ನವ ದೆಹಲಿ: ಸುಪ್ರೀಂಕೋರ್ಟ್ ೫೦ ದಿನಗಳ ಬೇಸಿಗೆಯ ರಜೆಯ ಬಳಿಕ ಪೂರ್ಣ ಪ್ರಮಾಣದಲ್ಲಿ ಕಲಾಪಗಳನ್ನು ಸೋಮವಾರ ಪುನರಾರಂಭಿಸುತ್ತಿದೆ. ಉದ್ಯಮಿ ವಿಜಯ್ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಕೇಸ್ ಒಂದರಲ್ಲಿ ಶಿಕ್ಷೆಯನ್ನು ಇಂದು ಪ್ರಕಟಿಸುವ ನಿರೀಕ್ಷೆ ಇದೆ. ಮಾತ್ರವಲ್ಲದೆ ಈ ವಾರ ಹಲವು ಹೈ ಪ್ರೊಫೈಲ್ ಕೇಸ್‌ಗಳ ತೀರ್ಪುಗಳು ಪ್ರಕಟವಾಗುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಘಟನೆಗಳಿಗೆ ಸಂಬಂಧಿಸಿದ ತೀರ್ಪುಗಳೂ ಪ್ರಕಟವಾಗಲಿದೆ.
ಮಲ್ಯ ವಿರುದ್ಧದ ಕೇಸ್ ಏನು?
ಕಿಂಗ್‌ಫಿಶರ್ ಏರ್‌ಲೈನ್ಸ್‌ನ ೯,೦೦೦ ಕೋಟಿ ರೂ. ಸುಸ್ತಿ ಸಾಲದ ಮರು ವಸೂಲು ಪ್ರಕರಣದಲ್ಲಿ ವಿಜಯ್ ಮಲ್ಯ ಪ್ರಮುಖ ಆರೋಪಿ. ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಮಲ್ಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ. ಈ ಕೇಸ್‌ನಲ್ಲಿ ಮಲ್ಯ ನ್ಯಾಯಾಂಗ ನಿಂದನೆಯನ್ನೂ ಎದುರಿಸುತ್ತಿದ್ದಾರೆ.
೨೦೧೬ರಲ್ಲಿ ಬ್ರಿಟನ್ ಮೂಲದ ಸ್ಪಿರಿಟ್ ತಯಾರಕ ಡಿಯಾಜಿಯೊ ಜತೆಗಿನ ವ್ಯವಹಾರದಲ್ಲಿ ೪೦ ದಶಲಕ್ಷ ಡಾಲರ್ ಹಣದ (೩೧೨ ಕೋಟಿ ರೂ.) ಲೆಕ್ಕವನ್ನು ಕೋರ್ಟ್‌ಗೆ ಒಪ್ಪಿಸುವಲ್ಲಿ ಮಲ್ಯ ವಿಫಲರಾಗಿದ್ದರು. ಮಲ್ಯ ಈ ಹಣವನ್ನು ಮಕ್ಕಳ ಹೆಸರಿಗೆ ಅಕ್ರಮವಾಗಿ ವರ್ಗಾಯಿಸಿದ ಆರೋಪ ಎದುರಿಸುತ್ತಿದ್ದಾರೆ. ಇದು ನ್ಯಾಯಾಂಗ ನಿಂದನೆ ಕೇಸ್ ಕೂಡ ಆಗಿದ್ದು, ಸುಪ್ರೀಂಕೋರ್ಟ್ ಮಲ್ಯಗೆ ಇಂದು ಶಿಕ್ಷೆ ನೀಡುವ ಸಾಧ್ಯತೆ ಇದೆ.
ವರವರ ರಾವ್ ಜಾಮೀನು ಪ್ರಕರಣ
ತೆಲುಗು ಕವಿ ಹಾಗೂ ಭೀಮಾ ಕೋರೆಗಾಂವ್-ಏಲ್ಗಾರ್ ಪರಿಷದ್ ಕೇಸ್‌ನಲ್ಲಿ ಆರೋಪಿಯಾಗಿರುವ ಪಿ.ವರವರ ರಾವ್ ಅವರು ವೈದ್ಯಕೀಯ ಕಾರಣಕ್ಕಾಗಿ ಕಾಯಂ ಆಗಿ ಜಾಮೀನು ಕೋರಿದ್ದರು. ಆದರೆ ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಕೋರ್ಟ್ ತನ್ನ ಆದೇಶ ಹೊರಡಿಸುವ ನಿರೀಕ್ಷೆ ಇದೆ.
ಅಬು ಸಲೇಂ ಅರ್ಜಿ ಕುರಿತ ತೀರ್ಪು
೧೯೯೪ರ ಮುಂಬಯಿ ಸರಣಿ ಬಾಂಬ್ ಸ್ಫೋಟದ ಆರೋಪಿಯಾಗಿರುವ ಅಬುಸಲೇಂ, ತನಗೆ ೨೫ ವರ್ಷಕ್ಕಿಂತ ಹೆಚ್ಚು ಜೈಲು ವಾಸದ ಶಿಕ್ಷೆ ಕೊಡಬಾರದು ಎಂದು ಸಲ್ಲಿಸಿರುವ ಅರ್ಜಿಯ ಬಗ್ಗೆ ಸುಪ್ರೀಂಕೋರ್ಟ್ ಇಂದು ತೀರ್ಪು ನೀಡುವ ನಿರೀಕ್ಷೆ ಇದೆ. ತನ್ನನ್ನು ಪೋರ್ಚುಗಲ್ ಸರ್ಕಾರ ಭಾರತಕ್ಕೆ ಗಡಿಪಾರು ಮಾಡಿದೆ. ಈ ಗಡಿಪಾರು ಒಪ್ಪಂದದ ಪ್ರಕಾರ ೨೫ ವರ್ಷಕ್ಕಿಂತ ಹೆಚ್ಚು ಕಾಲದ ಸೆರೆವಾಸ ಶಿಕ್ಷೆ ಕೊಡುವಂತಿಲ್ಲ ಎಂದು ಅಬುಸಲೇಂ ಪರ ವಕೀಲರು ವಾದಿಸಿದ್ದರು. ಈ ಅರ್ಜಿ ಕುರಿತ ತೀರ್ಪು ಪ್ರಕಟವಾಗುವ ನಿರೀಕ್ಷೆ ಇದೆ.