ಪಟನಾ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿರುವ ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಶುಕ್ರವಾರ ಸಂಜೆ ಸ್ಫೋಟ ಉಂಟಾಗಿ 7 ಮಂದಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೋತಿಹಾರಿಯ ರಾಮಗರ್ವಾ ಪ್ರದೇಶದಲ್ಲಿರುವ ಇಟ್ಟಿಗೆ ಬೇಯಿಸುವ (ಸುಡುವ) ಗೂಡು ಸ್ಫೋಟಗೊಂಡಿದ್ದು, ಇದರಲ್ಲಿ ಇಟ್ಟಿಗೆ ಕಾರ್ಖಾನೆಯ ಮಾಲೀಕ ಮೊಹಮ್ಮದ್ ಇಶ್ರಾರ್ ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ.
ಇಟ್ಟಿಗೆ ಬೇಯಿಸುವ ಗೂಡಿನಲ್ಲಿದ್ದ ಹೊಗೆ ಕೊಳವೆಯೇ ಒಡೆದು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೇ, ಗಾಯಗೊಂಡವರನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದೊಡ್ಡಮಟ್ಟದ ಸ್ಫೋಟವೇ ಆಗಿದ್ದರಿಂದ ಸ್ಥಳಕ್ಕೆ ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ ಸಿಬ್ಬಂದಿಯೂ ತೆರಳಿದ್ದರು.
ಘಟನೆಯ ಬಗ್ಗೆ ವರದಿ ಪಡೆದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಹಾಗೇ, ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ. ಸ್ಫೋಟಕ್ಕೆ ಕಾರಣವೇನು ಎಂದು ತನಿಖೆ ಆರಂಭವಾಗಿದೆ.
ಇದನ್ನೂ ಓದಿ: Bomb Blast | ಪಾಲಾರ್ ಸ್ಫೋಟ ಅಪರಾಧಿ, ವೀರಪ್ಪನ್ ಸಹಚರನಿಗೆ ಜಾಮೀನು; ಮಾನವೀಯ ನೆಲೆಯಲ್ಲಿ ಸುಪ್ರೀಂ ಆದೇಶ