುವುದನ್ನು ಸಮೀಕ್ಷೆಗಳು ಗಮನಿಸಿವೆ. ಹಾಗಾಗಿ, ಗೆಹ್ಲೋಟ್ ಅವರ ಬಗ್ಗೆ ಒಳ್ಳೆಯ ಭಾವನೆ ಇದ್ದರೂ, ಅದನ್ನು ಬಹುಮತವಾಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಸಮೀಕ್ಷೆಗಳಲ್ಲಿ ಗಮನಿಸಬಹುದು.
199 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 5,25,38,105 ಮತದಾರರಲ್ಲಿ 1,88,27,294 ಮಹಿಳೆಯರು, 2,03,83,757 ಪುರುಷರು ಮತ್ತು 348 ತೃತೀಯ ಲಿಂಗಿ ಮತದಾರರು ಸೇರಿದಂತೆ 3,92,11,399 ಮತದಾರರು ಮತ ಚಲಾಯಿಸಿದ್ದಾರೆ. ಶಿಕ್ಷಣ, ಮಹಿಳಾ ಸುರಕ್ಷತೆ ರಾಜಸ್ಥಾನ ಚುನಾವಣೆಯ ಪ್ರಮುಖ ಕಾರ್ಯಸೂಚಿಗಳಾಗಿದ್ದವು.
‘ಕೈ’ನತ್ತ ವಾಲುತ್ತಿದ್ದ ಮತದಾರರನ್ನು ಸೆಳೆದ ಬಿಜೆಪಿ! ಎಕ್ಸಿಟ್ ಪೋಲ್ ಹೇಳೋದೇನು?
230 ಕ್ಷೇತ್ರಗಳನ್ನು ಹೊಂದಿರುವ ಮಧ್ಯ ಪ್ರದೇಶದಲ್ಲಿ (Madhya Pradesh Election) ಅಧಿಕಾರಕ್ಕೇರಲು 116 ಸ್ಥಾನ ಗೆಲ್ಲಬೇಕು. ಆದರೆ, ಈಗ ಪ್ರಕಟವಾಗಿರುವ ಮತಗಟ್ಟೆ ಸಮೀಕ್ಷೆಗಳ ಪ್ರಕಾರ(Exit Polls Result 2023) ಫೋಟೋ ಫಿನಿಷ್ (Photo Finish) ಆಗುವ ಸಾಧ್ಯತೆಗಳಿವೆ. ಚುನಾವಣೆ ಘೋಷಣೆ ಮುನ್ನ ಕಾಂಗ್ರೆಸ್ (Congress Party) ಎಲ್ಲ ರೀತಿಯಿಂದಲೂ ಮುಂದಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಭಾರತೀ ಜನತಾ ಪಾರ್ಟಿ (BJP Party) ಪ್ರಕಟಿಸಿದ ಕೆಲವು ಯೋಜನೆಗಳು ಆಚೆ ಹೋಗುತ್ತಿದ್ದ ಮತದಾರರನ್ನು ಸೆಳೆಯಲು ಯಶಸ್ವಿಯಾಗಿದೆ ಎಂಬುದು ವೇದ್ಯವಾಗುತ್ತಿದೆ(MP Exit Poll).
ದೈನಿಕ್ ಭಾಸ್ಕರ್ ಎಕ್ಸಿಕ್ಟ ಪೋಲ್ ಪ್ರಕಾರ, ಬಿಜೆಪಿ 95ರಿಂದ 115 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್‌ಗೆ 105ರಿಂದ 120 ದೊರೆಯಲಿವೆ. ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ 102ರಿಂದ 125 ಮತ್ತು ಬಿಜೆಪಿ100ರಿಂದ 123 ಹಾಗೂ ರಿಪಬ್ಲಿಕ್ ಟಿವಿಯ ಪ್ರಕಾರ, ಕಾಂಗ್ರೆಸ್ 97ರಿಂದ 107 ಮತ್ತು ಬಿಜೆಪಿ 118ರಿಂದ 130 ಸ್ಥಾನಗಳನ್ನು ಗೆಲ್ಲಲಿದೆ. ಟಿವಿ9 ಭರತವರ್ಷದ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ 106ರಿಂದ 116 ಮತ್ತು ಕಾಂಗ್ರೆಸ್ 111ರಿಂದ 117ಕ್ಷೇತ್ರಗಳನ್ನು ಗೆಲ್ಲಲಿದೆ.
ಈವರೆಗೆ ಪ್ರಕಟವಾಗಿರುವ ಎಕ್ಸಿಟ್ ಪೋಲ್ಸ್, ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯೆ ತುರುಸಿನ ಸ್ಪರ್ಧೆಯನ್ನು ನಿರೀಕ್ಷಿಸಿವೆ. 15 ವರ್ಷಕ್ಕೂ ಹೆಚ್ಚು ಅವಧಿಗೆ ಅಧಿಕಾರದಲ್ಲಿರುವ ಭಾರತೀಯ ಜನತಾ ಪಾರ್ಟಿಗೆ ಈ ಬಾರಿ ಆಡಳಿತ ವಿರೋಧಿ ಅಲೆ ತಟ್ಟಿರುವ ಸಂಗತಿ ವ್ಯಕ್ತವಾಗಿದೆ. ಹಾಗಂತ, ಬಿಜೆಪಿಯ ವಿರುದ್ಧ ಮತದಾರರು ಸಂಪೂರ್ಣ ತಿರಾಸ್ಕಾರವನ್ನು ತೋರಿಲ್ಲ ಎಂಬುದು ಗೊತ್ತಾಗುತ್ತದೆ. ಮತದಾರರು ಗೊಂದಲದಲ್ಲಿರುವುದು ಪಕ್ಕಾ ಆಗಿದೆ. ಹಾಗಾಗಿ, ಭಾನುವಾರ ಫಲಿತಾಂಶದ ದಿನ ಒಂಚೂರು ಅಚ್ಚರಿಯನ್ನು ನಿರೀಕ್ಷಿಸಬಹುದಾಗಿದೆ.
ಮಧ್ಯ ಪ್ರದೇಶದಲ್ಲಿ ದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಈ ಬಾರಿ ತುಸು ಹಿನ್ನಡೆಗೆ ಸರಿಸಿದ್ದು, ಕೂಡ ಪ್ರಭಾವ ಬೀರಿರುವ ಸಾಧ್ಯತೆ ಇದೆ. ಚುನಾವಣೆ ನಡೆಯುವ ಆರು ತಿಂಗಳ ಮುಂಚೆ ಮತದಾರರು ಸಂಪೂರ್ಣ ಒಲವು ಕಾಂಗ್ರೆಸ್ ಪರವಾಗಿತ್ತು ಎನ್ನಲಾಗಿದೆ. ಕೊನೆ ಗಳಿಗೆಯಲ್ಲಿ ಎಂಪಿ ಸಿಎಂ ಪ್ರಕಟಿಸಿದ ಉಚಿತ ಕೊಡುಗೆಗಳು ಮತದಾರರನ್ನು ಬಿಜೆಪಿಯತ್ತ ಎಳೆದು ತಂದಿರುವ ಸಾಧ್ಯತೆ ಇದೆ. ಅದರಲ್ಲೂ ಮಹಿಳಾ ಮತದಾರರನ್ನು ಸೆಳೆಯಲು ಕಾರಣವಾಗಿದ್ದೇ, ಫೋಟೋ ಫಿನಿಶ್ ಫಲಿತಾಂಶಕ್ಕೆ ಕಾರಣವಾಗಬಹುದು.
ಈ ಸುದ್ದಿಯನ್ನೂ ಓದಿ: Exit Polls Result 2023: ಬಿಜೆಪಿಗೆ ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣದಲ್ಲಿ ಕೈ ಮೇಲುಗೈ; ಎಂಪಿಯಲ್ಲಿ ಟೈಟ್ ಫೈಟ್