Site icon Vistara News

Fact Check: ಅಮುಲ್‌ನಿಂದ ʼಶರಮ್‌ʼ ಹೆಸರಿನ ಚೀಸ್ ಬಿಡುಗಡೆ?

amul

amul

ನವದೆಹಲಿ: ಇತ್ತೀಚೆಗೆ ಶರಮ್ (Sharam) ಹೆಸರಿನ ಅಮುಲ್ ಚೀಸ್ (Amul cheese) ಪ್ಯಾಕೆಟ್‌ನ ಪೋಸ್ಟ್ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಇದನ್ನು ʼಶರಮ್ ನಾಮ್ ಕಿ ಚೀಜ್ ಭಿ ಹೋತಿ ಹೈʼ (Sharam naam ki cheez bhi hoti hai) ಎಂಬ ಹಿಂದಿ ನುಡಿಗಟ್ಟನ್ನು ಆಧರಿಸಿ ಪೋಸ್ಟ್‌ ಮಾಡಲಾಗಿತ್ತು. ನಾಚಿಕೆಯಿಲ್ಲದ ಯಾರಾದರೂ ವರ್ತಿಸುವಾಗ ಸಾಮಾನ್ಯವಾಗಿ ಈ ನುಡಿಗಟ್ಟನ್ನು ಬಳಸಲಾಗುತ್ತದೆ. ವೈರಲ್ ಪೋಸ್ಟ್‌ನಲ್ಲಿ ಹಿಂದಿಯ ʼಚೀಜ್ʼ ಅನ್ನು ಇಂಗ್ಲಿಷ್‌ನ ʼಚೀಸ್‌ʼ ಆಗಿ ಅನುವಾದಿಸಲಾಗಿದೆ. ಈ ವೈರಲ್‌ ಪೋಸ್ಟ್‌ನಲ್ಲಿ ಚೀಸ್ ತುಂಡಿನ ಚಿತ್ರವನ್ನು ಪ್ಯಾಕೆಟ್ ಮೇಲೆ ಮುದ್ರಿಸಿರುವುದು ಕಂಡು ಬಂದಿದೆ. ಈ ಕುರಿತು ಸ್ಪಷ್ಟನೆ ನೀಡಿದ ಅಮುಲ್‌, ʼʼಕಂಪನಿ ಇಂತಹ ಯಾವುದೇ ಉತ್ಪನ್ನ ಹೊರ ತಂದಿಲ್ಲʼʼ ಎಂದು (Fact Check) ಸ್ಪಷ್ಟಪಡಿಸಿದೆ.

ಅಮುಲ್‌ ಹೇಳಿದ್ದೇನು?

ಅಮುಲ್ ಇದಕ್ಕೆ ಪ್ರತಿಕ್ರಿಯಿಸಿ, ಇದು ನಮ್ಮ ಉತ್ಪನ್ನವಲ್ಲ ಮತ್ತು ಕೃತಕ ಬುದ್ಧಿಮತ್ತೆ (Artificial intelligence) ತಂತ್ರಜ್ಞಾನವನ್ನು ಬಳಸಿಕೊಂಡು ಚಿತ್ರವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದೆ. ಅಲ್ಲದೆ ಬ್ರ್ಯಾಂಡ್‌ನ ಅನುಮತಿಯಿಲ್ಲದೆ ಪೋಸ್ಟ್‌ ರಚಿಸಿ ಪೋಸ್ಟ್ ಹರಿಯಬಿಡಲಾಗಿದೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಮುಲ್‌ ಸ್ಪಷ್ಟಪಡಿಸಿದೆ.

“ಹೊಸ ರೀತಿಯ ಅಮುಲ್ ಚೀಸ್‌ಗೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್‌ ಮತ್ತು ಸೋಷಿಯಲ್‌ ಮೀಡಿಯಾಗಳಲ್ಲಿ ನಕಲಿ ಸಂದೇಶವನ್ನು ಫಾರ್ವರ್ಡ್ ಮಾಡಲಾಗುತ್ತಿದೆ. ಪೋಸ್ಟ್‌ನ ಸೃಷ್ಟಿಕರ್ತರು ನಮ್ಮಿಂದ ಯಾವುದೇ ಅನುಮತಿಯಿಲ್ಲದೆ ಇದನ್ನು ಪೋಸ್ಟ್ ಮಾಡಿದ್ದಾರೆ. ಈ ಪ್ಯಾಕ್ ಅನ್ನು ಎಐ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಅಮುಲ್ ಬ್ರ್ಯಾಂಡ್‌ ಅನ್ನು ಕಳಪೆಯಂತೆ ಚಿತ್ರಿಸಲಾಗಿದೆʼʼ ಎಂದು ಕಂಪನಿ ಹೇಳಿದೆ.

“ಈ ಪೋಸ್ಟ್‌ನಲ್ಲಿ ತೋರಿಸಿರುವ ಪ್ಯಾಕ್ ಅಮುಲ್ ಚೀಸ್ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತೇವೆ. ಈ ಪೋಸ್ಟ್ ಅನ್ನು ತಪ್ಪು ಮಾಹಿತಿಯನ್ನು ಹರಡಲು ಮತ್ತು ಗ್ರಾಹಕರಲ್ಲಿ ಅನಗತ್ಯ ಭಯ ಹಾಗೂ ಗೊಂದಲವನ್ನು ಮೂಡಿಸಲು ಬಳಸಲಾಗಿದೆ. ದಯವಿಟ್ಟು ನಮ್ಮ ಈ ಸಂದೇಶವನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಅಮುಲ್ ಎಂದಿಗೂ ಅತ್ಯುತ್ತಮ ಉತ್ಪನ್ನಗಳನ್ನು ಒದಗಿಸುವ ಭರವಸೆ ನೀಡುತ್ತದೆʼʼ ಎಂದು ಕಂಪನಿ ಹೇಳಿದೆ.

ಹಿಂದೆಯೂ ಸುಳ್ಳು ಸುದ್ದಿ ಹರಡಿತ್ತು

ಅಮುಲ್‌ ಉತ್ಪನ್ನಗಳ ವಿರುದ್ಧ ಹಿಂದೆಯೂ ಪಿತೂರಿ ನಡೆದಿತ್ತು. ಅಮುಲ್ ಬೆಣ್ಣೆಯನ್ನು ಚೀನಾದಲ್ಲಿ ಪ್ಯಾಕ್ ಮಾಡಲಾಗುತ್ತಿದೆ ಎಂದು ಕಳೆದ ವರ್ಷ ಫೆಬ್ರವರಿಯಲ್ಲಿ ನಕಲಿ ಸಂದೇಶ ಪ್ರಸಾರವಾಗಿತ್ತು. ಕೂಡಲೇ ಎಚ್ಚೆತ್ತ ಕಂಪನಿಯು ಇದು ನಕಲಿ ಸಂದೇಶ ಎಂದು ಸ್ಪಷ್ಟನೆ ನೀಡಿತ್ತು. ಸುಳ್ಳು ಸುದ್ದಿ ಹಬ್ಬಿಸುವವರಿಗೆ ನೋಟಿಸ್ ರವಾನಿಸಿ, ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿತ್ತು.

ನಕಲಿ ಉತ್ಪನ್ನ ಮತ್ತು ಕಂಪನಿಯ ನಿಜವಾದ ಉತ್ಪನ್ನಗಳನ್ನು ಹೋಲಿಕೆ ಮಾಡುವ ವಿಡಿಯೊವನ್ನು ಪೋಸ್ಟ್‌ ಮಾಡಿ, ತಪ್ಪು ಮಾಹಿತಿಯನ್ನು ಸೃಷ್ಟಿಸಿ ಗ್ರಾಹಕರಲ್ಲಿ ಭಯ ಮತ್ತು ಗೊಂದಲ ಮೂಡಲು ಬಳಸಲಾಗಿದೆ ಎಂದು ಹೇಳಿತ್ತು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಸೂಚನೆಯ ಪ್ರಕಾರ, ಎಲ್ಲ ಹಾಲಿನ ಉತ್ಪನ್ನಗಳು ಪ್ಯಾಕ್‌ನ ಮುಂಭಾಗದಲ್ಲಿ ವೆಜ್ ಲೋಗೋವನ್ನು ತೋರಿಸುವುದು ಕಡ್ಡಾಯ ಅದನ್ನೂ ಗಮನಿಸುವಂತೆ ಹೇಳಿತ್ತು.

ಇದನ್ನೂ ಓದಿ: Fact Check: ಸ್ಟಾರ್ ಗುರುತಿರುವ 500 ರೂಪಾಯಿ ನೋಟು ನಕಲಿಯೇ?

Exit mobile version