Site icon Vistara News

Ram Mandir: ಅಯೋಧ್ಯೆಗೆ ಆಹ್ವಾನಿಸಿ WhatsApp ಮೆಸೇಜ್‌ ಬಂದರೆ ಎಚ್ಚರ; ಅದು ನಕಲಿ

Ram Mandir

Fake Ayodhya Ram Mandir pran pratishtha invites target religious zeal on WhatsApp

ನವದೆಹಲಿ: ಜನವರಿ 22ರಂದು ಅಯೋಧ್ಯೆಯ ರಾಮಮಂದಿರ (Ram Mandir) ಉದ್ಘಾಟನೆಯ ವಿಚಾರವು ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ಹಾಗೆಯೇ, ಆನ್‌ಲೈನ್‌ ವಂಚಕರು, ಸೈಬರ್‌ ಅಪರಾಧಿಗಳು ಕೂಡ ರಾಮಮಂದಿರ ಉದ್ಘಾಟನೆ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದಾರೆ. ಹೌದು, ರಾಮಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸಲಾಗಿದೆ ಎಂದು ವಾಟ್ಸ್‌ಆ್ಯಪ್‌ಗೆ ಮೆಸೇಜ್‌ (Fake Invitation) ಕಳುಹಿಸುತ್ತಿದ್ದು, ಅವರು ಕಳುಹಿಸಿದ ಎಪಿಕೆ ಫೈಲ್‌ (APK File) ಮೇಲೆ ಕ್ಲಿಕ್‌ ಮಾಡಿದರೆ ಮೊಬೈಲ್‌ ಹ್ಯಾಕ್‌ ಆಗುತ್ತಿವೆ. ಹಾಗಾಗಿ, ಜನರು ವಾಟ್ಸ್‌ಆ್ಯಪ್‌ ಮೆಸೇಜ್‌ ಕುರಿತು ಜಾಗ್ರತೆಯಿಂದ ಇರಬೇಕಾಗಿದೆ.

ರಾಮಮಂದಿರ ಉದ್ಘಾಟನೆಯ ನಕಲಿ ಆಮಂತ್ರಣ ಪತ್ರಿಕೆ ಇದಾಗಿದ್ದು, ಕೇವಲ ಎಪಿಕೆ ಫೈಲ್‌ ಇರುತ್ತದೆ. ಅವರು ಕಳುಹಿಸಿದ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ, ಮೊಬೈಲ್‌ಗೆ ಮಾಲ್‌ವೇರ್‌ ಅಟ್ಯಾಕ್‌ ಆಗುತ್ತದೆ. ಆಗ ಹ್ಯಾಕರ್‌ಗಳು ಸುಲಭವಾಗಿ ಮೊಬೈಲ್‌ಅನ್ನು ಹ್ಯಾಕ್‌ ಮಾಡಬಹುದಾಗಿದೆ. ಇದರಿಂದಾಗಿ ಸ್ಮಾರ್ಟ್‌ಫೋನ್‌ ಬಳಕೆದಾರರು ಹಣ ಕಳೆದುಕೊಳ್ಳುವ, ವೈಯಕ್ತಿಕ ಮಾಹಿತಿ, ದಾಖಲೆಗಳು ಹ್ಯಾಕರ್‌ಗಳ ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನಕಲಿ ಆಮಂತ್ರಣ ಪತ್ರಿಕೆಗಳನ್ನು ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸುತ್ತಿರುವ ಕುರಿತು ದೂರುಗಳು ಕೂಡ ಕೇಳಿಬಂದಿವೆ.

cyber crime

ಕೇಂದ್ರ ಸರ್ಕಾರವಾಗಲಿ, ರಾಮಮಂದಿರ ಟ್ರಸ್ಟ್‌ ಆಗಲಿ, ಇದುವರೆಗೆ ಜನರು, ವಿಐಪಿಗಳನ್ನು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಲು ಯಾವುದೇ ಆ್ಯಪ್‌ಅನ್ನು ಅಭಿವೃದ್ಧಿಪಡಿಸಿಲ್ಲ. ಹಾಗಾಗಿ, ಯಾರೂ ವಾಟ್ಸ್‌ಆ್ಯಪ್‌ಗೆ ಬರುವ ಸಂದೇಶಗಳು, ಲಿಂಕ್‌ಗಳು ಹಾಗೂ ಫೈಲ್‌ಗಳ ಮೇಲೆ ಕ್ಲಿಕ್‌ ಮಾಡಬಾರದು. ರಾಮಮಂದಿರ ಟ್ರಸ್ಟ್‌ನಿಂದ ನೇರವಾಗಿಯೇ ಸೆಲೆಬ್ರಿಟಿಗಳು, ಗಣ್ಯರಿಗೆ ಆಮಂತ್ರಣ ಪತ್ರಿಕೆ ನೀಡಲಾಗಿದೆ. ಡಿಜಿಟಲ್‌ ಆಮಂತ್ರಣ ಪತ್ರಿಕೆಗಳನ್ನು ಯಾರಿಗೂ ಕಳುಹಿಸಿಲ್ಲ.

ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹಿತ ಹಲವು ಉನ್ನತ ಮಟ್ಟದ ನಾಯಕರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಅಯೋಧ್ಯೆಯಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಈಗಾಗಲೇ ನಗರದಲ್ಲಿ 10,000 ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಮಾತ್ರವಲ್ಲ ಸಮಾರಂಭದ ದಿನ ಡ್ರೋನ್‌ ಮೂಲಕ ಕಣ್ಗಾವಲು ಇಡಲಾಗುತ್ತದೆ. ಜತೆಗೆ ಈ ಪ್ರದೇಶದಲ್ಲಿ ಯಾವುದೇ ಅನಧಿಕೃತ ಡ್ರೋನ್ ಹಾರಾಡುತ್ತಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಆ್ಯಂಟಿ ಡ್ರೋನ್‌ ಸಿಸ್ಟಮ್‌ (Anti-drone system) ಜಾರಿಗೊಳಿಸಲಾಗುವುದು ಎಂದು ಭದ್ರತಾ ಎಸ್‌ಪಿ ಗೌರವ್ ವನ್ಸ್‌ವಾಲ್‌ ತಿಳಿಸಿದ್ದಾರೆ.

ಇದನ್ನೂ ಓದಿ: Ram Mandir: ಉದ್ಘಾಟನೆಗೆ ಸಜ್ಜಾಗಿರುವ ರಾಮಮಂದಿರ ಹೇಗಿದೆ? ಇಲ್ಲಿವೆ ಹೊಸ ಫೋಟೊಗಳು

ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ 55 ದೇಶಗಳಿಂದ ಸುಮಾರು 100ಕ್ಕೂ ಅಧಿಕ ಗಣ್ಯರು ಅಯೋಧ್ಯೆಗೆ ಆಗಮಿಸಲಿದ್ದಾರೆ. ಜರ್ಮನಿ, ಫಿಜಿ, ಫಿನ್‌ಲ್ಯಾಂಡ್‌, ಅಮೆರಿಕ, ಬ್ರಿಟನ್‌, ಜರ್ಮನಿ, ಇಂಡೋನೇಷ್ಯಾ, ಐರ್ಲೆಂಡ್‌, ಜಪಾನ್‌, ಕೀನ್ಯಾ, ಕೊರಿಯಾ, ಮಾರಿಷಸ್‌, ನಾರ್ವೆ ಸೇರಿ 55 ದೇಶಗಳ ಗಣ್ಯರು ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಿಂಗಾಪುರ, ಸ್ಪೇನ್‌, ಶ್ರೀಲಂಕಾ, ಜಾಂಬಿಯಾ, ವಿಯೇಟ್ನಾಂ, ಉಗಾಂಡ, ವೆಸ್ಟ್‌ ಇಂಡೀಸ್‌ ದೇಶಗಳ ನಾಯಕರು ಕೂಡ ಪಟ್ಟಿಯಲ್ಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version