ಬೆಂಗಳೂರು: ಶತಕೋಟಿ ಭಾರತೀಯರ ಕನಸಾಗಿರುವ ಚಂದ್ರಯಾನ 3 (Chandrayaan- 3) ಮಿಷನ್ ಕೊನೆಯ ಹಂತಕ್ಕೆ ಬಂದಿದೆ. ಇಸ್ರೋ ವಿಜ್ಞಾನಿಗಳು (ISRO Scientists) ಸತತವಾಗಿ ಶ್ರಮವಹಿಸಿ ಮಿಷನ್ ಸಿದ್ಧಗೊಳಿಸಿದ್ದು, ಮಿಷನ್ ಯಶಸ್ವಿಯಾದರೆ ಅವರು ಇತಿಹಾಸ ಸೃಷ್ಟಿಸಲಿದ್ದಾರೆ. ಹಾಗಾಗಿ ಭಾರತೀಯರು ಮಾತ್ರವಲ್ಲ, ಜಗತ್ತಿನ ಗಮನವೇ ಈಗ ಇಸ್ರೋ ವಿಜ್ಞಾನಿಗಳ ಮೇಲಿದೆ. ಇದರ ಬೆನ್ನಲ್ಲೇ, ಚಂದ್ರಯಾನ 3 ಮಿಷನ್‌ನಲ್ಲಿ ತೊಡಗಿರುವ ಇಸ್ರೋ ವಿಜ್ಞಾನಿಗಳಿಗೆ ಕಳೆದ ಮೂರು ತಿಂಗಳಿಂದ ಸಂಬಳ ನೀಡಿಲ್ಲ ಎಂಬ ಆರೋಪಗಳು (Fact Check) ಕೇಳಿಬಂದಿವೆ.
ಏನಿದು ಆರೋಪ?
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ದಿ ರಣವೀರ್ ಶೋ ಪಾಡ್‌ಕಾಸ್ಟ್‌ನಲ್ಲಿ ಪಾಲ್ಗೊಂಡಿದ್ದ ಖ್ಯಾತ ಯುಟ್ಯೂಬರ್ ತೆಹ್ಸೀನ್ ಪೂನಾವಾಲಾ, ಚಂದ್ರಯಾನ 3 ಮಿಷನ್‌ನಲ್ಲಿ ತೊಡಗಿರುವ ಇಸ್ರೋ ವಿಜ್ಞಾನಿಗಳಿಗೆ ಮೂರು ತಿಂಗಳಿಂದ ಸಂಬಳ ನೀಡಿಲ್ಲ ಎಂದು ಹೇಳಿದ್ದರು. “ಇಸ್ರೋ ವಿಜ್ಞಾನಿಗಳಿಗೆ ಮೂರು ತಿಂಗಳಿಂದ ಸಂಬಳ ಕೊಟ್ಟಿಲ್ಲ. ಇದು ಸರಿಯೇ? ನನಗೆ ಈ (ಕೇಂದ್ರ) ಸರ್ಕಾರದ ಮೇಲೆ ಇದೇ ಕಾರಣಕ್ಕೆ ಸಿಟ್ಟು ಬರುತ್ತದೆ. ನಮಗೆ ಇಸ್ರೋ ಬಗ್ಗೆ ಹೆಮ್ಮೆ ಇದೆ. ಅದೊಂದು ಅದ್ಭುತ ಸಂಸ್ಥೆ. ಆದರೆ, ಅವರಿಗೆ ಮೂರು ತಿಂಗಳಿಂದ ಸಂಬಳ ನೀಡಿಲ್ಲ. ನೀವು ಬೇಕಾದರೆ ಇದನ್ನು ಪರಿಶೀಲಿಸಬಹುದು” ಎಂದು ಹೇಳಿದ್ದರು.
ವಾಸ್ತವ ಏನು?
ನಕಲಿ ಸುದ್ದಿಗಳ ಕುರಿತು ಫ್ಯಾಕ್ಟ್ ಚೆಕ್ ಮಾಡಿ, ವಾಸ್ತವಾಂಶ ತಿಳಿಸುವ ಪಿಐಬಿ ಫ್ಯಾಕ್ಟ್‌ಚೆಕ್ ಈ ಕುರಿತು ಮಾಹಿತಿ ನೀಡಿದ್ದು, ತೆಹ್ಸೀನ್ ಪೂನಾವಾಲಾ ಹೇಳಿದ್ದು ಸುಳ್ಳು ಎಂದು ತಿಳಿಸಿದೆ. “ಈ ವದಂತಿ ಸುಳ್ಳು. ಇಸ್ರೋ ವಿಜ್ಞಾನಿಗಳು ಪ್ರತಿ ತಿಂಗಳ ಕೊನೆಯ ದಿನದಂದು ಸಂಬಳ ಪಡೆಯುತ್ತಾರೆ” ಎಂದು ಪೂನಾವಾಲಾ ಆರೋಪವನ್ನು ಅಲ್ಲಗಳೆದಿದೆ. ತೆಹ್ಸೀನ್ ಪೂನಾವಾಲಾ ಅವರು ಉದ್ಯಮಿ ಕೂಡ ಆಗಿದ್ದಾರೆ. ಅವರು ರಾಜಕೀಯ ವಿಶ್ಲೇಷಣೆಯನ್ನೂ ಮಾಡುತ್ತಾರೆ.
ಇದನ್ನೂ ಓದಿ: Chandrayaan 3: ನನಸಾಗುವತ್ತ ಶತಕೋಟಿ ಭಾರತೀಯರ ಚಂದ್ರಯಾನ ಕನಸು; ಇಂದು ಮಹತ್ವದ ಘಟ್ಟ
ಸವಾಲು ಹಾಕಿದ ಬಿಜೆಪಿ ವಕ್ತಾರ ಶೆಹಜಾದ್
ತೆಹ್ಸೀನ್ ಪೂನಾವಾಲಾ ಅವರು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರ ಸಹೋದರರೂ ಆಗಿದ್ದಾರೆ. ಇನ್ನು ಈ ಹೇಳಿಕೆ ನೀಡಿದ ತೆಹ್ಸೀನ್ ಪೂನಾವಾಲಾ ಅವರಿಗೆ ಶೆಹಜಾದ್ ಪೂನಾವಾಲಾ ಅವರು ಸವಾಲು ಹಾಕಿದ್ದಾರೆ. “ಇಸ್ರೋದಲ್ಲಿ ಸಂಬಳ ಪಡೆಯದ 10 ವಿಜ್ಞಾನಿಗಳ ಹೆಸರು ಹಾಗೂ ಅವರ ಹುದ್ದೆಯ ಕುರಿತು ಮಾಹಿತಿ ಕೊಡಿ ನೋಡೋಣ. ಸತ್ಯಾಂಶ ಇಲ್ಲದ, ಹುರುಳಿಲ್ಲದ ಆರೋಪ ಮಾಡುವುದು ನಿಮಗೆ ರೂಢಿಯಾಗಿದೆ. ಮಕ್ಕಳಂತೆ ವಿಶ್ಲೇಷಣೆ ಮಾಡುವ ಪ್ರವೃತ್ತಿ ಮೊದಲು ನಿಲ್ಲಲಿ” ಎಂದು ಶೆಹಜಾದ್ ತಿರುಗೇಟು ನೀಡಿದ್ದಾರೆ. ಆದಾಗ್ಯೂ, ತೆಹ್ಸೀನ್ ಪೂನಾವಾಲಾ ಅವರು ಸಹೋದರನ ಸವಾಲು ಸ್ವೀಕರಿಸಿಲ್ಲ ಎಂದು ತಿಳಿದುಬಂದಿದೆ.