ನವದೆಹಲಿ: ವಿಚಾರ ವಿನಿಯಮ, ಸುದ್ದಿ-ಮಾಹಿತಿ ತಿಳಿಯುವುದು, ಮನರಂಜನೆ, ಜಗತ್ತಿನ ಜತೆ ಸಂಪರ್ಕ ಸಾಧಿಸುವ ದಿಸೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಸಾಮಾಜಿಕ ಜಾಲತಾಣಗಳನ್ನು ಇತ್ತೀಚೆಗೆ ನಕಾರಾತ್ಮಕವಾಗಿ ಬಳಸಿಕೊಳ್ಳಲಾಗುತ್ತಿದೆ. ಅದರಲ್ಲೂ, ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ನಕಲಿ ಸುದ್ದಿಗಳು ಸಮಾಜದ ಸಾಮರಸ್ಯ ಕದಡಲು ಕಾರಣವಾಗುತ್ತಿವೆ. ಸುಳ್ಳು ಸುದ್ದಿಗಳು ಜನರಿಗೆ ಆತಂಕ ತಂದೊಡ್ಡುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, “ಕೇಂದ್ರ ಸರ್ಕಾರವು ಜನರ ವಾಟ್ಸ್‌ಆ್ಯಪ್ ಚಾಟ್‌ಗಳ ಮೇಲೆ ನಿಗಾ ಇಡಬಹುದು” ಎಂಬ ವದಂತಿ (Fact Check) ಹರಿದಾಡುತ್ತಿದೆ. ಇದು ಜನರಲ್ಲಿ ಆತಂಕ ಮೂಡಿಸಿದೆ.
ಏನಿದು ವದಂತಿ?
ನೀವು ಕಳುಹಿಸುವ ವಾಟ್ಸ್‌ಆ್ಯಪ್ ಮೆಸೇಜ್‌ಗಳನ್ನು ಕೇಂದ್ರ ಸರ್ಕಾರ ಗಮನಿಸುತ್ತದೆ. ನೀವು ಕಳುಹಿಸಿದ ಮೆಸೇಜ್‌ಗೆ ಒಂದು ಟಿಕ್ ಬಂದರೆ ಅದು ಸೆಂಡ್ ಆಗಿದೆ ಎಂದರ್ಥ. ಎರಡು ಬ್ಲ್ಯೂ ಟಿಕ್ ಬಂದರೆ ಮೆಸೇಜ್‌ಅನ್ನು ನೀವು ಯಾರಿಗೆ ಕಳುಹಿಸಿದ್ದೀರೋ ಅವರು ಓದಿದ್ದಾರೆ ಎಂಬ ಅರ್ಥ. ಆದರೆ, ಮೂರು ಬ್ಲ್ಯೂ ಟಿಕ್ ಕಾಣಿಸಿದರೆ ಆ ಮೆಸೇಜ್‌ಅನ್ನು ಕೇಂದ್ರ ಸರ್ಕಾರ ಗಮನಿಸಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂಬ ಮಾಹಿತಿ ಹರಿದಾಡಿದೆ.
ಅಷ್ಟೇ ಅಲ್ಲ, ಎರಡು ಬ್ಲ್ಯೂ ಟಿಕ್ ಹಾಗೂ ಒಂದು ರೆಡ್ ಟಿಕ್ ಬಂದರೆ ಸರ್ಕಾರ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ. ಒಂದು ಬ್ಲ್ಯೂ ಟಿಕ್ ಹಾಗೂ ಎರಡು ರೆಡ್ ಟಿಕ್ ಬಂದರೆ ಸರ್ಕಾರ ನಿಮ್ಮ ಮಾಹಿತಿಯನ್ನು ಪರಿಶೀಲಿಸುತ್ತಿದೆ. ಹಾಗೆಯೇ, ಮೂರು ರೆಡ್ ಟಿಕ್ ಬಂದರೆ ಸರ್ಕಾರ ನಿಮ್ಮ ವಿರುದ್ಧ ಕ್ರಮ ತೆಗೆದುಕೊಂಡಿದೆ ಹಾಗೂ ನಿಮಗೆ ಕೋರ್ಟ್‌ನಿಂದ ಸಮನ್ಸ್ ಬರಲಿದೆ ಎಂಬ ಸುದ್ದಿ ಹರಿದಾಡಿತ್ತು.
ಇದನ್ನೂ ಓದಿ: Fact Check Unit: ಪೊಲೀಸರಿಂದಲೇ ಫ್ಯಾಕ್ಟ್ ಚೆಕ್ ಯುನಿಟ್, ಇನ್ನು ಫೇಕ್ ನ್ಯೂಸ್ ಹರಡಿದ್ರೆ ಹುಷಾರ್!
ವಾಸ್ತವ ಏನು?
ವಾಟ್ಸ್‌ಆ್ಯಪ್ ಮೆಸೇಜ್‌ಗಳ ಮೇಲೆ ಕೇಂದ್ರ ಸರ್ಕಾರ ನಿಗಾ ಇಡುವ ವದಂತಿಯನ್ನು ಕೇಂದ್ರ ಸರ್ಕಾರದ ಫ್ಯಾಕ್ಟ್ ಚೆಕ್ ಘಟಕವಾದ ಪಿಐಬಿ ಫ್ಯಾಕ್ಟ್ ಚೆಕ್ ನಿರಾಕರಿಸಿದೆ. “ಇದು ನಕಲಿ ಮೆಸೇಜ್. ಸರ್ಕಾರ ಅಂತಹ ಯಾವುದೇ ಮಾರ್ಗಸೂಚಿ ಹೊರಡಿಸಿಲ್ಲ” ಎಂದು ಸ್ಪಷ್ಟಪಡಿಸಿದೆ. “ಮೆಸೇಜ್ ಕಳುಹಿಸುವವರ ಗೌಪ್ಯತೆಯನ್ನು ಮೆಟಾ ಕಾಪಾಡುತ್ತದೆ. ನಿಮ್ಮ ಮೆಸೇಜ್‌ಗಳನ್ನು ಬೇರೆಯವರು ಯಾರೂ ಓದುವುದಿಲ್ಲ” ಎಂದು ಈಗಾಗಲೇ ಮೆಟಾ ಸ್ಪಷ್ಟಪಡಿಸಿದೆ. ಸದ್ಯ ಮೆಸೇಜ್ ಕಳುಹಿಸಿದರೆ ಎರಡೇ ಟಿಕ್‌ಗಳು ಇವೆ.