ಶಿಮ್ಲಾ : ಹಿಮಾಚಲ ಪ್ರದೇಶ ವಿಧಾನ ಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ (Himachal Pradesh Election) ಕಳೆಗಟ್ಟುತ್ತಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತುರುಸಿನ ಪೈಪೋಟಿ ನಡೆಯುತ್ತಿದೆ. ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು ಕಾಂಗ್ರೆಸ್ ಮುನ್ನಡೆಯ ಹಾದಿಯಲ್ಲಿದೆ. ಮಧ್ಯಾಹ್ನದ ವೇಳೆಗೆ ಕಾಂಗ್ರೆಸ್ ೩೭ ಸ್ಥಾನಗಳನ್ನು ಗೆದ್ದುಕೊಂಡಿದ್ದರೆ ಬಿಜೆಪಿ ೨೮ ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಅಂತೆಯೇ ಮೂವರು ಪಕ್ಷೇತರರೂ ಗೆಲುವಿನ ಹಾದಿಯನ್ನು ಕಂಡುಕೊಂಡಿದ್ದು ಅವರಲ್ಲಿ ಎಲ್ಲರೂ ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿದ್ದಾರೆ.
ಹಿನ್ನಡೆಯ ಹೊರತಾಗಿಯೂ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಉದ್ದೇಶದೊಂದಿಗೆ ಬಿಜೆಪಿ ಕಾರ್ಯಾಚರಣೆ ಆರಂಭಿಸಿದೆ. ಹಿಮಾಚಲ ಪ್ರದೇಶದಲ್ಲಿ ಮ್ಯಾಜಿಕ್ ನಂಬರ್ ೩೫. ಹೀಗಾಗಿ ಪಕ್ಷೇತರರನ್ನು ಬಳಸಿಕೊಂಡು ಸರಕಾರ ರಚಿಸುವ ಕಡೆಗೆ ಬಿಜೆಪಿ ಚಿತ್ತಹರಿಸಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನಿವಿಸ್ ಅವರು ಪಕ್ಷೇತ್ರರ ಅಭ್ಯರ್ಥಿಗಳನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ ಎಂಬುದಾಗಿ ವರದಿಯಾಗಿದೆ.
ಪ್ರಮುಖವಾಗಿ ಡೆಹ್ರಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಹೊಶಿಯಾರ್ ಸಿಂಗ್ ಅವರೊಂದಿಗೆ ಫಡ್ನವಿಸ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಹೋಶಿಯಾರ್ ಸಿಂಗ್ ಅವರು ಆರೋಗ್ಯ ಸಮಸ್ಯೆ ಎದುರಾದಾಗ ಮುಂಬಯಿಯ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ವೇಳೆ ಮಹಾರಾಷ್ಟ್ರ ಬಿಜೆಪಿ ನಾಯಕರಾಗಿರುವ ಫಡ್ನವಿಸ್ ಜತೆ ಸಂಪರ್ಕ ಸಾಧಿಸಿದ್ದರು. ಇದೇ ಪರಿಚಯದ ಮೇಲೆ ಇದೀಗ ಫಡ್ನವಿಸ್ ಅವರು ಹೋಶಿಯಾರ್ ಸಿಂಗ್ ಅವರ ಜತೆ ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆದ ಬಳಿಕ ಕಣದಲ್ಲಿದ್ದ ೨೧ ಪಕ್ಷೇತರ ಅಭ್ಯರ್ಥಿಗಳ ಜತೆ ಬಿಜೆಪಿ ಸಂಪರ್ಕ ಸಾಧಿಸಿಕೊಂಡಿತ್ತು ಎಂದು ಹೇಳಲಾಗಿದೆ. ಪಕ್ಷಕ್ಕೆ ಪೂರ್ಣ ಬಹುಮತ ಬರದೇ ಹೋದರೆ ಈ ಅಭ್ಯರ್ಥಿಗಳ ನೆರವು ಪಡೆಯುವುದಕ್ಕೆ ಬಿಜೆಪಿ ನಾಯಕರು ಈ ಹಿಂದೆಯೇ ಯೋಜನೆ ರೂಪಿಸಿದ್ದರು.
ಇದನ್ನೂ ಓದಿ | Election Result 2022 | ಗುಜರಾತ್‌ನಲ್ಲಿ ಐತಿಹಾಸಿಕ ಜಯದತ್ತ ಬಿಜೆಪಿ ದಾಪುಗಾಲು, ಹಿಮಾಚಲದಲ್ಲಿ ಕಾಂಗ್ರೆಸ್ ಮುನ್ನಡೆ